ವಾಷಿಂಗ್ಟನ್, ಸೆ. 15: ಅಮೆರಿಕದ ನ್ಯೂಯಾರ್ಕ್‌ನ (New York) ಲೋವರ್ ಮ್ಯಾನ್‌ಹ್ಯಾಟನ್ (Lower Manhattan) ಸ್ಪ್ರಿಂಗ್ ಸ್ಟ್ರೀಟ್ ಸುರಂಗ ರೈಲು ನಿಲ್ದಾಣದಲ್ಲಿ (Spring Street Subway Station) ಸಂಭವಿಸಿದ ಭೀಕರ ಆಪಘಾತದಲ್ಲಿ ಭಾರತೀಯ ಮೂಲದ ಯುವತಿ ಮಲೈಕಾ ಚಿತ್ರೆ ಹಾಗೂ ಆಕೆಯ ಸ್ನೇಹಿತ, ನೇಪಾಳ ಮೂಲದ ನವಮ್ ಕೌಲ್ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ಇಬ್ಬರಿಗೂ 24 ವರ್ಷ ವಯಸ್ಸಾಗಿತ್ತು.
ಭಾನುವಾರ (ಸೆಪ್ಟೆಂಬರ್ 13) ಮುಂಜಾನೆ ದಕ್ಷಿಣ ದಿಕ್ಕಿನಲ್ಲಿ ಸಂಚರಿಸುತ್ತಿದ್ದ ರೈಲು ನಾಲ್ಕನೇ ಸಂಖ್ಯೆಯ ಸುರಂಗ ಪ್ರವೇಶಿಸಿದಾಗ ಇಬ್ಬರೂ ಹಳಿಯ ಮೇಲಿದ್ದರು. ರೈಲು ಚಾಲಕಿ ಇಬ್ಬರು ಹಳಿಯ ಮೇಲೆ ಕುಳಿತಿರುವುದನ್ನು ಗಮನಿಸಿ ತುರ್ತು ಬ್ರೇಕ್ ಹಾಕಿದರೂ ರೈಲನ್ನು ಸಮಯಕ್ಕೆ ನಿಲ್ಲಿಸಲು ಸಾಧ್ಯವಾಗಲಿಲ್ಲ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಮೆರಿಕದಲ್ಲಿ ರೈಲು ಹರಿದು ಮೃತಪಟ್ಟ ಭಾರತೀಯ ಯುವತಿ ಮತ್ತು ಸ್ನೇಹಿತ:
ಘಟನೆಯ ಕೆಲವೇ ಕ್ಷಣಗಳ ಹಿಂದಿನ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿದ್ದು, ಇಬ್ಬರೂ ಹಳಿಯ ಮೇಲೆ ಕುಳಿತಿರುವುದು ಕಂಡುಬಂದಿದೆ. ಚಾಲಕಿಯ ಹೇಳಿಕೆಯ ಪ್ರಕಾರ, ಮಲೈಕಾ ನಗುತ್ತಾ ನವಮ್ ಅವರನ್ನು ತನ್ನ ಕಡೆಗೆ ಎಳೆಯುತ್ತಿರುವಂತೆ ಕಾಣಿಸಿಕೊಂಡಿದ್ದರು. ಆದರೆ ಅವರು ಹಳಿಗೆ ಹೇಗೆ ಬಂದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸ್ ಮೂಲಗಳ ಪ್ರಕಾರ, ನವಮ್ ಮೊದಲು ಹಳಿಗೆ ಬಿದ್ದಿರಬಹುದು ಅಥವಾ ಸ್ವತಃ ಕೆಳಗಿಳಿದಿರಬಹುದು. ಅವರನ್ನು ರಕ್ಷಿಸಲು ಮಲೈಕಾ ಹಳಿಗೆ ಇಳಿದಿರುವ ಸಾಧ್ಯತೆಯನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಇಬ್ಬರೂ ಹಳಿಯ ಮೇಲೆ ಏಕೆ ಇದ್ದರು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ. ಅಪಘಾತದ ಬಳಿಕ ರೈಲಿನಲ್ಲಿದ್ದ ಸುಮಾರು 100 ಪ್ರಯಾಣಿಕರನ್ನು ಸುರಕ್ಷಿತವಾಗಿ ಪ್ಲಾಟ್‌ಫಾರ್ಮ್‌ಗೆ ಸ್ಥಳಾಂತರಿಸಲಾಯಿತು. ಇಬ್ಬರ ಮೃತದೇಹಗಳನ್ನು ರೈಲಿನ ಬೋಗಿಗಳ ಕೆಳಗಿನಿಂದ ಹೊರತೆಗೆಯಲಾಯಿತು.
