ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೆಕ್ಕಾ ಗುರಿಯಾಗಿಸಿಕೊಂಡ ಹೌತಿ ದಾಳಿ: ಸೌದಿಯಲ್ಲಿ ಮೊದಲ ಬಾರಿಗೆ ವೈಮಾನಿಕ ಎಚ್ಚರಿಕೆ

Air Raid Alert: ಯೆಮೆನ್‌ನ ಹೌತಿ ಬಂಡುಕೋರರು ಮೆಕ್ಕಾವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಮೆಕ್ಕಾ, ಜೆಡ್ಡಾ ಮತ್ತು ತಾಇಫ್ ಪ್ರದೇಶಗಳಲ್ಲಿ ವೈಮಾನಿಕ ಬೆದರಿಕೆ ಎಚ್ಚರಿಕೆ ನೀಡಲಾಗಿದೆ. ಮೆಕ್ಕಾದಲ್ಲಿ ಇಂತಹ ಎಚ್ಚರಿಕೆ ನೀಡಿರುವುದು ಇದೇ ಮೊದಲ ಬಾರಿ.

ಸಾಂದರ್ಭಿಕ ಚಿತ್ರ

ರಿಯಾದ್, ಸೆ. 16: ಯೆಮೆನ್‌ನ ಹೌತಿ ಬಂಡುಕೋರರು (Houthi rebels) ಪವಿತ್ರ ನಗರ ಮೆಕ್ಕಾವನ್ನು (Mecca) ಗುರಿಯಾಗಿಸಿಕೊಂಡಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ, ಸೌದಿ ಅರೇಬಿಯಾದ ಪಶ್ಚಿಮ ಕರಾವಳಿಯ ಹಲವು ಪ್ರದೇಶಗಳಲ್ಲಿ ಕೆಲಕಾಲ ವಾಯು ಬೆದರಿಕೆ ಎಚ್ಚರಿಕೆ (Aerial threat alert) ನೀಡಲಾಗಿದ್ದು, ಮೆಕ್ಕಾ, ಜೆದ್ದಾ ಮತ್ತು ತೈಫ್ ಗವರ್ನರೇಟ್‌ಗಳಲ್ಲಿ ಈ ಆದೇಶ ಜಾರಿ ಮಾಡಲಾಗಿತ್ತು ಎನ್ನಲಾಗಿದೆ. ಅಲ್ಲದೇ ಇತಿಹಾಸದಲ್ಲೇ ಮೊದಲ ಬಾರಿಗೆ ಮೆಕ್ಕಾದಲ್ಲಿ ವಾಯು ಬೆದರಿಕೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿದು ಬಂದಿದ್ದು, ಸೌದಿ ವಾಯು ರಕ್ಷಣಾ ಪಡೆಗಳು ಮೆಕ್ಕಾದ ದಕ್ಷಿಣ ಭಾಗದಲ್ಲಿ ಹೌತಿಗಳ ಡ್ರೋನ್‌ವೊಂದನ್ನು ತಡೆದು ನಾಶಪಡಿಸಿದೆ. ಅದು ನಿಷೇಧಿತ ವಾಯುಪ್ರದೇಶ ಪ್ರವೇಶಿಸುವ ಮುನ್ನವೇ ಹೊಡೆದುರುಳಿಸಲಾಗಿದೆ ಎಂದು ಸೌದಿ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ವೇಳೆ, ಇಸ್ರೇಲಿ ಪತ್ರಿಕೆ Hayom ವರದಿ ಪ್ರಕಾರ, ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (MED) ತೆರಳುತ್ತಿದ್ದ ವಿಮಾನಗಳ ಸಂಚಾರವನ್ನೂ ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ. ಅಲ್ಲದೇ ಈ ದಾಳಿಯ ಒಂದು ದಿನ ಮುನ್ನ, ಯೆಮೆನ್‌ನಿಂದ ಹೌತಿಗಳು ನಡೆಸಿದ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯಲ್ಲಿ ಸೌದಿ ಅರೇಬಿಯಾದಲ್ಲಿ 13 ಮಂದಿ ಗಾಯಗೊಂಡಿದ್ದರು ಎನ್ನಲಾಗಿದೆ.

