ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇಯು, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ; ಭಾರತದ ಆರ್ಥಿಕತೆಯಲ್ಲಿ ಹೊಸ ಯುಗದ ಆರಂಭ

ಸುದೀರ್ಘ ಮಾತುಕತೆಯ ಬಳಿಕ ಭಾರತ ಮತ್ತು ಅಮೆರಿಕ ನಡುವಿನ ಸುಂಕ ಸಮರ ಒಂದು ತಾರ್ಕಿಕ ಅಂತ್ಯ ಕಂಡಿದೆ. ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆಯನ್ನು ಪೂರ್ಣಗೊಳಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 25ರಿಂದ ಶೇ 18ಕ್ಕೆ ಇಳಿಸಲು ಒಪ್ಪಿಕೊಂಡಿದ್ದಾರೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ, ಇದರ ಪರಿಣಾಮ ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

ವಾರದೊಳಗೆ ಎರಡು ಪ್ರಮುಖ ವ್ಯಾಪಾರ ಒಪ್ಪಂದ; ಭಾರತಕ್ಕೇನು ಲಾಭ?

ಸಂಗ್ರಹ ಚಿತ್ರ -

ನವದೆಹಲಿ: ಒಂದರ ಹಿಂದೆ ಒಂದರಂತೆ ವ್ಯಾಪಾರ ಒಪ್ಪಂದ (Trade deal) ಮಾಡುತ್ತಿರುವ ಭಾರತ ಇತ್ತೀಚೆಗೆ ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ (EU Free Trade Agreement) ಸಹಿ ಹಾಕಿದ ಬೆನ್ನಲ್ಲೇ ಇದೀಗ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿದೆ. ಈ ಮೂಲಕ ಜಾಗತಿಕ ವ್ಯಾಪಾರ ಒಪ್ಪಂದದಲ್ಲಿ ಒಂದು ಮೈಲುಗಲ್ಲನ್ನು ನೆಟ್ಟಿದೆ. ಕಳೆದ ಹಲವಾರು ತಿಂಗಳುಗಳಿಂದ ನಡೆದ ಸುದೀರ್ಘ ಮಾತುಕತೆಯ ಪರಿಣಾಮ ಇದೀಗ ಭಾರತ ಮತ್ತು ಅಮೆರಿಕ ನಡುವಿನ ಸುಂಕ ಸಮರವು ಕೊನೆಗೊಂಡಿದೆ. ಕೊನೆಗೂ , ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ಅವರು ಭಾರತದ ಸರಕುಗಳ ಮೇಲಿನ ಸುಂಕವನ್ನು ಶೇ. 25ರಿಂದ ಶೇ 18ಕ್ಕೆ ಇಳಿಸಲು ಒಪ್ಪಿಕೊಂಡಿದ್ದಾರೆ.

ಭಾರತ ಮತ್ತು ಯುಎಸ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆಗಳು ಕೊನೆಗೊಂಡಿದ್ದು, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಮವಾರ ಯುನೈಟೆಡ್ ಸ್ಟೇಟ್ಸ್ ನವದೆಹಲಿಯೊಂದಿಗೆ ಮಹತ್ವದ ಒಪ್ಪಂದ ಮಾತುಕತೆಯನ್ನು ಅಂತಿಮಗೊಳಿಸಿದೆ ಎಂದು ಘೋಷಿಸಿದರು.

ಭಾರತ–ಇಯು ವ್ಯಾಪಾರ ಒಪ್ಪಂದಕ್ಕೆ ಸಹಿ: ಅಮೆರಿಕದ ಮೇಲೆ ಪರಿಣಾಮವೇನು?

