ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಯಾವುದೇ ದೇಶದಿಂದ ತೈಲ ಖರೀದಿಸುವ ಸ್ವಾತಂತ್ರ್ಯ ಭಾರತಕ್ಕಿದೆ; ಡೊನಾಲ್ಡ್‌ ಟ್ರಂಪ್‌ಗೆ ತಿರುಗೇಟು ಕೊಟ್ಟ ರಷ್ಯಾ?

India-US Trade Deal: ಭಾರತ ಯಾವ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು ಎಂದು ರಷ್ಯಾ ಹೇಳಿದೆ. ಭಾರತವು ರಷ್ಯಾದಿಂದ ತೈಲ ತರಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಬದಲಿಗೆ ಅಮೆರಿಕದಿಂದ ಖರೀದಿಸಲಿದೆ ಎಂದು ಡೊನಾಲ್ಡ್‌ ಟ್ರಂಪ್‌ ಹೇಳಿಕೆ ನೀಡಿದ 2 ದಿನಗಳ ಬಳಿಕ ಈ ಪ್ರತಿಕ್ರಿಯೆ ಬಂದಿದೆ.

ಸಾಂದರ್ಭಿಕ ಚಿತ್ರ.

ದೆಹಲಿ, ಫೆ. 4: ಭಾರತವು ರಷ್ಯಾದಿಂದ (Russia) ತೈಲ ತರಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ. ಬದಲಿಗೆ ಅಮೆರಿಕದಿಂದ ಖರೀದಿಸಲಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಘೋಷಿಸಿದ 2 ದಿನಗಳ ಬಳಿಕ ರಷ್ಯಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಗತ್ತಿನ ಕುತೂಹಲ ಕೆರಳಿಸಿದೆ. ಭಾರತ ಯಾವ ದೇಶದಿಂದ ಬೇಕಾದರೂ ತೈಲ ಖರೀದಿಸಬಹುದು ಎಂದು ರಷ್ಯಾ ಹೇಳಿದೆ. ʼʼಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಪೂರೈಸುವ ಏಕೈಕ ದೇಶ ರಷ್ಯಾ ಅಲ್ಲʼʼ ಎಂದು ಅಲ್ಲಿನ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. ದೆಹಲಿ ಈ ಹಿಂದೆಯೂ ಇತರ ದೇಶಗಳಿಂದ ತೈಲವನ್ನು ಖರೀದಿಸಿದೆ ಎಂದು ಅವರು ತಿಳಿಸಿದ್ದಾರೆ. ಆ ಮೂಲಕ ತೈಲ ಖರೀದಿಯ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಭಾರತಕ್ಕೆ ಇದೆ ಎನ್ನುವುದನ್ನು ಸೂಚ್ಯವಾಗಿ ಹೇಳಿದ್ದಾರೆ.

"ಭಾರತಕ್ಕೆ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಏಕೈಕ ಪೂರೈಕೆದಾರ ರಷ್ಯಾ ಅಲ್ಲ ಎಂಬುದು ನಮಗೆ ಮತ್ತು ಇತರ ಎಲ್ಲ ಅಂತಾರಾಷ್ಟ್ರೀಯ ಇಂಧನ ತಜ್ಞರಿಗೆ ಚೆನ್ನಾಗಿ ತಿಳಿದಿದೆ. ಭಾರತ ಯಾವಾಗಲೂ ಇತರ ದೇಶಗಳಿಂದ ಈ ಉತ್ಪನ್ನಗಳನ್ನು ಖರೀದಿಸಿದೆ. ಆದ್ದರಿಂದ ಈ ವಿಚಾರದಲ್ಲಿ ನಮಗೆ ಹೊಸ ಬೆಳವಣಿಗೆ ಏನೂ ಕಾಣುವುದಿಲ್ಲ" ಎಂದು ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಇಯು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತದ ಆರ್ಥಿಕತೆಯಲ್ಲಿ ಹೊಸ ಯುಗದ ಆರಂಭ