ಮೆಕ್ಕಾವನ್ನು ಗುರಿಯಾಗಿಸಿಕೊಂಡಿಲ್ಲ ಎಂದ ಹೌತಿಗಳು

ಮೆಕ್ಕಾ ಕಡೆಗೆ ತೆರಳುತ್ತಿದ್ದ ಹೌತಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂಬ ಸೌದಿ ಅರೇಬಿಯಾದ ಹೇಳಿಕೆಯನ್ನು ಹೌತಿಗಳು ತಳ್ಳಿ ಹಾಕಿದ್ದಾರೆ. ಹೌತಿ ರಾಜಕೀಯ ಬ್ಯೂರೋ ಸದಸ್ಯ ಹಾಜೆಮ್ ಅಲ್-ಅಸಾದ್, ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಮೆಕ್ಕಾವನ್ನು ಗುರಿಯಾಗಿಸಿಕೊಂಡಿದ್ದೇವೆ ಎಂಬ ಆರೋಪವನ್ನು ಸುಳ್ಳು ಎಂದು ಹೇಳಿದ್ದಾರೆ. ಇಂತಹ ಆರೋಪವನ್ನು ಹಿಂದೆ ಕೂಡ ಮಾಡಲಾಗಿದ್ದು, ಈಗ ಅದು ಯಾರನ್ನೂ ನಂಬಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ನಂತರ ಹೌತಿಗಳು ಸೌದಿ ಅರೇಬಿಯಾದ F-15 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದೇವೆ ಎಂದು ಮತ್ತೊಂದು ಹೇಳಿಕೆ ನೀಡಿದರು. ಮಾರಿಬ್ ಪ್ರಾಂತ್ಯದ ವಾಯುಪ್ರದೇಶದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವಿಮಾನವನ್ನು ಸ್ಥಳೀಯವಾಗಿ ತಯಾರಿಸಲಾದ ಗಾಳಿಯಿಂದ-ಗಾಳಿಗೆ ಉಡಾಯಿಸುವ ಕ್ಷಿಪಣಿಯಿಂದ ಗುರಿಯಾಗಿಸಲಾಗಿದೆ ಎಂದು ಹೌತಿ ಸೇನಾ ವಕ್ತಾರ ಯಾಹ್ಯಾ ಸರೀ ತಿಳಿಸಿದ್ದಾರೆ.

ಮೆಕ್ಕಾದಲ್ಲಿ ವಾಯು ಬೆದರಿಕೆ ಎಚ್ಚರಿಕೆ:



ಸೌದಿ–ಹೌತಿ ಸಂಘರ್ಷ ತೀವ್ರ

ಸೌದಿ ಅರೇಬಿಯಾ ಮತ್ತು ಹೌತಿಗಳ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಈ ವಾರ ಹೌತಿಗಳು ಸೌದಿ ಅರೇಬಿಯಾದ ಮೇಲೆ ಭಾರೀ ಪ್ರಮಾಣದ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ತೈಲ ಮೂಲಸೌಕರ್ಯಗಳಿಗೆ ಬೆಂಕಿ ತಗುಲಿ 73 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಸೋಮವಾರ (ಸೆಪ್ಟೆಂಬರ್‌ 14) ಪಶ್ಚಿಮ ಯೆಮೆನ್‌ನಲ್ಲಿ ಹೌತಿಗಳ ದಾಳಿಯಲ್ಲಿ ಎಂಟು ಸರ್ಕಾರಿ ಸೈನಿಕರು ಮೃತಪಟ್ಟಿದ್ದಾರೆ ಎಂದು ಎರಡು ಸೇನಾ ಮೂಲಗಳು ತಿಳಿಸಿವೆ. ಇದೇ ವೇಳೆ, ದಕ್ಷಿಣ ಸೌದಿ ಅರೇಬಿಯಾದ ಖಮೀಸ್ ಮುಶೈತ್‌ನಲ್ಲಿರುವ ಕಿಂಗ್ ಖಾಲಿದ್ ವಾಯುನೆಲೆಯನ್ನು ಗುರಿಯಾಗಿಸಿಕೊಂಡು ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದ್ದೇವೆ ಎಂದು ಹೌತಿಗಳು ಹೇಳಿಕೊಂಡಿದ್ದಾರೆ.

