ಜೋರ್ಡಾನ್: ಇರಾನ್ ದಾಳಿಯಿಂದ (Iran attack) ಜೋರ್ಡಾನ್‌ನ (jordan) ಅಮೆರಿಕನ್ ವಾಯು ನೆಲೆಯಲ್ಲಿದ್ದ (American air base) ಸುಮಾರು ಎಂಟು ಯುದ್ಧ ವಿಮಾನಗಳು ಹಾನಿಗೊಳಗಾಗಿವೆ. ಜೋರ್ಡಾನ್‌ನಲ್ಲಿರುವ ಅಮೆರಿಕನ್ ವಾಯು ನೆಲೆ ಮೇಲೆ ಬುಧವಾರ ರಾತ್ರಿ ಪೂರ್ತಿ ಇರಾನ್ ದಾಳಿ ನಡೆಸಿದ್ದು ಇದರಿಂದ ವಾರ್ಥಾಗ್ ಎಂದು ಕರೆಯಲಾಗುವ ಎ -10 ಥಂಡರ್ಬೋಲ್ಟ್ ವಿಮಾನ ಸೇರಿದಂತೆ ಎಫ್ -15 ಯುದ್ಧ ವಿಮಾನಗಳಿಗೆ ಹಾನಿಯಾಗಿವೆ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಪತ್ರಕರ್ತೆ ಜೆನ್ನಿಫರ್ ಜೇಕಬ್ಸ್ ತಿಳಿಸಿದ್ದಾರೆ.
ಇರಾನ್ ಯುಎಸ್ ನೌಕಾಪಡೆಯ ಯುದ್ಧನೌಕೆಯನ್ನು ಗುರಿಯಾಗಿಸಿಕೊಂಡಿದ್ದಕ್ಕೆ ಪ್ರತೀಕಾರವಾಗಿ ಯುಎಸ್ ಐದು ಇರಾನಿನ ಟ್ಯಾಂಕರ್‌ಗಳ ಮೇಲೆ ದಾಳಿ ಮಾಡಿದ ಬಳಿಕ ಮುಂದುವರಿದ ಸಂಘರ್ಷದ ಭಾಗವಾಗಿ ಮುವಾಫಾಕ್ ಸಾಲ್ಟಿ ವಾಯುನೆಲೆ ಮೇಲೆ ನಡೆದ ದಾಳಿಯಲ್ಲಿ ಎ-10 ಥಂಡರ್ಬೋಲ್ಟ್ ವಿಮಾನದ ರೆಕ್ಕೆ ಕಾಣೆಯಾಗಿದೆ. ಸುಮಾರು ಎಂಟು ಎಫ್-15 ವಿಮಾನಗಳಿಗೆ ಸ್ವಲ್ಪ ಹಾನಿಯಾಗಿದೆ. ಅವುಗಳನ್ನು ಪರಿಶೀಲಿಸಿ ಕಾರ್ಯಾಚರಣೆಯಲ್ಲಿ ಇರಿಸಲಾಗಿದೆ ಎಂದು ಹೇಳಿದ್ದಾರೆ.
ಫ್ರಾನ್ಸ್‌ನಲ್ಲಿ ಸಚಿವ ಎಂ.ಬಿ. ಪಾಟೀಲ್; ಲಿಸಿ ಏರೋಸ್ಪೇಸ್, ಆರ್ಕೆಮಾ ಕಂಪನಿಗಳ ಜತೆ ಮಹತ್ವದ ಮಾತುಕತೆ
ಇರಾನ್ ವಿರುದ್ಧ ಜೋರ್ಡಾನ್‌ನಿಂದಲೇ ಪ್ರತಿ ದಾಳಿ ನಡೆಸಿದ ಅಮೆರಿಕನ್ ಪಡೆಗಳು 30ಕ್ಕೂ ಹೆಚ್ಚು ಪೇಟ್ರಿಯಾಟ್ ಕ್ಷಿಪಣಿಗಳನ್ನು ಹಾರಿಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೋರ್ಡಾನ್‌ನಲ್ಲಿರುವ ನೆಲೆ ಸೇರಿದಂತೆ ಎಂಟು ಟ್ಯಾಂಕರ್‌ಗಳು ಮತ್ತು ಎರಡು ಯುದ್ಧನೌಕೆಗಳ ಮೇಲೆ ದಾಳಿ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.
