ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್ ದಿಗ್ಬಂಧನ: ಜಗತ್ತನ್ನೇ ಇರಾನ್ ಯುದ್ಧ ಭೂಮಿಗೆ ಎಳೆದ ಡೊನಾಲ್ಡ್‌ ಟ್ರಂಪ್? ಅಮೆರಿಕ ಅಧ್ಯಕ್ಷನ ಮುಂದಿನ ನಡೆ ಬಗ್ಗೆ ಹೆಚ್ಚಿದ ಕುತೂಹಲ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಹೊರ್ಮುಜ್ ಜಲಸಂಧಿಯ ದಿಗ್ಬಂಧನದಿಂದ ಜಾಗತಿಕ ತೈಲ ಸರಬರಾಜು ಹಾಗೂ ಆರ್ಥಿಕ ಸ್ಥಿರತೆ ತೀವ್ರವಾಗಿ ಅಲುಗಾಡುತ್ತಿದೆ. ಇರಾನ್ ವಿರುದ್ಧ ಕೈಗೊಂಡಿರುವ ಈ ಕ್ರಮವು ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿಯನ್ನು ಹೆಚ್ಚಿಸುವುದರ ಜತೆಗೆ ಭಾರತ ಸೇರಿ ಅನೇಕ ದೇಶಗಳ ಇಂಧನ ಭದ್ರತೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ.

ಡೊನಾಲ್ಡ್‌ ಟ್ರಂಪ್‌ (ಸಂಗ್ರಹ ಚಿತ್ರ)

ಇಸ್ಲಾಮಾಬಾದ್‌, ಏ. 14: ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ (Islamabad) ನಡೆದ 21 ಗಂಟೆಗಳ ಸುದೀರ್ಘ ಮಾತುಕತೆಗಳು ಯಾವುದೇ ಶಾಂತಿ ಒಪ್ಪಂದವಿಲ್ಲದೆ ವಿಫಲವಾದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೊರ್ಮುಜ್ ಜಲಸಂಧಿಯ (Strait of Hormuz) ಮೇಲೆ ಕಟ್ಟುನಿಟ್ಟಿನ ನೌಕಾ ದಿಗ್ಬಂಧನ ಘೋಷಿಸಿದ್ದಾರೆ. ಇರಾನ್‌ನ (Iran) ಬಂದರುಗಳಿಗೆ ಪ್ರವೇಶಿಸುವ ಅಥವಾ ಅಲ್ಲಿಂದ ನಿರ್ಗಮಿಸುವ ಯಾವುದೇ ಹಡಗುಗಳನ್ನು ತಡೆಯುವುದು ಈ ಮಿಲಿಟರಿ ಕ್ರಮದ ಮುಖ್ಯ ಉದ್ದೇಶ. ಆದರೆ, ಇದು ಕೇವಲ ಇರಾನ್ ಮೇಲೆ ಒತ್ತಡ ಹೇರುವ ತಂತ್ರವಾಗಿ ಉಳಿಯದೆ, ಇಡೀ ಅಂತರಾಷ್ಟ್ರೀಯ ಸಮುದಾಯವನ್ನು ಮಧ್ಯಪ್ರಾಚ್ಯದ ಯುದ್ಧದ ಬಿಕ್ಕಟ್ಟಿಗೆ ಬಲವಂತವಾಗಿ ಎಳೆಯುವ ಪ್ರಯತ್ನ ಎಂದು ವಿಶ್ಲೇಷಿಸಲಾಗುತ್ತಿದೆ.