ರಷ್ಯಾದಿಂದ ತೈಲ ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ ಭಾರತಕ್ಕೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ್ದ ಅಮೆರಿಕ ಇದೀಗ ಹೆಚ್ಚುವರಿ ಸುಂಕವನ್ನು ರದ್ದುಗೊಳಿಸಿ, ಭಾರತೀಯ ಸರಕುಗಳ ಮೇಲಿನ ಶೇ. 25ರಷ್ಟು ಸುಂಕವನ್ನು ಶೇ. 18ಕ್ಕೆ ಇಳಿಸಲು ಒಪ್ಪಿಕೊಂಡಿದೆ. ರಷ್ಯಾ ಮತ್ತು ಉಕ್ರೇನ್ ನಡುವಿನ ಸಂಘರ್ಷವನ್ನು ಕೊನೆಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ ರಷ್ಯಾ ತೈಲ ಖರೀದಿಯನ್ನು ಭಾರತ ನಿಲ್ಲಿಸಿರುವುದಕ್ಕೆ ಪ್ರತಿಯಾಗಿ ವೆನೆಜುವೆಲಾದಿಂದ ತೈಲ ಖರೀದಿಸಲು ಭಾರತ ಒಪ್ಪಿಕೊಂಡಿದೆ ಎನ್ನಲಾಗಿದೆ.

ಅಲ್ಲದೇ ಈ ಒಪ್ಪಂದದ ಪ್ರಕಾರ ಭಾರತವು 500 ಶತಕೋಟಿ ಡಾಲರ್ ಗಿಂತ ಹೆಚ್ಚಿನ ಮೌಲ್ಯದ ಯುಎಸ್ ಇಂಧನ, ತಂತ್ರಜ್ಞಾನ, ಕಲ್ಲಿದ್ದಲು ಮತ್ತು ಕೃಷಿ ಉತ್ಪನ್ನಗಳಲ್ಲಿ ಖರೀದಿಸಲು ಒಪ್ಪಿಕೊಂಡಿದೆ.

ಸದ್ಯ ಭಾರತವು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದೆ. ದಿನಕ್ಕೆ ಸರಾಸರಿ 1.18 ಮಿಲಿಯನ್ ಡಾಲರ್ ಮೌಲ್ಯದ ಬ್ಯಾರೆಲ್‌ಗಳ ಆಮದು ಮಾಡಿಕೊಳ್ಳುತ್ತಿದೆ. ರಷ್ಯಾದ ಪ್ರಮುಖ ಇಂಧನ ಪಾಲುದಾರನ ಸ್ಥಾನಮಾನವನ್ನು ಕಾಯ್ದುಕೊಂಡಿದ್ದರೂ ಹಲವಾರು ಭಾರತೀಯ ಸಂಸ್ಕರಣಾಗಾರರು ಖರೀದಿಯನ್ನು ಕಡಿಮೆ ಮಾಡುತ್ತಿದ್ದಾರೆ.

ನಿರೀಕ್ಷೆ ಏನು?

ಭಾರತವು ಒಂದೇ ವಾರದೊಳಗೆ ಯುರೋಪಿಯನ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಎರಡರೊಂದಿಗೂ ಸತತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದೆ. ಈ ಮೂಲಕ ಭಾರತವು ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಪ್ರತ್ಯೇಕತೆಯ ಅಪಾಯವನ್ನು ದೂರಮಾಡಿದೆ ಎನ್ನುತ್ತಾರೆ ತಜ್ಞರು.

ಯುರೋಪಿಯನ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಭಾರತ ನಡೆಸಿರುವ ಒಪ್ಪಂದದ ಪರಿಣಾಮ ಚೀನಾ+1 ಉತ್ಪಾದನಾ ವಿಷಯವು ಪುನರುಜ್ಜೀವಗೊಳ್ಳುವ ನಿರೀಕ್ಷೆ ಇದೆ. ಯುಎಸ್ ಈಗ ಭಾರತಕ್ಕೆ ಶೇ. 18ರಷ್ಟು ಸುಂಕ ವಿಧಿಸಿದ್ದು, ಈ ಮೂಲಕ ವಿಯೆಟ್ನಾಂ, ಬಾಂಗ್ಲಾದೇಶಕ್ಕಿಂತ ಹೆಚ್ಚಿನ ಲಾಭವನ್ನು ಪಡೆಯಲಿದೆ. ಈ ದೇಶಗಳಿಗೆ ಅಮೆರಿಕ ಶೇ. 20ರಷ್ಟು ಸುಂಕವಿದೆ. ಇನ್ನು ಚೀನಕ್ಕೆ ಶೇ. 34ರಷ್ಟು ಸುಂಕವಿದೆ.