ಪ್ರಧಾನಿ ನರೇಂದ್ರ ಮೋದಿ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕದಿಂದ ಖರೀದಿಸಲು ಒಪ್ಪಿಕೊಂಡಿದ್ದಾರೆ ಎಂಬ ಟ್ರಂಪ್ ಹೇಳಿಕೆಯ ಕುರಿತಾದ ಪ್ರಶ್ನೆಗೆ ಅವರು ಉತ್ತರಿಸಿದರು. ಮಂಗಳವಾರ ರಷ್ಯಾ ಈ ವಿಷಯದ ಬಗ್ಗೆ ದೆಹಲಿಯಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿತ್ತು. ರಷ್ಯಾ ಭಾರತದೊಂದಿಗಿನ ತನ್ನ ಸಂಬಂಧವನ್ನು ಮೊದಲಿನ ಹಾಗೆ ಉಳಿಸಿಕೊಳ್ಳಲಿದೆ ಮತ್ತು ಪಾಲುದಾರಿಕೆಯನ್ನು ಮುಂದುವರಿಸಲಿದೆ ಎಂದೂ ಸ್ಪಷ್ಟಪಡಿಸಿತ್ತು.

ಭಾರತದ ನಿಲುವೇನು?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಫೆಬ್ರವರಿ 2) ಭಾರತದೊಂದಿಗಿನ ವ್ಯಾಪಾರ ಒಪ್ಪಂದವನ್ನು ಘೋಷಿಸಿದರು. ಇದರ ಪರಿಣಾಮವಾಗಿ ಭಾರತದ ಮೇಲೆ ಹೇರಿದ್ದ ಸುಂಕವನ್ನು ಶೇಕಡಾ 18ಕ್ಕೆ ಇಳಿಸುವುದಾಗಿ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಪ್ರಕಟಿಸಿದರು. ಇತ್ತ ಭಾರತವೂ ಸುಂಕದ ಕಡಿತವನ್ನು ದೃಢಪಡಿಸಿದೆ. ಆದಾಗ್ಯೂ ರಷ್ಯಾದಿಂದ ತೈಲ ಆಮದನ್ನು ನಿಲ್ಲಿಸುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಭಾರತ- ಅಮೆರಿಕ ವ್ಯಾಪಾರ ಒಪ್ಪಂದದಿಂದ ಯಾವ ವಲಯಕ್ಕೆ ಹೆಚ್ಚಿನ ಲಾಭ? ಇಲ್ಲಿದೆ ಸಂಪೂರ್ಣ ವಿವರ

ಏಷ್ಯಾದಲ್ಲೇ ಬಾರತಕ್ಕೆ ಕಡಿಮೆ ಸುಂಕ

ಟ್ರಂಪ್‌ ಅವರ ಹೊಸ ಘೋಷಣೆಯೊಂದಿಗೆ ಏಷ್ಯಾ ಖಂಡದ ಇತರ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ವಿಧಿಸಲಾಗಿರುವ ಅಮೆರಿಕದ ಸುಂಕದ ಪ್ರಮಾಣ ಕಡಿಮೆ ಇದೆ. ಪಾಕಿಸ್ತಾನ, ಇಂಡೋನೇಷ್ಯಾ ಮತ್ತು ಕಾಂಬೋಡಿಯಕ್ಕೆ ಶೇಕಡಾ 19ರಷ್ಟು, ವಿಯೆಟ್ನಾಂ, ಬಾಂಗ್ಲಾದೇಶಕ್ಕೆ ಶೇಕಡಾ 20 ಹಾಗೂ ಚೀನಾಕ್ಕೆ ಶೇಕಡಾ 37ರಷ್ಟು ಸುಂಕವನ್ನು ಅಮೆರಿಕ ವಿಧಿಸಿದೆ. ಇದೀಗ ಭಾರತದ ಮೇಲೆ ಶೇಕಡಾ 18ರಷ್ಟು ಸುಂಕ ಇದ್ದು, ಎರಡು ದೇಶಗಳ ವ್ಯವಹಾರ ಇನ್ನಷ್ಟು ಹೆಚ್ಚಾಗಲಿದೆ ಎನ್ನುವ ನಿರೀಕ್ಷೆ ಮೂಡಿಸಿದೆ.

ಬಹುಕಾಲದ ಗೆಳೆಯ ರಷ್ಯಾದ ವಿಚಾರದಲ್ಲಿ ಭಾರತ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವ ವಿಚಾರ ಸದ್ಯ ಕುತೂಹಲ ಕೆರಳಿಸಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author