ಹೊರ್ಮುಜ್ ಜಲಸಂಧಿಯು ಕೇವಲ 21 ಮೈಲಿಗಳಷ್ಟು ಕಿರಿದಾಗಿದ್ದರೂ, ಜಾಗತಿಕ ತೈಲ ವ್ಯಾಪಾರದ ಸುಮಾರು ಐದನೇ ಒಂದು ಭಾಗವನ್ನು ನಿಯಂತ್ರಿಸುವ ಅತ್ಯಂತ ಪ್ರಮುಖ ಜಲಮಾರ್ಗ ಎನಿಸಿಕೊಂಡಿದೆ. ವಿಶೇಷವಾಗಿ ಭಾರತ, ಚೀನಾ, ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ಏಷ್ಯಾದ ಬೃಹತ್ ಆರ್ಥಿಕತೆಗಳು ತಮ್ಮ ಇಂಧನ ಅಗತ್ಯಗಳಿಗಾಗಿ ಈ ಮಾರ್ಗವನ್ನೇ ಅವಲಂಬಿಸಿವೆ. ಭಾರತದ ಶೇ. 90ರಷ್ಟು ಎಲ್‌ಪಿಜಿ ಆಮದು ಕೂಡ ಈ ಕಿರಿದಾದ ಜಲಮಾರ್ಗದ ಮೂಲಕವೇ ಆಗುತ್ತದೆ. ಈ ಹಿಂದೆ ಟ್ರಂಪ್ ಜಾಗತಿಕ ನೌಕಾ ಕಾರ್ಯಪಡೆ ರಚಿಸಲು ನೀಡಿದ್ದ ಕರೆಯನ್ನು ತಿರಸ್ಕರಿಸಿ, ಇರಾನ್‌ನೊಂದಿಗೆ ಸ್ವತಂತ್ರವಾಗಿ ಮಾತುಕತೆ ನಡೆಸಿ ತಮ್ಮ ಹಡಗುಗಳ ರಕ್ಷಣೆಗೆ ಮುಂದಾಗಿದ್ದ ದೇಶಗಳಿಗೆ ಈ ದಿಗ್ಬಂಧನವು ಒಂದು ರೀತಿಯ ರಾಜತಾಂತ್ರಿಕ ಮತ್ತು ಆರ್ಥಿಕ ಶಿಕ್ಷೆಯಂತಿದೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರ ಅನಿವಾರ್ಯತೆಯೇ ಅಥವಾ ಆಯ್ಕೆಯೇ?

ಚೀನಾ ಮತ್ತು ಭಾರತದಂತಹ ರಾಷ್ಟ್ರಗಳು ಇರಾನ್‌ನೊಂದಿಗೆ ದ್ವಿಪಕ್ಷೀಯ ಒಪ್ಪಂದಗಳ ಮೂಲಕ ತಮ್ಮ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಂಡಿದ್ದವು. ಈಗ ಅಮೆರಿಕದ ಏಕಪಕ್ಷೀಯ ಕ್ರಮದಿಂದಾಗಿ ಕಚ್ಚಾ ತೈಲ ಬೆಲೆಗಳು ಮತ್ತೆ ಬ್ಯಾರೆಲ್‌ಗೆ 100 ಡಾಲರ್ ಗಡಿ ದಾಟಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ಅಮೆರಿಕದ ಹಳೆಯ ಮಿತ್ರರಾಷ್ಟ್ರಗಳೂ ಅಂತರ ಕಾಯ್ದುಕೊಳ್ಳುತ್ತಿವೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಾವು ಈ ದಿಗ್ಬಂಧನವನ್ನು ಬೆಂಬಲಿಸುವುದಿಲ್ಲ ಮತ್ತು ಇರಾನ್ ಯುದ್ಧಕ್ಕೆ ಎಳೆಯಲ್ಪಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಬ್ರಿಟನ್ ಜತೆಗೂಡಿ ಸಮುದ್ರಯಾನದ ಸ್ವಾತಂತ್ರ್ಯವನ್ನು ರಕ್ಷಿಸಲು ಯುದ್ಧನಿರತ ದೇಶಗಳಿಂದ ಪ್ರತ್ಯೇಕವಾದ ಸ್ವತಂತ್ರ ಅಂತಾರಾಷ್ಟ್ರೀಯ ಮಿಷನ್ ಸ್ಥಾಪಿಸಲು ಮುಂದಾಗಿದ್ದಾರೆ. ಟ್ರಂಪ್ ಅವರ ಈ ನಡೆ ಇರಾನ್ ಅನ್ನು ಶರಣಾಗುವಂತೆ ಮಾಡುತ್ತದೆಯೇ ಅಥವಾ ಇಡೀ ಜಗತ್ತನ್ನು ಸುದೀರ್ಘ ಆರ್ಥಿಕ ಮುಗ್ಗಟ್ಟಿಗೆ ತಳ್ಳುತ್ತದೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.