ವಾರದ ಆರಂಭದಲ್ಲಿ ಯುಎಸ್ ಐದು ಇರಾನಿನ ಟ್ಯಾಂಕರ್‌ಗಳ ಮೇಲೆ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಇರಾನ್ ಯುಎಸ್ ಪಡೆಗಳ ಮೇಲೆ ದಾಳಿ ಮಾಡಲು ಅಮೆರಿಕನ್ ವಾಯು ನೆಲೆಗಳಿಗೆ ಜಾಗ ನೀಡಿರುವ ಅದರ ಮಿತ್ರ ರಾಷ್ಟ್ರಗಳ ಮೇಲೆ ತೀವ್ರ ದಾಳಿ ಮುಂದುವರಿಸಿದೆ.
ಜೋರ್ಡಾನ್‌ನ ಅಲ್-ಅಜ್ರಾಕ್ ನೆಲೆಯ ಮೇಲೆ ಭಾರೀ ಕ್ಷಿಪಣಿ ದಾಳಿ ನಡೆಸಿದ್ದು, ಇದರೊಂದಿಗೆ ಹೊರ್ಮುಜ್ ಜಲ ಮಾರ್ಗದ ಹೊರಗೆ ಕೂಡ ನಿಷೇಧಿತ ವಲಯವನ್ನು ವಿಸ್ತರಿಸುವುದಾಗಿ ಇರಾನ್ ಘೋಷಿಸಿತ್ತು. ಇದರ ಬಳಿಕ ಹೊರ್ಮುಜ್ ಜಲಸಂಧಿ ದಾಟಲು ಪ್ರಯತ್ನಿಸಿದ ೧೨ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ ಮಾಡಿರುವುದಾಗಿ ಟೆಹರಾನ್ ಹೇಳಿದೆ.
ಇದರ ಬಳಿಕ ಪ್ರತಿಕ್ರಿಯೆ ನೀಡಿರುವ ಜೋರ್ಡಾನ್ ಮಿಲಿಟರಿ, ತನ್ನ ವಾಯು ಪ್ರದೇಶದೊಳಗೆ ಬಂದ ಸ್ಪೋಟಕಗಳನ್ನು ತಡೆದು ತಟಸ್ಥಗೊಳಿಸಿರುವುದಾಗಿ ತಿಳಿಸಿದೆ. ಜೋರ್ಡಾನ್‌ನ ರಕ್ಷಣಾ ವ್ಯವಸ್ಥೆಗಳು 20 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪತ್ತೆಹಚ್ಚಿದ್ದು, ಅವುಗಳಲ್ಲಿ 18 ಅನ್ನು ನಾಶ ಪಡಿಸಿದೆ. ಇನ್ನೆರಡು ಜನವಸತಿಯಿಲ್ಲದ ಭೂಪ್ರದೇಶದ ಮೇಲೆ ಬಿದ್ದಿದೆ ಎಂದು ಹೇಳಿದೆ.
ಯುದ್ಧ ಅಂತ್ಯ ಮಾಡಬಹುದು ಆದರೆ..
ಇರಾನ್‌ನ ಗಾರ್ಡ್‌ಗಳು ಯುದ್ಧ ಅಂತ್ಯಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ವಾಷಿಂಗ್ಟನ್ ತನ್ನ ಷರತ್ತುಗಳನ್ನು ಈಡೇರಿಸಬೇಕು ಎಂದು ಹೇಳಿದೆ. ಹೊಸ ಬೆದರಿಕೆಯೊಡ್ಡಬಾರದು, ಲೆಬನಾನ್ ನಿಂದ ಇಸ್ರೇಲ್ ಆಡಳಿತ ಸೈನ್ಯವನ್ನುಹಿಂಪಡೆಯಬೇಕು, ಯೆಮೆನ್‌ನ ದಿಗ್ಬಂಧನವನ್ನು ಕೊನೆಗೊಳಿಸಬೇಕು,ಇರಾನ್ ಗೆ 24 ಬಿಲಿಯನ್ ಡಾಲರ್ ಪರಿಹಾರ, ದೇಶದ ಪರಮಾಣು ಮತ್ತು ಕ್ಷಿಪಣಿ ಸಾಮರ್ಥ್ಯ ಪರೀಕ್ಷೆ ಮೇಲೆ ಯಾವುದೇ ಹಸ್ತಕ್ಷೇಪ ಮಾಡಬಾರದು ಎಂದು ತಿಳಿಸಿದೆ.
ಇರಾನ್ ಜೊತೆಗಿನ ಯುದ್ಧ ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೂಡ ಉತ್ಸಾಹಿತರಾಗಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಮಧ್ಯಾವಧಿಯ ಯುಎಸ್ ಚುನಾವಣೆಗಳ ಅನಂತರ ಈ ಸಂಘರ್ಷ ಕೊನೆಯಾಗುತ್ತದೆ ಎಂದು ಅವರು ಹೇಳಿದ್ದರು.