ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೊರ್ಮುಜ್‌ ಜಲಸಂಧಿ ಮೇಲಿನ ಹಿಡಿತ ಮತ್ತಷ್ಟು ಬಿಗಿಗೊಳಿಸಿದ ಇರಾನ್‌; ಹೊಸ ಪ್ರಾಧಿಕಾರ ರಚನೆ: ಹಡಗುಗಳ ಸಂಚಾರಕ್ಕೆ ಇನ್ನು ಪೂರ್ವಾನುಮತಿ ಕಡ್ಡಾಯ

PGSA: ಅಮೆರಿಕದೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್ ಪರ್ಷಿಯನ್ ಗಲ್ಫ್ ಸ್ಟ್ರೇಟ್ ಅಥಾರಿಟಿ ಎಂಬ ಹೊಸ ಪ್ರಾಧಿಕಾರವನ್ನು ರಚಿಸಿದೆ. ಆ ಮೂಲಕ ಹೊರ್ಮುಜ್ ಜಲಸಂಧಿಯ ಮೂಲಕ ಸಾಗುವ ಎಲ್ಲ ವಾಣಿಜ್ಯ ಹಡಗುಗಳು ಇನ್ನು ಮುಂದೆ ಇರಾನ್‌ನ ಪೂರ್ವಾನುಮತಿ ಪಡೆಯಬೇಕು ಎಂದು ಘೋಷಿಸಲಾಗಿದೆ. ಹೊಸ ನಿಯಮಗಳಿಂದ ಜಾಗತಿಕ ತೈಲ ಮಾರುಕಟ್ಟೆ ಮತ್ತು ಸಮುದ್ರ ಸಾರಿಗೆ ಕ್ಷೇತ್ರದಲ್ಲಿ ಆತಂಕ ಹೆಚ್ಚಾಗಿದೆ.

ಹೊರ್ಮುಜ್ ಜಲಸಂಧಿ (ಸಂಗ್ರಹ ಚಿತ್ರ)

ನವದೆಹಲಿ, ಮೇ 19: ಅಮೆರಿಕದೊಂದಿಗಿನ ತೀವ್ರ ರಾಜತಾಂತ್ರಿಕ ಹಾಗೂ ಮಿಲಿಟರಿ ಉದ್ವಿಗ್ನತೆಯ ನಡುವೆ, ವಿಶ್ವದ ಅತ್ಯಂತ ಸೂಕ್ಷ್ಮ ಹಾಗೂ ಪ್ರಮುಖ ಕಡಲ ಸಾರಿಗೆ ಮಾರ್ಗವಾದ ಹೊರ್ಮುಜ್ ಜಲಸಂಧಿ (Strait of Hormuz) ಮೇಲೆ ತನ್ನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲು ಇರಾನ್ ಹೊಸ ಕಡಲ ನಿಯಂತ್ರಣ ಮಂಡಳಿಯೊಂದನ್ನು ಅಧಿಕೃತವಾಗಿ ಸ್ಥಾಪಿಸಿದೆ.

ಪರ್ಷಿಯನ್ ಗಲ್ಫ್ ಸ್ಟ್ರೇಟ್ ಅಥಾರಿಟಿ (PGSA) ಹೆಸರಿನ ಈ ಹೊಸ ಪ್ರಾಧಿಕಾರವನ್ನು ಸೋಮವಾರ ಸಾಮಾಜಿಕ ಮಾಧ್ಯಮ Xನಲ್ಲಿ ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಹೊರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರವನ್ನು ನಿರ್ವಹಿಸಲು ಇರಾನ್‌ನ ಏಕೈಕ ಕಾನೂನುಬದ್ಧ ಸಂಸ್ಥೆ ಇದಾಗಿದೆ ಎಂದು ಪ್ರಾಧಿಕಾರ ಘೋಷಿಸಿದೆ. ಇನ್ನು ಮುಂದೆ ಈ ಜಲಮಾರ್ಗದ ಮೂಲಕ ವಾಣಿಜ್ಯ ಹಡಗುಗಳು ಸಂಚರಿಸಬೇಕಾದರೆ ಇರಾನ್ ಮಿಲಿಟರಿ ಮತ್ತು ಸರ್ಕಾರದ ಪೂರ್ಣ ಸಮನ್ವಯ ಸಾಧಿಸುವುದು ಹಾಗೂ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಅನುಮತಿ ಇಲ್ಲದ ಸಂಚಾರವನ್ನು ಸಂಪೂರ್ಣ ಕಾನೂನುಬಾಹಿರ ಎಂದು ಪರಿಗಣಿಸಲಾಗುವುದು ಎಂಬುದಾಗಿ ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ಪರ್ಷಿಯನ್ ಗಲ್ಫ್ ಸ್ಟ್ರೇಟ್ ಅಥಾರಿಟಿ ರಚನೆ:



ಇರಾನ್ ಇತ್ತೀಚೆಗೆ ಪಾಕಿಸ್ತಾನದ ಮೂಲಕ ಅಮೆರಿಕಕ್ಕೆ ಸಲ್ಲಿಸಿದ್ದ ಶಾಂತಿ ಪ್ರಸ್ತಾಪದಲ್ಲಿ ಈ ಜಲಮಾರ್ಗದ ನಿಯಂತ್ರಣದ ಬೇಡಿಕೆ ಇಟ್ಟಿತ್ತು. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದರು. ಇದೀಗ ಇರಾನ್‌ನ ಹೊಸ ಪ್ರಸ್ತಾಪಕ್ಕೂ ಟ್ರಂಪ್ ಪ್ರತಿಕ್ರಿಯಿಸದ ಹಿನ್ನೆಲೆಯಲ್ಲಿ ಇರಾನ್ ಈ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ.

ಸೆಪ್ಟೆಂಬರ್ 12ರಂದು ಭಾರತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭೇಟಿ

ಹೊಸ ನಿಯಮಗಳು ಮತ್ತು ಜಾಗತಿಕ ಪರಿಣಾಮ

ಇರಾನ್ ಮಾಧ್ಯಮಗಳ ಪ್ರಕಾರ, ವಾಣಿಜ್ಯ ಹಡಗುಗಳು ಇನ್ನು ಮುಂದೆ ಇರಾನ್ ನಿರ್ದಿಷ್ಟಪಡಿಸಿದ ಕಡಲ ಕಾರಿಡಾರ್‌ಗಳ ಮೂಲಕವೇ ಚಲಿಸಬೇಕು ಮತ್ತು ತಮ್ಮ ಸರಕು ಹಾಗೂ ಸಿಬ್ಬಂದಿಯ ವಿವರಗಳನ್ನು ಸಲ್ಲಿಸಬೇಕು. ಇರಾನ್‌ಗೆ ಸಹಕರಿಸುವ ದೇಶಗಳಿಗೆ ಮಾತ್ರ ಈ ಮಾರ್ಗ ಮುಕ್ತವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಈ ನಿಯಮ ಭಾರಿ ಸಂಚಲನ ಮೂಡಿಸಿದೆ.

ಪರ್ಷಿಯನ್ ಗಲ್ಫ್ ಅನ್ನು ಒಮಾನ್ ಗಲ್ಫ್ ಮೂಲಕ ಅಂತಾರಾಷ್ಟ್ರೀಯ ಸಮುದ್ರ ಮಾರ್ಗಗಳಿಗೆ ಸಂಪರ್ಕಿಸುವ ಹೊರ್ಮುಜ್ ಜಲಸಂಧಿಯು ಜಾಗತಿಕ ಇಂಧನ ಮಾರುಕಟ್ಟೆಯ ಜೀವನಾಡಿ. ಏಕೆಂದರೆ ವಿಶ್ವದ ಅತಿ ದೊಡ್ಡ ಪ್ರಮಾಣದ ಕಚ್ಚಾ ತೈಲ ಸರಬರಾಜು ಪ್ರತಿದಿನ ಇದೇ ಕಿರಿದಾದ ಮಾರ್ಗದ ಮೂಲಕ ಸಾಗುತ್ತದೆ. ಇರಾನ್-ಅಮೆರಿಕ ಸಂಘರ್ಷದಿಂದಾಗಿ ಉಭಯ ದೇಶಗಳು ಈಗಾಗಲೇ ಇಲ್ಲಿ ನೌಕಾ ದಿಗ್ಬಂಧನ ಹೇರಿದ್ದು, ಸದ್ಯ ಇರಾನ್ ತನ್ನ ಕಾರ್ಯಾಚರಣಾ ವಲಯವನ್ನು ಮತ್ತಷ್ಟು ವಿಸ್ತರಿಸಿರುವುದರಿಂದ ಜಾಗತಿಕ ತೈಲ ಬಿಕ್ಕಟ್ಟಿನ ಆತಂಕ ಮತ್ತಷ್ಟು ತೀವ್ರಗೊಂಡಿದೆ. ಈ ನಿರ್ಧಾರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಧನ ಬೆಲೆಗಳು ಏರಿಕೆಯಾಗುವ ಸಾಧ್ಯತೆ ದಟ್ಟವಾಗಿದೆ.