ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕ-ಇಸ್ರೇಲ್‌ ಜಂಟಿ ದಾಳಿಯಲ್ಲಿ ಇರಾನ್‌ ರಕ್ಷಣಾ ಸಚಿವ ಸಾವು? 3ನೇ ಮಹಾಯುದ್ಧ ಫಿಕ್ಸ್‌?

Amir Nasirzadeh: ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುತ್ತಿದ್ದಂತೆ ಮಧ್ಯಪ್ರಾಚ್ಯ ಮತ್ತೆ ಪ್ರಕ್ಷುಬ್ಧವಾಗಿದೆ. ದಾಳಿಯಲ್ಲಿ ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈಗಾಗಲೇ 40 ಮಂದಿ ಮೃತಪಟ್ಟಿರುವುದಾಗಿ ಇರಾನ್‌ ತಿಳಿಸಿದೆ.

ಇರಾನ್‌ನ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ (ಸಂಗ್ರಹ ಚಿತ್ರ)

ಟೆಹರಾನ್‌, ಫೆ. 28: ಅಮೆರಿಕ ಮತ್ತು ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ದಾಳಿ ನಡೆಸುತ್ತಿದ್ದಂತೆ ಮಧ್ಯಪ್ರಾಚ್ಯ ಮತ್ತೆ ಪ್ರಕ್ಷುಬ್ಧವಾಗಿದೆ. ದಾಳಿಯಲ್ಲಿ ಇರಾನ್‌ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ (Amir Nasirzadeh) ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈಗಾಗಲೇ ಇರಾನ್‌ ಕೂಡ ತಿರುಗೇಟು ನೀಡುತ್ತಿದ್ದು, 3ನೇ ವಿಶ್ವ ಮಹಾಯುದ್ಧಕ್ಕೆ ವೇದಿಕೆ ಸಜ್ಜಾಗಿದ್ಯಾ ಎನ್ನುವ ಆತಂಕಕ್ಕೆ ಕಾರಣವಾಗಿದೆ. ಅಮೀರ್ ನಾಸಿರ್ಜಾದೆ ಮೃತಪಟ್ಟಿರುವ ಬಗ್ಗೆ ಇದುವರೆಗೆ ಇರಾನ್‌ ಆಗಲಿ, ಇಸ್ರೇಲ್‌ ಆಗಲಿ ದೃಢಪಡಿಸಿಲ್ಲ.

ಈಗಾಗಲೇ ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್‌ (IRGC) ಮುಖ್ಯಸ್ಥ ಮೊಹಮ್ಮದ್‌ ಪಕ್ಪೌರ್‌ ಹತರಾಗಿದ್ದಾರೆ ಎಂದು ಇಸ್ರೇಲ್‌ ಮಾಧ್ಯಮಗಳು ವರದಿ ಮಾಡಿವೆ. ಇರಾನ್‌ ರಾಜಧಾನಿ ಟೆಹರಾನ್‌ನಲ್ಲಿರುವ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಯ ಬಳಿಯೂ ಇಸ್ರೇಲ್‌-ಅಮೆರಿಕ ವೈಮಾನಿಕ ದಾಳಿ ನಡೆಸಿದೆ. ಮುನ್ನೆಚ್ಚರಿಕಾ ಕ್ರಮಾಗಿ ಖಮೇನಿ ಅವರನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕೆಲವು ವರದಿಗಳ ಪ್ರಕಾರ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರ ನಿವಾಸ / ಕಚೇರಿಯನ್ನು ಗುರಿಯಾಗಿಸಿಕೊಂಡೂ ಇಸ್ರೇಲ್‌ ದಾಳಿ ನಡೆಸಿದೆ. ಆದರೆ ಅಧ್ಯಕ್ಷರ ಪ್ರಸ್ತುತ ಸ್ಥಿತಿಯ ಬಗ್ಗೆ ಇನ್ನೂ ಮಾಹಿತಿ ಹೊರ ಬಿದ್ದಿಲ್ಲ.