ಮೃತರ ಹಿನ್ನೆಲೆ
ನ್ಯೂಜೆರ್ಸಿಯ ಡೇಟನ್ ನಿವಾಸಿ ಮಲೈಕಾ ಚಿತ್ರೆ ರಟ್ಗರ್ಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ 2024ರಲ್ಲಿ ಪದವಿ ಪಡೆದಿದ್ದರು. ಅವರು ಔಷಧೀಯ ಸಂಸ್ಥೆಯೊಂದರಲ್ಲಿ ಕಾರ್ಯಾಚರಣೆ ತಜ್ಞೆಯಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಔಷಧ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗವನ್ನೂ ಆರಂಭಿಸಿದ್ದರು. ಸೈರೆವಿಲ್ಲೆ ನಿವಾಸಿ ನವಮ್ ಕೌಲ್ ರಟ್ಗರ್ಸ್ ವ್ಯವಹಾರ ಶಾಲೆಯಲ್ಲಿ ವ್ಯಾಸಂಗ ಮಾಡಿ 2024ರಲ್ಲಿ ಹಣಕಾಸು ವಿಭಾಗದಲ್ಲಿ ಪದವಿ ಪಡೆದಿದ್ದರು. ಬಳಿಕ ಅವರು ಬ್ಲೂಮ್‌ಬರ್ಗ್ ಸಂಸ್ಥೆಯಲ್ಲಿ ಹಣಕಾಸು ದತ್ತಾಂಶ ವಿಶ್ಲೇಷಕರಾಗಿ ಕೆಲಸ ಮಾಡುತ್ತಿದ್ದರು.
ಇಬ್ಬರೂ ರಟ್ಗರ್ಸ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳಾಗಿದ್ದು, ಹಲವು ವರ್ಷಗಳಿಂದ ಆತ್ಮೀಯ ಸ್ನೇಹಿತರಾಗಿದ್ದರು. ಅವರ ಸಾವಿನ ಸುದ್ದಿ ಸ್ನೇಹಿತರು, ಸಹಪಾಠಿಗಳು ಹಾಗೂ ವಿಶ್ವವಿದ್ಯಾಲಯದ ಸಮುದಾಯದಲ್ಲಿ ಆಘಾತ ಮೂಡಿಸಿದೆ. ರಟ್ಗರ್ಸ್ ವಿಶ್ವವಿದ್ಯಾಲಯ ಕೂಡ ಇಬ್ಬರ ಸಾವಿಗೆ ಸಂತಾಪ ವ್ಯಕ್ತಪಡಿಸಿದೆ.
ತನಿಖಾಧಿಕಾರಿಗಳು ಅಪಘಾತದ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದು, ಅವರು ಹಳಿಯ ಮೇಲೆ ಏಕೆ ಇದ್ದರು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಮಾದಕ ವಸ್ತು ಅಥವಾ ಮದ್ಯಪಾನದ ಪರಿಣಾಮದಿಂದ ಅಪಾಯವನ್ನು ಅರಿಯಲು ಸಾಧ್ಯವಾಗದಿರಬಹುದೇ ಎಂಬ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಯಾವುದೇ ಆತ್ಮಹತ್ಯಾ ಪತ್ರ ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.