ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಡೊನಾಲ್ಡ್‌ ಟ್ರಂಪ್‌ ‘ಬೋರ್ಡ್ ಆಫ್ ಪೀಸ್’ಗೆ ಸೇರಲು ಭಾರತ ನಕಾರ! ಕಾರಣವೇನು?

ಪ್ಯಾಲಸ್ತೀನ್‌ನ ಗಾಜಾದಲ್ಲಿ ಶಾಂತಿ ಸ್ಥಾಪನೆಗಾಗಿ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಲಿರುವ ‘ಬೋರ್ಡ್ ಆಫ್ ಪೀಸ್’ ಸೇರಲು 11 ದೇಶಗಳು ಸಹಿ ಹಾಕಿವೆ. ಆದರೆ ಈ ಸಹಿ ಕಾರ್ಯಕ್ರಮದಿಂದ ಭಾರತ ದೂರ ಉಳಿದಿದೆ. ಗಾಜಾ ಪ್ರದೇಶದಲ್ಲಿ ಶಾಶ್ವತ ಶಾಂತಿ ತರಲು ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸಲು ರಚಿಸಲಾದ ಈ ಮಂಡಳಿಗೆ ಸೇರಲು ಆಯೋಜಿಸಲಾದ ಸಹಿ ಹಾಕವ ಕಾರ್ಯಕ್ರಮದಿಂದ ಭಾರತ ಅಂತರ ಕಾಯ್ದುಕೊಂಡಿದೆ. ಅದೇಕೆ ಎನ್ನುವ ವಿವರ ಇಲ್ಲಿದೆ.

ಬೋರ್ಡ್ ಆಫ್ ಪೀಸ್‌ನ ಸದಸ್ಯರು

ದಾವೋಸ್‌, ಜ. 23: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) 11 ದೇಶಗಳನ್ನು ತಮ್ಮ 'ಶಾಂತಿ ಮಂಡಳಿʼ (Board of Peace)ಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಮಾಸ್–ಇಸ್ರೇಲ್ (Hamas-Israel) ಯುದ್ಧದಿಂದ ನಾಶಗೊಂಡ ಗಾಜಾ ಪ್ರದೇಶದಲ್ಲಿ ಶಾಶ್ವತ ಶಾಂತಿ ಸ್ಥಾಪಿಸಲು ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸಲು ರಚಿಸಲಾದ ಈ ಮಂಡಳಿಗೆ ಸೇರಲು ಆಯೋಜಿಸಲಾದ ಸಹಿ ಹಾಕವ ಕಾರ್ಯಕ್ರಮದಿಂದ ಭಾರತ ದೂರ ಉಳಿದಿದೆ.

ಅಮೆರಿಕವನ್ನು ಹೊರತುಪಡಿಸಿದರೆ, ಜಿ7 ಗ್ರೂಪ್‌ನ ಯಾವುದೇ ಸದಸ್ಯ ರಾಷ್ಟ್ರವೂ ಟ್ರಂಪ್‌ ಅವರ ಈ ‘ಬೋರ್ಡ್ ಆಫ್ ಪೀಸ್’ಗೆ ಸೇರಿಲ್ಲ. ಆದರೆ ಪಾಕಿಸ್ತಾನ ಈ ಶಾಂತಿ ಮಂಡಳಿಯ ನಿಯಮಗಳಿಗೆ ಸಹಿ ಹಾಕಿದೆ.

ಭಾರತ ಗೈರಾದ ಬಗ್ಗೆ ತಿಳಿದಿದೆ: ಟ್ರಂಪ್

ಕಳೆದ ವಾರ ಟ್ರಂಪ್ ಸುಮಾರು 60 ದೇಶಗಳಿಗೆ ‘ಬೋರ್ಡ್ ಆಫ್ ಪೀಸ್’ಗೆ ಸೇರಲು ಆಹ್ವಾನ ಕಳುಹಿಸಿದ್ದು, ಅದರಲ್ಲಿ ಭಾರತವೂ ಸೇರಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸ್ವಿಟ್ಜರ್‌ಲ್ಯಾಂಡ್‌ನ ಸ್ವಿಸ್ ಪರ್ವತ ರೆಸಾರ್ಟ್‌ನಲ್ಲಿ ನಡೆದ ಸಹಿ ಹಾಕುವ ಸಮಾರಂಭದಲ್ಲಿ ಯಾವುದೇ ಭಾರತೀಯ ಅಧಿಕಾರಿಗಳು ಹಾಜರಿರಲಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಮಂಡಳಿಗೆ ಸೇರ್ಪಡೆಗೊಳ್ಳುವ ಕುರಿತು ಭಾರತ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