ಭಾರತ ಮತ್ತು ಯುಎಸ್ ನಡುವಿನ ವ್ಯಾಪಾರ ಒಪ್ಪಂದ ರೂಪಾಯಿಯನ್ನು ಸ್ಥಿರಗೊಳಿಸಿ ದೇಶಿಯ ಉತ್ಪಾದನೆಯನ್ನು ಹೆಚ್ಚಿಸಲಿದೆ. ಅಲ್ಲದೇ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ವಿದೇಶಿ ಪೋರ್ಟ್‌ಫೋಲಿಯೋ ಹೂಡಿಕೆ (ಎಫ್‌ಪಿಐ) ಯನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ತಜ್ಞರು.

ಸುಂಕ ಕಡಿತದ ಪರಿಣಾಮ

ಯುಎಸ್ ಸುಂಕ ಕಡಿತವು ಭಾರತದ ಕಾರ್ಮಿಕ ತೀವ್ರ ರಫ್ತು ವಲಯಗಳನ್ನು ಪ್ರೋತ್ಸಾಹಿಸಲಿದೆ. ಭಾರತಕ್ಕೆ ಅಮೆರಿಕವು ಜವಳಿ ಮತ್ತು ಉಡುಪು ಉದ್ಯಮಕ್ಕೆ ಅತಿದೊಡ್ಡ ಮಾರುಕಟ್ಟೆಯಾಗಿದೆ. ಅಲ್ಲದೇ ಆಟೋ ಮತ್ತು ಎಂಜಿನಿಯರಿಂಗ್ ವಲಯಗಳಿಗೂ ಇದರಿಂದ ಉತ್ತೇಜನ ಸಿಗಲಿದೆ. ಸಮುದ್ರಾಹಾರ ಉದ್ಯಮದ ರಫ್ತು ಪ್ರಮಾಣದಲ್ಲಿ ತೀವ್ರ ಚೇತರಿಕೆಯಾಗುವ ನಿರೀಕ್ಷೆ ಇದೆ.

ವೆನೆಜುವೆಲಾ ಜತೆ ಸಂಬಂಧ ಸದೃಢಗೊಳಿಸಲು ಹಂಗಾಮಿ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ

ಭಾರತ- ಇಯು ಒಪ್ಪಂದ

ಯುರೋಪಿಯನ್ ಒಕ್ಕೂಟದೊಂದಿಗೆ ಭಾರತದ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮವಾದಂತೆ ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವೂ ಅಂತಿಮಗೊಂಡಿದೆ. ಇಯುನೊಂದಿಗೆ ಭಾರತದ ವ್ಯಾಪಾರ ಒಪ್ಪಂದವು ಇದುವರೆಗಿನ ಅತಿದೊಡ್ಡ ಮುಕ್ತ ವ್ಯಾಪಾರ ಒಪ್ಪಂದವಾಗಿದೆ. ಇದು 2032 ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ. ಈ ಒಪ್ಪಂದದ ಪ್ರಕಾರ ಜವಳಿ, ಚರ್ಮ ಮತ್ತು ರತ್ನಗಳು ಸೇರಿದಂತೆ ಭಾರತದ ರಫ್ತು ಮಾರ್ಗಗಳ ಮೇಲಿನ ಶೇ. 97ರಷ್ಟು ಸುಂಕಗಳನ್ನು ತಕ್ಷಣವೇ ತೆಗೆದುಹಾಕಲು ಇಯು ಒಪ್ಪಿಕೊಂಡಿದೆ. ಅಲ್ಲದೇ ತನ್ನ ದೇಶೀಯ ಮಾರುಕಟ್ಟೆಗೆ ಇಯುಗೆ ಭಾರತ ಅಭೂತಪೂರ್ವ ಅವಕಾಶವನ್ನು ನೀಡಿದೆ. ಈ ಎರಡು ಒಪ್ಪಂದಗಳು ಭಾರತದ ಆರ್ಥಿಕತೆಯಲ್ಲಿ ಹೊಸ ಯುಗದ ಪ್ರಾರಂಭವನ್ನು ಸೂಚಿಸುತ್ತದೆ ಎನ್ನುತ್ತಾರೆ ಆರ್ಥಿಕ ತಜ್ಞರು.