ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಇದೊಂದು ರಾಜಕೀಯ ಪ್ರೇರಿತ ನಿರ್ಧಾರʼʼ: ಆರ್‌ಎಸ್‌ಎಸ್‌ ನೋಂದಣಿ ಕಡ್ಡಾಯ ಎಂದ ಕರ್ನಾಟಕ ಸರ್ಕಾರಕ್ಕೆ ಮೋಹನ್‌ ಭಾಗವತ್‌ ತಿರುಗೇಟು

Mohan Bhagwat: ಆರ್‌ಎಸ್‌ಎಸ್‌ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಕರ್ನಾಟಕ ಸರ್ಕಾರದ ಹೇಳಿಕೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ತಿರುಗೇಟು ನೀಡಿದ್ದಾರೆ. ಆರ್‌ಎಸ್‌ಎಸ್‌ನ ಚಟುವಟಿಕೆಯನ್ನು ಯಾವುದೇ ಮುಚ್ಚುಮರೆ ಇಲ್ಲದೆ ನಡೆಸಲಾಗುತ್ತಿದೆ ಎಂದಿದ್ದಾರೆ. ʼʼಇದೊಂದು ರಾಜಕೀಯ ಪ್ರೇರಿತ ನಿರ್ಧಾರʼʼ ಎಂದು ಕಿಡಿ ಕಾರಿದ್ದಾರೆ.

ಕರ್ನಾಟಕ ಸರ್ಕಾರಕ್ಕೆ ಮೋಹನ್‌ ಭಾಗವತ್‌ ತಿರುಗೇಟು

ಮೋಹನ್‌ ಭಾಗವತ್‌ ಮತ್ತು ಪ್ರಿಯಾಂಕ್‌ ಖರ್ಗೆ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jun 15, 2026 6:38 PM

ತಿರುವನಂತಪುರಂ, ಜೂ. 15: ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಮತ್ತು ಆರ್‌ಎಸ್‌ಎಸ್‌ ನಡುವಿನ ಸಂಘರ್ಷ ಮತ್ತೊಮ್ಮೆ ತಾರಕಕ್ಕೇರಿದೆ. ಆರ್‌ಎಸ್‌ಎಸ್‌ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು ಎಂಬ ಕರ್ನಾಟಕ ಸರ್ಕಾರದ ಹೇಳಿಕೆಗೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ (Mohan Bhagwat) ತಿರುಗೇಟು ನೀಡಿದ್ದಾರೆ. ಕೇರಳಂನ ತ್ರಿಶೂರ್‌ನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಲವು ಸಂಘಟನೆಗಳು ನೋಂದಣಿ ಮಾಡದೆ ಈಗಲೂ ಕಾರ್ಯ ನಿರ್ವಹಿಸುತ್ತಿವೆ. ಅಲ್ಲದೆ ಹಿಂದೂ ಧರ್ಮವನ್ನು ಕೂಡ ನೋಂದಾಯಿಸಿಲ್ಲ. ಆರ್‌ಎಸ್‌ಎಸ್‌ನ ಚಟುವಟಿಕೆಯನ್ನು ಯಾವುದೇ ಮುಚ್ಚುಮರೆ ಇಲ್ಲದೆ ನಡೆಸಲಾಗುತ್ತಿದೆ ಎಂದಿದ್ದಾರೆ.