ಫ್ರಾನ್ಸ್ ಮತ್ತು ರಷ್ಯಾ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಿಲುವುಗಳನ್ನು ಭಾರತ ಗಮನಿಸುತ್ತಿದೆ. ‘ಬೋರ್ಡ್ ಆಫ್ ಪೀಸ್’ ಯುನೈಟೆಡ್ ನೇಷನ್ಸ್ (ಯುಎನ್) ಅನ್ನು ದುರ್ಬಲಗೊಳಿಸಬಹುದೇ ಮತ್ತು ಟ್ರಂಪ್ ಶಾಶ್ವತವಾಗಿ ಈ ಸಂಸ್ಥೆಯ ಅಧ್ಯಕ್ಷರಾಗುವ ಸಾಧ್ಯತೆ ಇದೆಯೇ ಎಂಬ ಬಗ್ಗೆ ಭಾರತ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಟ್ರಂಪ್, ಕಳೆದ ಮೇಯಲ್ಲಿ ನಡೆದ ಭಾರತ–ಪಾಕಿಸ್ತಾನ ಸೇನಾ ಸಂಘರ್ಷ ಸೇರಿದಂತೆ ಒಂಬತ್ತು ತಿಂಗಳಲ್ಲಿ ಎಂಟು ಯುದ್ಧಗಳನ್ನು ತಾವೇ ಕೊನೆಗೊಳಿಸಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಲಕ್ಷಾಂತರ ಜನರ ಜೀವ ಉಳಿಸಿದಕ್ಕಾಗಿ ತನ್ನನ್ನು ಶ್ಲಾಘಿಸಿದ್ದಾರೆ ಎಂತಲೂ ಟ್ರಂಪ್ ತಿಳಿಸಿದ್ದಾರೆ.

‘ಬೋರ್ಡ್ ಆಫ್ ಪೀಸ್’ನಲ್ಲಿ ಗಾಜಾ ಕುರಿತು ಉಲ್ಲೇಖವಿಲ್ಲ

ವರದಿಗಳ ಪ್ರಕಾರ, ಬೋರ್ಡ್‌ ನಿಯಮಗಳಲ್ಲಿ ಗಾಜಾ ಕುರಿತು ಯಾವುದೇ ಉಲ್ಲೇಖವಿಲ್ಲ. ಆದಾಗ್ಯೂ, ಇದು ಸ್ಥಿರತೆಯನ್ನು ಉತ್ತೇಜಿಸಲು, ವಿಶ್ವಾಸಾರ್ಹ ಮತ್ತು ಕಾನೂನುಬದ್ಧ ಆಡಳಿತವನ್ನು ಮರುಸ್ಥಾಪಿಸಲು ಮತ್ತು ಸಂಘರ್ಷದಿಂದ ಪ್ರಭಾವಿತವಾಗಿರುವ ಅಥವಾ ಬೆದರಿಕೆಯಿರುವ ಪ್ರದೇಶಗಳಲ್ಲಿ ಶಾಶ್ವತವಾದ ಶಾಂತಿಯನ್ನು ಕಾಪಾಡಲು ಪ್ರಯತ್ನಿಸುವ ಅಂತಾರಾಷ್ಟ್ರೀಯ ಸಂಸ್ಥೆ ಎಂದು ನಿಯಮಗಳಲ್ಲಿ ಹೇಳಲಾಗಿದೆ.

ʼʼತುಂಬ ಹೊತ್ತಿನಿಂದ ನಿಂತಿದ್ದಿ, ಸುಸ್ತಾಗಿರುತ್ತೆ....ʼʼ; ಅರ್ಧಕ್ಕೆ ಭಾಷಣ ನಿಲ್ಲಿಸಿ ಪೈಟಿಂಗ್‌ ಹಿಡಿದ ಬಾಲಕನ ಜತೆ ಮಾತನಾಡಿದ ಪ್ರಧಾನಿ ಮೋದಿ

ಭಾರತ ಸ್ಪಷ್ಟನೆ

ಭಾರತ ಮತ್ತು ಪಾಕಿಸ್ತಾನ ಸೇನಾ ಅಧಿಕಾರಿಗಳು ನಾಲ್ಕು ದಿನಗಳ ಬಳಿಕ ಪರಸ್ಪರ ಒಪ್ಪಂದಕ್ಕೆ ಬಂದಾಗಲೇ ಸಂಘರ್ಷ ಅಂತ್ಯಗೊಂಡಿತು ಎಂದು ಭಾರತ ಸ್ಪಷ್ಟಪಡಿಸಿದ್ದು, ಸಂಘರ್ಷವನ್ನು ತಾನೇ ಕೊನೆಗೊಳಿಸಿದ್ದೇನೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ತಿರಸ್ಕರಿಸಿದೆ.

ಇನ್ನು ಈ ʼಬೋರ್ಡ್ ಆಫ್ ಪೀಸ್‌ಗೆʼ ಅರ್ಜೆಂಟಿನಾ, ಆರ್ಮೇನಿಯಾ, ಅಜರ್ಬೈಜಾನ್, ಬುಲ್ಗೇರಿಯಾ, ಹಂಗೇರಿ, ಇಂಡೋನೇಶಿಯಾ, ಕಜಕಸ್ತಾನ್, ಕೊಸೊವೊ, ಪಾಕಿಸ್ತಾನ, ಪರಾಗ್ವೆ ಮತ್ತು ಉಜ್ಬೇಕಿಸ್ತಾನ್ ಸಹಿ ಹಾಕಿವೆ. ಇದಲ್ಲದೆ, ಬಹ್ರೇನ್, ಜೋರ್ಡಾನ್, ಮೊರಾಕೊ, ಕತಾರ್, ಸೌದಿ ಅರೇಬಿಯಾ, ಟರ್ಕಿ, ಯುಎಇ ಮತ್ತು ಮೊಂಗೋಲಿಯಾ ಸೇರಿದಂತೆ ಎಂಟು ದೇಶಗಳ ಹಿರಿಯ ಅಧಿಕಾರಿಗಳು ಸಹಿ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.