ಲಂಡನ್, ಸೆ. 7: ʼʼಹಿಂದೂ ಧರ್ಮ ಸಾಂಸ್ಕೃತಿಕ ಗುರುತು ಮತ್ತು ಜೀವನವನ್ನು ಅರ್ಥ ಮಾಡಿಕೊಳ್ಳಲಿರುವ ಮಾರ್ಗ. ಹಿಂದೂ ಎಂದು ಹೇಳಿದಾಗ ಅದು ಒಂದು ಧರ್ಮವಲ್ಲ, ಅದು ಪೂಜೆ ಮಾತ್ರವಲ್ಲ. ಹಿಂದೂ ರಾಷ್ಟ್ರದ ಉದ್ದೇಶವು ವೈವಿಧ್ಯತೆಯು ನೈಸರ್ಗಿಕ, ಏಕತೆ ಸತ್ಯ ಎಂಬ ಸಂದೇಶವನ್ನು ಜಗತ್ತಿಗೆ ಸಾರುವುದುʼʼ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ತಿಳಿಸಿದರು. ಇಂಗ್ಲೆಂಡ್ ರಾಜಧಾನಿ ಲಂಡನ್‌ನಲ್ಲಿ ಭಾನುವಾರ (ಸೆಪ್ಟೆಂಬರ್ 6) ಅವರು ಮಾತನಾಡಿದರು. ಆರ್‌ಎಸ್‌ಎಸ್ ಶತಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ʼʼಇತರ ಎಲ್ಲ ಧರ್ಮಗಳು ಸಹ ಸತ್ಯ ಎಂದು ಹಿಂದೂ ಧರ್ಮ ಹೇಳುತ್ತದೆ. ನಾಸ್ತಿಕತೆಯಿಂದ ಬಹುದೇವತಾವಾದದವರೆಗೆ ಭಾರತದಲ್ಲಿ ಎಲ್ಲ ರೀತಿಯ ಆಲೋಚನೆಗಳು ಹೊರಹೊಮ್ಮಿದವು. ಹಿಂದೂ ಎಂದರೆ ಎಲ್ಲ ವೈವಿಧ್ಯತೆಗಳನ್ನು ಸ್ವೀಕರಿಸುವ ಸ್ವಭಾವವನ್ನು ಹೊಂದಿರುವ ಪ್ರಕೃತಿ ಮತ್ತು ಸಮಾಜ" ಎಂದು ಅವರು ಪ್ರತಿಪಾದಿಸಿದರು. "ಹಿಂದೂ ಧರ್ಮ ಅನುಸರಿಸುವವರು ಕುಟುಂಬ, ಸಮುದಾಯ, ಸಮಾಜ ಮತ್ತು ಮಾನವೀಯತೆಯೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಒಬ್ಬ ಹಿಂದೂ ಪ್ರಕೃತಿಯನ್ನು ಪೂಜಿಸುವುದಲ್ಲದೆ, ಪ್ರೀತಿಸುತ್ತಾನೆ" ಎಂದು ಹೇಳಿದರು.
ಮೋಹನ್ ಭಾಗವತ್ ಅವರ ಭಾಷಣ:
ಹಿಂದೂ ಚಿಂತನೆ
"ವೈವಿಧ್ಯತೆ ಸಹಜ. ಆದ್ದರಿಂದ ನಾವು ಅದನ್ನು ಸ್ವೀಕರಿಸುತ್ತೇವೆ ಮತ್ತು ಗೌರವಿಸುತ್ತೇವೆ. ಏಕತೆಯ ವಿವಿಧ ಭಾಗ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ವೈವಿಧ್ಯತೆಯನ್ನು ಎದುರಿಸಬೇಕು. ಇದು ಹಿಂದೂ ಚಿಂತನೆ. ವ್ಯಕ್ತಿ, ಸಮಾಜ ಮತ್ತು ಪ್ರಕೃತಿ ಒಟ್ಟಾಗಿ ಪ್ರಗತಿ ಸಾಧಿಸುತ್ತದೆ. ಹಿಂದೂ ಚಿಂತನೆಯು ಎಲ್ಲರ ಏಕಕಾಲಿಕ ಪ್ರಗತಿಗೆ ಪರಿಹಾರ ನೀಡುತ್ತದೆʼʼ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ನೋಂದಣಿ ಕಡ್ಡಾಯ ಎಂದ ಕರ್ನಾಟಕ ಸರ್ಕಾರಕ್ಕೆ ಮೋಹನ್ ಭಾಗವತ್ ತಿರುಗೇಟು
ಮುಂದಿನ ಪೀಳಿಗೆಯ ಭವಿಷ್ಯದ ಬಗ್ಗೆ ಮಾತನಾಡುತ್ತ ಅವರು ಯುವಜನರಲ್ಲಿ (ಜೆನ್ ಝೀ ಸಮುದಾಯ) ತಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಹೇಳಿದರು. "ಭವಿಷ್ಯದ ಪೀಳಿಗೆಗೆ ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಹಂಬಲ ಇರುವುದರಿಂದ ನಾನು ಅವರನ್ನು ಹೆಚ್ಚು ನಂಬುತ್ತೇನೆ. ಅವರಿಗೆ ವಿಧಾನವನ್ನು ಅಲ್ಲ, ಗುರಿಯನ್ನು ನೀಡಿ. ಅವರು ಸಾರ್ವತ್ರಿಕ ನೈತಿಕತೆ ಮತ್ತು ಸಮೃದ್ಧಿಯ ಗುರಿಯನ್ನು ತ್ವರಿತವಾಗಿ ಸಾಧಿಸುತ್ತಾರೆ" ಎಂದು ಅವರು ಹೇಳಿದರು.
ʼʼಯುವ ಜನರಿಗೆ ಏನಾದರೂ ಸರಿ ಎಂದರೆ ಅದನ್ನು ಮಾಡಲು ಅವರು ಮುಂದೆ ಬರುತ್ತಾರೆ. ಅವರು ಅದನ್ನು ನಿಭಾಯಿಸುತ್ತಾರೆ. ಪರಿಣಾಮಗಳ ಬಗ್ಗೆ ಅವರು ಚಿಂತಿಸುವುದಿಲ್ಲ. ನಾವು ಅವರಿಗೆ ಒಂದು ಗುರಿ ನೀಡಿದರೆ ಮತ್ತು ನಮ್ಮ ಅನುಭವದಿಂದ ಅಗತ್ಯವಾದ ಒಳನೋಟಗಳನ್ನು ಹಂಚಿಕೊಂಡರೆ ಅವರು ನಾವು ಎಂದಿಗೂ ಸಾಧ್ಯವಾಗದಷ್ಟು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಫಲಿತಾಂಶಗಳನ್ನು ಸಾಧಿಸುತ್ತಾರೆ" ಎಂದು ತಿಳಿಸಿದರು.
ಭಾರತೀಯ ವಲಸಿಗರು ಮಾತೃಭೂಮಿಗೆ ಸೇವೆ ಮಾಡಲು ಸಮಯ ಮೀಸಲಿಡಬೇಕೆಂದು ಕರೆ ನೀಡಿದರು. "ನಾವು ನಮ್ಮ ಕರ್ಮ ಭೂಮಿಗೆ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಬೇಕು. ಭಾರತಕ್ಕೆ ಸೇವೆ ಸಲ್ಲಿಸಲು ನಿಮ್ಮಲ್ಲಿ ಸಂಪನ್ಮೂಲ ಮತ್ತು ಸಮಯವಿದ್ದರೆ ಅದನ್ನು ಮಾಡಿʼʼ ಎಂದು ಕರೆ ನೀಡಿದರು.