ಭೋಪಾಲ್, ಮಾ. 16: ಭಾರತೀಯ ಮೂಲದ ವಿದ್ಯಾರ್ಥಿಯನ್ನು ಕೆನಡಾದಲ್ಲಿ (Canada) ಕಾಲೇಜು ಸಹಪಾಠಿಗಳೇ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಧ್ಯ ಪ್ರದೇಶದ ಉಜ್ಜಯಿನಿ ಮೂಲದ 23 ವರ್ಷದ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ಉನ್ನತ ಶಿಕ್ಷಣ ಪಡೆಯಲು ವಿದೇಶಕ್ಕೆ ತೆರಳಿದ್ದ ಗುರ್ಕಿರತ್ ಸಿಂಗ್ ಮನೋಚಾ ಅವರಿಗೆ ಮಾರ್ಚ್ 14ರಂದು ಫೋರ್ಟ್ ಸೇಂಟ್ ಜಾನ್ ನಗರದಲ್ಲಿ ಯುವಕರ ಗುಂಪೊಂದು ಹಲ್ಲೆ ನಡೆಸಿ, ವಾಹನ ಡಿಕ್ಕಿ ಹೊಡೆಸಿದೆ. ಇದರ ಪರಿಣಾಮ ಅವರು ಮೃತಪಟ್ಟರು (Crime News) ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ವೈದ್ಯರು ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅವರು ನಾರ್ದರ್ನ್ ಲೈಟ್ಸ್ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೆಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆಯಲು ಕೆನಡಾಕ್ಕೆ ಪ್ರಯಾಣ ಬೆಳೆಸಿದ್ದರು.
ಮಧ್ಯ ಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಈ ಘಟನೆಗೆ ಸಂತಾಪ ಸೂಚಿಸಿದ್ದು, ತೀವ್ರ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ. ಛತ್ತೀಸ್‌ಗಢದ ರಾಯ್‌ಪುರದಲ್ಲಿ ವಾಸಿಸುವ ಗುರ್ಕಿರತ್ ಸಿಂಗ್ ಅವರ ಹಿರಿಯ ಸಹೋದರ ಪ್ರಬ್ಕೀರತ್ ಸಿಂಗ್, ಈ ಸುದ್ದಿ ತಮಗೆ ಭೀಕರ ಆಘಾತವನ್ನುಂಟು ಮಾಡಿತು ಎಂದು ಹೇಳಿದರು.
ರಸಗುಲ್ಲ ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು; ಮದುವೆ ಮನೆಯಲ್ಲಿ ಘೋರ ದುರಂತ
ಗುರ್ಕೀರತ್ ಅಧ್ಯಯನದ ಜತೆಗೆ ವಾಲ್‌ಮಾರ್ಟ್ ಅಂಗಡಿಯಲ್ಲಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಘಟನೆಯ ರಾತ್ರಿ ಶಿಫ್ಟ್ ಮುಗಿಸಿದ ನಂತರ, ನಾರ್ದರ್ನ್ ಲೈಟ್ಸ್ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು ಎಂದು ವರದಿಯಾಗಿದೆ. ಕೆಲವು ಯುವಕರ ನಡುವೆ ಮೊದಲೇ ವಿವಾದವಿತ್ತು ಎಂದು ಹೇಳಲಾಗಿದೆ. ಈ ವೇಳೆ ಘರ್ಷಣೆ ನಡೆಯಿತು.
ಘರ್ಷಣೆಯ ಸಮಯದಲ್ಲಿ, ಹಲವು ಯುವಕರು ಅವರ ಮೇಲೆ ಹಲ್ಲೆ ನಡೆಸಿ, ನಂತರ ವಾಹನದಿಂದ ಡಿಕ್ಕಿ ಹೊಡೆಸಿದ್ದಾರೆ. ಕೃತ್ಯದಲ್ಲಿ ಸುಮಾರು 10ರಿಂದ 12 ಯುವಕರು ಭಾಗಿಯಾಗಿದ್ದಾರೆಂದು ಎಂದು ಪ್ರಬ್ಕಿರತ್ ಹೇಳಿದರು.
ಹುಡುಗರ ಗುಂಪೊಂದು ತೀವ್ರವಾಗಿ ಥಳಿಸಿ ನಂತರ ಮೈಮೇಲೆ ವಾಹನ ಹರಿಸಲಾಯಿತು. ಪೊಲೀಸರು ಆರಂಭದಲ್ಲಿ ಕೆಲವು ಶಂಕಿತರನ್ನು ಬಂಧಿಸಿದ್ದರು. ಆದರೆ ನಂತರ ಅವರ ವಕೀಲರು ಬಂದ ನಂತರ ಬಿಡುಗಡೆ ಮಾಡಲಾಯಿತು ಎಂದು ಅವರು ಹೇಳಿದರು. ನಂತರ ಕೆನಡಾದ ಅಧಿಕಾರಿಗಳು ಆಸ್ಪತ್ರೆಯಲ್ಲಿ ಗುರ್ಕಿರತ್ ಅವರ ಗುರುತನ್ನು ದೃಢಪಡಿಸಿದರು.
ಪೊಲೀಸರು ಪ್ರಸ್ತುತ ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ. ನಂತರ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಗುರ್ಕೀರತ್ ಅವರ ಮೃತದೇಹವನ್ನು ಭಾರತಕ್ಕೆ ತರುವ ಪ್ರಕ್ರಿಯೆಯೂ ಆರಂಭವಾಗಿದೆ. ಕುಟುಂಬದ ಪ್ರಕಾರ, ಕಾನೂನುಕ್ರಮಗಳ ನಂತರ ವಾಪಸಾತಿಗೆ ಸುಮಾರು ಮೂರು ವಾರಗಳು ಬೇಕಾಗಬಹುದು. ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುವಂತೆ ಕುಟುಂಬವು ಸರ್ಕಾರಕ್ಕೆ ಮನವಿ ಮಾಡಿದೆ.