ಅಸದುದ್ದೀನ್ ಓವೈಸಿ ಬೆಂಗಾವಲು ಪಡೆಯ ವಾಹನ-ಬೈಕ್‌ಗಳ ನಡುವೆ ಡಿಕ್ಕಿ

ಜುಲೈಯಲ್ಲಿ ಯೆಮೆನ್‌ನ ಸಂಘರ್ಷ ಮತ್ತೆ ಉಲ್ಬಣಗೊಂಡ ಬಳಿಕ ಸೌದಿ ಬೆಂಬಲಿತ ಸರ್ಕಾರಿ ಪಡೆಗಳು ಮತ್ತು ಹೌತಿಗಳ ನಡುವಿನ ಹೋರಾಟ ಮುಂದುವರಿದಿದೆ. ಹೌತಿಗಳು ಸೌದಿ ಅರೇಬಿಯಾ ವಿರುದ್ಧ ಸಮುದ್ರ ನಿರ್ಬಂಧ ಘೋಷಿಸಿದ ನಂತರ ಕೆಂಪು ಸಮುದ್ರದಲ್ಲಿನ ಹಡಗುಗಳ ಮೇಲೂ ದಾಳಿ ನಡೆಸುತ್ತಿದ್ದಾರೆ. ಹೌತಿ ನಾಯಕ ಹಾಜೆಮ್ ಅಲ್-ಅಸಾದ್, ಸೌದಿ ಅರೇಬಿಯಾ ತಮ್ಮ ವಿರುದ್ಧದ ದಾಳಿಗಳನ್ನು ಮುಂದುವರಿಸಿದರೆ ಯೆಮೆನ್‌ನ ಪ್ರತಿಕ್ರಿಯೆ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.

ಬಾಬ್ ಅಲ್-ಮಂದಬ್ ಬಗ್ಗೆ ಕತಾರ್ ಎಚ್ಚರಿಕೆ

ಮಂಗಳವಾರ ಕತಾರ್, ಬಾಬ್ ಅಲ್-ಮಂದಬ್ ಜಲಸಂಧಿಯನ್ನು ಮುಚ್ಚಿದರೆ ಅದರ ಪರಿಣಾಮ ಭೀಕರವಾಗಿರಲಿದೆ ಎಂದು ಎಚ್ಚರಿಸಿದೆ. ಈ ಜಲಸಂಧಿಯನ್ನು ಮುಚ್ಚುವುದು ಇಡೀ ಜಗತ್ತಿಗೆ ʼವಿನಾಶಕಾರಿʼ ಪರಿಣಾಮ ಉಂಟುಮಾಡಬಹುದು ಎಂದು ಕತಾರ್ ವಿದೇಶಾಂಗ ಸಚಿವಾಲಯದ ಅಧಿಕಾರಿ ಇಬ್ರಾಹಿಂ ಅಲ್-ಹಾಶಿಮಿ ಹೇಳಿದ್ದಾರೆ.

ಈ ನಡುವೆ, ಸೌದಿ ಯುವರಾಜರು ಸಂಘರ್ಷದಲ್ಲಿ ಮಧ್ಯಪ್ರವೇಶಿಸುವಂತೆ ಮಾಡಿದ ಮನವಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ಶನಿವಾರ (ಸೆಪ್ಟೆಂಬರ್‌ 12) ಹೌತಿಗಳು ಅಮೆರಿಕವನ್ನು ಸಂಪರ್ಕಿಸಿ ಯುದ್ಧದಲ್ಲಿ ಮಧ್ಯ ಪ್ರವೇಶಿಸದಂತೆ ಮನವಿ ಮಾಡಿದ್ದರು ಎಂದು ಟ್ರಂಪ್ ಹೇಳಿದ್ದಾರೆ.

ಕೆಂಪು ಸಮುದ್ರದ ಪ್ರಮುಖ ಸಮುದ್ರ ಮಾರ್ಗಕ್ಕೆ ಹೌತಿಗಳ ಕ್ಷಿಪ್ರ ಮುನ್ನಡೆ ಮತ್ತು ನಿರಂತರ ದಾಳಿಗಳ ಹಿನ್ನೆಲೆಯಲ್ಲಿ, ಸೌದಿ ಅರೇಬಿಯಾ ಮುಂದಿನ ಕ್ರಮಗಳ ಕುರಿತು ತನ್ನ ಆಯ್ಕೆಗಳನ್ನು ಮರುಪರಿಶೀಲಿಸುವ ಪರಿಸ್ಥಿತಿ ಎದುರಿಸುತ್ತಿದೆ.