ʼʼಇದೊಂದು ರಾಜಕೀಯ ಪ್ರೇರಿತ ನಿರ್ಧಾರ. ನಾನು ಇದಕ್ಕೆ ಪ್ರತಿಕ್ರಿಯಿಸುವ ಅಗತ್ಯವೇ ಇಲ್ಲ. ಇದು ಕೇವಲ ರಾಜಕೀಯವಷ್ಟೇ. ಸಂಘದ ವಿರುದ್ಧ ಇಂತಹ ಗಿಮಿಕ್‌ಗಳನ್ನು ಮಾಡಲಾಗುತ್ತಿದೆ. ನಾವು ಇದಕ್ಕೆಲ್ಲ ಒಗ್ಗಿಕೊಂಡಿದ್ದೇವೆ. ಕಳೆದ ಹಲವು ವರ್ಷಗಳಿಂದ ಇಂತಹ ಆರೋಪಗಳನ್ನು ನಾವು ಎದುರಿಸಿಕೊಂಡು ಬಂದಿದ್ದೇವೆ. ನಮ್ಮ ಕೆಲಸಗಳಿಗೆ ಅಡ್ಡಿಪಡಿಸಲು ಮತ್ತು ಜನರ ಮನಸ್ಸಿನಲ್ಲಿ ನಮ್ಮ ಬಗ್ಗೆ ಅನುಮಾನ ಮೂಡಿಸಲು ಈ ರೀತಿ ಮಾಡಲಾಗುತ್ತಿದೆʼʼ ಎಂದು ಕಿಡಿಕಾರಿದ್ದಾರೆ.

ಮೋಹನ್‌ ಭಾಗವತ್‌ ಅವರ ಹೇಳಿಕೆ:



ಆರ್‌ಎಸ್‌ಎಸ್‌ ಕಡ್ಡಾಯವಾಗಿ ನೋಂದಣಿ ಮಾಡಬೇಕು ಎಂದು ಕರ್ನಾಟಕ ಗೃಹ ಸಚಿವ ಹೇಳಿದ 2 ದಿನಗಳ ಬಳಿಕ ಮೋಹನ್‌ ಭಾಗವತ್‌ ಪ್ರತಿಕ್ರಿಯಿಸಿದ್ದಾರೆ. "ಆರ್‌ಎಸ್‌ಎಸ್‌ ಅನ್ನು ಬ್ರಿಟಿಷ್ ಆಳ್ವಿಕೆಯಲ್ಲಿ ಪ್ರಾರಂಭವಾಯಿತು. ಹಿಂದೂ ಧರ್ಮವನ್ನು ನೋಂದಾಯಿಸಲಾಗಿಲ್ಲ. ಅಲ್ಲದೆ ದೇಶದಲ್ಲಿ ಕಾರ್ಯನಿರ್ವವಹಿಸುತ್ತಿರುವ ಅನೇಕ ಸಂಘಟನೆಗಳನ್ನು ನೋಂದಾಯಿಸಲಾಗಿಲ್ಲ. ಸರ್ಕಾರಿ ನಿಧಿಯನ್ನು ಬಯಸುವವರು ನೋಂದಣಿ ಮಾಡಬೇಕಾಗುತ್ತದೆ. 100 ವರ್ಷಗಳಿಗೂ ಹೆಚ್ಚು ಕಾಲ ನಾವು ನೋಂದಾಯಿಸಿಕೊಳ್ಳಬೇಕು ಎಂದು ಯಾರೂ ನಮಗೆ ಹೇಳಿಲ್ಲ" ಎಂದು ಅವರು ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌ಗೆ ಪ್ರಿಯಾಂಕ್ ಖರ್ಗೆ ಪತ್ರ; ಸಂಘದ ಕಾನೂನುಬದ್ಧ ಸ್ಥಾನಮಾನ, ಆದಾಯ ಕುರಿತು ಸ್ಪಷ್ಟನೆಗೆ ಆಗ್ರಹ

1960ರ ದಶಕದಲ್ಲಿ ಆರ್‌ಎಸ್‌ಎಸ್ ತನ್ನ ಲಿಖಿತ ಸಂವಿಧಾನವನ್ನು ಸರ್ಕಾರಕ್ಕೆ ಸಲ್ಲಿಸಿತ್ತು ಮತ್ತು ನೋಂದಣಿಗೆ ಒತ್ತಾಯಿಸದೆ ಸರ್ಕಾರ ಅದನ್ನು ಒಪ್ಪಿಕೊಂಡಿತ್ತು ಎಂದು ಭಾಗವತ್ ನೆನಪಿಸಿದ್ದಾರೆ. "ಅವರು ಜನರ ಮನಸ್ಸಿನಲ್ಲಿ ಅನುಮಾನಗಳನ್ನು ಸೃಷ್ಟಿಸಲು ಬಯಸುತ್ತಾರೆ. ಅದು ಇನ್ನು ಮುಂದೆ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಎರಡು ಬಾರಿ ನಿಷೇಧ ಹೇರಲಾಗಿತ್ತು

