ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Iran- Israel War: ಅಬುಧಾಬಿಯಲ್ಲಿ ಸಿಲುಕಿದ ಕನ್ನಡಿಗರು; ನೆರವಿಗೆ ಮನವಿ ಮಾಡಿದ ಕುಟುಂಬ

ಅಮೆರಿಕ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಅಬುಧಾಬಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಹಾವೇರಿಯ ಕುಟುಂಬವೊಂದು ತಮ್ಮನ್ನು ತಾಯ್ನಾಡಿಗೆ ಕರೆ ತರುವಂತೆ ಮನವಿ ಮಾಡಿದೆ.

ಸಾಂದರ್ಭಿಕ ಚಿತ್ರ.

ಅಬಿಧಾಬಿ, ಮಾ. 2: ಅಮೆರಿಕ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆ ನಡೆಸಿ ಇರಾನ್‌ನ ಸರ್ವೋಚ್ಚ ನಾಯಕನಾಗಿದ್ದ ಆಯತೊಲ್ಲ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಮಧ್ಯಪ್ರಾಚ್ಯ ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ತಲೆದೋರಿದೆ (Iran- Israel War). ದಿನ ಕಳೆದಂತೆ ವಾತಾವರಣ ಬಿಗಡಾಯಿಸುತ್ತಿದ್ದು, ಕೊಲ್ಲಿ ರಾಷ್ಟ್ರಗಳ ಮೇಲೂ ದಾಳಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಆತಂಕದಿಂದ ದಿನ ದೂಡುತ್ತಿದ್ದು, ತಮ್ಮ ಕಟ್ಟಡದ ಸಮೀಪವೇ ಬಾಂಬ್‌ ದಾಳಿ ನಡೆಯುತ್ತಿರುವ ಬಗ್ಗೆ ವಿವರಿಸಿದ್ದಾರೆ. ಅಬುಧಾಬಿಯಲ್ಲಿ ನೆಲೆಸಿರುವ ಹಾವೇರಿ ಮೂಲದ ಕುಟುಂಬವೂ ಇದೀಗ ಸಂಕಷ್ಟಕ್ಕೆ ಸಿಲುಕಿದೆ.

ಹಾವೇರಿ ಮೂಲದ ಟೆಕ್ಕಿ ಕುಟುಂಬವೊಂದು ಕೆಲವು ಸಮಯಗಳಿಂದ ಅಬುಧಾಬಿಯಲ್ಲಿ ನೆಲೆಸಿದೆ. ಪತಿ, ಪತ್ನಿ ಮತ್ತು ಅವರ ಇಬ್ಬರು ಮಕ್ಕಳು ಅಲ್ಲಿದ್ದು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದೆ.

ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್‌ ರಾಘವೇಂದ್ರ ಕುದುರಿ ಕೆಲವು ಸಮಯಗಳಿಂದ ಯುಇಎಯ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ಇದೀಗ ಅವರು ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಅಚ್ಚರಿ ಎಂದರೆ ಕೆಲವು ದಿನಗಳ ಹಿಂದೆಯಷ್ಟೇ ಅವರು ಪತ್ನಿ ಮತ್ತು ಮಕ್ಕಳನ್ನು ಅಲ್ಲಿಗೆ ಕರೆಸಿಕೊಂಡಿದ್ದರಂತೆ.

ರಾಯಭಾರಿಗಳ ಜತೆ ಮಾತುಕತೆ, ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಪ್ರಹ್ಲಾದ ಜೋಶಿ

ರಾಘವೇಂದ್ರ ಕುದುರಿ ಹೇಳಿದ್ದೇನು?

ʼʼನಾನು ಕೆಲವು ವರ್ಷಗಳಿಂದ ಅಬುಧಾಬಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮೊದಲು ನಾನೊಬ್ಬನ್ನೇ ಇಲ್ಲಿದ್ದೆ. ತಿಂಗಳ ಹಿಂದೆಯಷ್ಟೇ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೆ. ಇದೀಗ ಇಲ್ಲಿನ ಪರಿಸ್ಥಿತಿ ಗಂಭೀರವಾಗಿದೆ. ಕ್ಷಿಪಣಿ ದಾಳಿಯನ್ನು ಸಮೀಪದಲ್ಲೇ ನೋಡಿ ಭಯಗೊಂಡಿದ್ದೇವೆ. ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಿʼʼ ಎಂದು ಮನವಿ ತಿಳಿಸಿದ್ದಾರೆ.

ಎಲ್ಲ ಭಾರತೀಯರನ್ನೂ ಸುರಕ್ಷಿತವಾಗಿ ಕರೆತರುತ್ತೇವೆ: ಸಚಿವ ಪ್ರಹ್ಲಾದ ಜೋಶಿ

ʼʼಇರಾನ್-ಇಸ್ರೇಲ್ ಯುದ್ಧ ಸನ್ನಿವೇಶದಿಂದ ಸಂಕಷ್ಟದಲ್ಲಿ ಸಿಲುಕಿದ ಕನ್ನಡಿಗರು ಸೇರಿ ಎಲ್ಲ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಅಲ್ಲಿನ ರಾಯಭಾರಿ ಕಚೇರಿ ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆʼʼ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ʼʼಇರಾನ್-ಇಸ್ರೇಲ್ ಯುದ್ಧದ ಭೀಕರತೆಯಿಂದಾಗಿ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಸಂಕಷ್ಟ ಎದುರಿಸುತ್ತಿರುವ ಬಗ್ಗೆ ಮಾಹಿತಿಯಿದ್ದು, ಈ ಸಂಬಂಧ ಹಿರಿಯ ಸಚಿವರೊಂದಿಗೆ ತುರ್ತು ಚರ್ಚೆ ನಡೆಸಲಾಗಿದೆ. ಎಲ್ಲ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕನ್ನಡಿಗರು ಆತಂಕ ಪಡಬೇಕಿಲ್ಲ; ಕನ್ನಡಿಗರು ಮಾತ್ರವಲ್ಲ ಭಾರತೀಯರನ್ನೆಲ್ಲ ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಸನ್ನದ್ಧವಾಗಿದೆ. ಈಗಾಗಲೇ ರಾಯಭಾರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆʼʼ ಎಂದು ಪ್ರಹ್ಲಾದ ಜೋಶಿ ಧೈರ್ಯ ತುಂಬಿದ್ದಾರೆ. ʼʼಯುದ್ಧ ಪೀಡಿತ ಪ್ರದೇಶಗಳಲ್ಲಿ ವಿಮಾನ ಸಂಚಾರ ಅಪಾಯಕಾರಿ ಆಗಿದ್ದು, ತಜ್ಞರ ಸಲಹೆ ಪಡೆಯಲಾಗುತ್ತಿದೆʼʼ ಎಂದಿದ್ದಾರೆ.

ಸದ್ಯ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಕೊಲ್ಲಿ ರಾಷ್ಟ್ರಗಳಲ್ಲಿ ವಿಮಾನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಪರಿಸ್ಥಿತಿ ತಿಳಿಯಾಗುತ್ತಿದ್ದಂತೆ ವಿಮಾನ ಸಂಚಾರ ಪುನರಾರಂಭವಾಗುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author