ಇರಾನ್‌ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಹತ?



ಬುರ್ಜ್ ಖಲೀಫಾಕ್ಕೂ ತಟ್ಟಿದ ಬಿಸಿ

ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೆಚ್ಚುತ್ತಿರುವ ನಡುವೆಯೇ ಸಂಯುಕ್ತ ಅರಬ್ ಸಂಸ್ಥಾನದಲ್ಲಿಯೂ (UAE) ಸ್ಫೋಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ, ದುಬೈಯಲ್ಲಿ ಬುರ್ಜ್ ಖಲೀಫಾವನ್ನು ಶನಿವಾರ (ಫೆಬ್ರವರಿ 28) ಖಾಲಿ ಮಾಡಲಾಯಿತು. ಈಗಾಗಲೇ ಇರಾನ್‌ ಯುಎಇಯ ಅಬು ಧಾಬಿ, ದುಬೈ ಮತ್ತು ಸೌದಿ ಅರೇಬಿಯಾದ ರಿಯಾದ್‌ ಹಾಗೂ ಕತಾರ್‌ನ ದೋಹಾದ ಮೇಲೆಯೂ ಇರಾನ್‌ ದಾಳಿ ಆರಂಭಿಸಿದೆ. ಭಾರಿ ಸ್ಫೋಟದ ಸದ್ದು ಕೇಳಿಸುತ್ತಿದೆ ಮತ್ತು ಕ್ಷಿಪಣಿಗಳ ಹಾರಾಟ ಕಂಡು ಬರುತ್ತಿದೆ ಎಂದು ದುಬೈಯ ನಿವಾಸಿಗಳು ತಿಳಿಸಿದ್ದಾರೆ. ʼʼಇದು ಭಾರಿ ದೊಡ್ಡ ಸ್ಫೋಟವಾಗಿತ್ತು. ಮನೆಯ ಕಿಟಕಿ ಅಲುಗಾಡಿರುವ ಅನುಭವವಾಗಿದೆʼʼಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಇಸ್ರೇಲ್‌-ಅಮೆರಿಕ ದಾಳಿ: ಇರಾನ್‌ನ 40 ಶಾಲಾ ವಿದ್ಯಾರ್ಥಿನಿಯರು ಸಾವು

ಇರಾನ್‌ ಕ್ಷಿಪಣಿ ದಾಳಿಯ ಪರಿಣಾಮ ವಿಶ್ವದ ಅತ್ಯಂತ ಜನನಿಬಿಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನಿಸಿಕೊಂಡಿರುವ ದುಬೈ ಇಂಟರ್‌ನ್ಯಾಷನ್‌ ಏರ್‌ಪೋರ್ಟ್‌ನಲ್ಲಿ ಶನಿವಾರ ಎಲ್ಲ ವಿಮಾನ ಕಾರ್ಯಾಚರಣೆಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ. ಇದರಿಂದ ನೂರಾರು ಪ್ರಯಾಣಿಕರು ಅತಂತ್ರಗೊಂಡಿದ್ದಾರೆ.

6 ದೇಶಗಳ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ

ಇರಾನ್ ಇಸ್ರೇಲ್ ಹಾಗೂ ಯುಎಇ, ಸೌದಿ ಅರೇಬಿಯಾ, ಕುವೈತ್, ಜೋರ್ಡಾನ್, ಕತಾರ್ ಮತ್ತು ಬಹ್ರೇನ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ನಡೆಸಿದೆ. ಏಕಕಾಲಕಕ್ಕೆ ಕಿಪಣಿ ದಾಳಿ ನಡೆಸಿದ್ದರಿಂದ ಅಮೆರಿಕ ಕೂಡ ತತ್ತರಿಸಿದೆ. ಇದು ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಪ್ರಕ್ಷುಬ್ಧಗೊಳಿಸಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author