"ಸರ್ಕಾರಕ್ಕೆ ಆರ್‌ಎಸ್‌ಎಸ್‌ ಬಗ್ಗೆ ಗೊತ್ತಿದೆ. ಈ ಹಿಂದೆ ನಮ್ಮ ಮೇಲೆ ಎರಡು ಬಾರಿ ನಿಷೇಧ ಹೇರಲಾಗಿತ್ತು. ನ್ಯಾಯಾಲಯದ ಆದೇಶ ಮತ್ತು ಸತ್ಯಾಗ್ರಹಗಳ ಮೂಲಕ ಆ ನಿಷೇಧವನ್ನು ವಾಪಸ್ ಪಡೆಯಲಾಯಿತು. ನಿಷೇಧಿಸಿದ್ದರು ಎಂದರೆ ಆರ್‌ಎಸ್‌ಎಸ್‌ ಎಂಬ ಸಂಸ್ಥೆ ಇದೆ ಎಂದು ಸರ್ಕಾರವೇ ಗುರುತಿಸಿದೆ ಎಂದರ್ಥ" ಎಂದು ಭಾಗವತ್ ವಿವರಿಸಿದ್ದಾರೆ.

ಬಾಂಗ್ಲಾ ಹಿಂದೂಗಳು ಹೋರಾಡಲು ಬಯಸಿದರೆ ಪ್ರಪಂಚವೇ ಬೆಂಬಲ ನೀಡುತ್ತದೆ; ಮೋಹನ್‌ ಭಾಗವತ್‌

ತಪ್ಪು ಕಲ್ಪನೆ

ʼʼಆರ್‌ಎಸ್‌ಎಸ್‌ ಪ್ರಪಂಚದ ಅತಿ ದೊಡ್ಡ ಸ್ವಯಂ ಸೇವಕ ಸಂಘಟನೆ. ಜತೆಗೆ ಅತೀ ಹೆಚ್ಚು ಜನರು ತಪ್ಪು ತಿಳುವಳಿಕೆ ಹೊಂದಿರುವ ಸಂಘಟನೆಯೂ ಹೌದುʼʼ ಎಂದು ಹೇಳಿದ್ದಾರೆ. ಇದೇ ವೇಳೆ ಅವರು ಸಾರ್ವಜನಿಕರೇ ಸ್ವತಃ ಆರ್‌ಎಸ್‌ಎಸ್‌ ಅನ್ನು ಪರೀಕ್ಷಿಸುವಂತೆ ಸೂಚಿಸಿದ್ದಾರೆ. ಆರ್‌ಎಸ್‌ಎಸ್‌ ಅಪಾಯಕಾರಿಯಲ್ಲ. ಯಾರು ಬೇಕಾದರೂ ಇದನ್ನು ಪರೀಕ್ಷಿಸಬಹುದು ಎಂದು ಹೇಳಿದ್ದಾರೆ. ʼʼಆರ್‌ಎಸ್‌ಎಸ್‌ ಬಗ್ಗೆ ತಪ್ಪು ಕಲ್ಪನೆಗಳಿವೆ. ಅನಗತ್ಯ ಭಾವನೆಗಳನ್ನು ಜನರ ಮನಸ್ಸಿನಲ್ಲಿ ತುಂಬಲಾಗುತ್ತಿದೆʼʼ ಎಂದಿದ್ದಾರೆ.

ಆರ್‌ಎಸ್‌ಎಸ್‌ ಅಭಿವೃದ್ಧಿ ಹೊಂದುತ್ತಿರುವ ರೀತಿಯಿಂದ ಕೆಲವರು ಭಯಪಡುತ್ತಿದ್ದಾರೆ ಎಂದು ಹೇಳಿದ ಅವರು, ದುರುದ್ದೇಶಪೂರಿತ ಪ್ರಚಾರದಿಂದ ಜನಪ್ರಿಯತೆ ಕುಗ್ಗಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.