ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೇಲ್‌-ಅಮೆರಿಕಕ್ಕೆ ಸವಾಲೊಡ್ಡಿದ ಕೆಲವೇ ಹೊತ್ತಲ್ಲಿ ಇರಾನ್‌ ಐಆರ್‌ಜಿಸಿ ವಕ್ತಾರ ಅಲಿ ಮೊಹಮ್ಮದ್ ನೈನಿಯ ಹತ್ಯೆ

Ali Mohammad Naini: ಮಾರ್ಚ್‌ 20ರಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ ಮೃತಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಚ್ಚರಿ ಎಂದರೆ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ.

ಜನರಲ್ ಅಲಿ ಮೊಹಮ್ಮದ್ ನೈನಿ (ಸಂಗ್ರಹ ಚಿತ್ರ)

ಟೆಹರಾನ್‌, ಮಾ. 20: ಇಸ್ರೇಲ್‌-ಅಮೆರಿಕ-ಇರಾನ್‌ ಯುದ್ಧ ದಿನ ಕಳೆದಂತೆ ಮತ್ತಷ್ಟು ತೀವ್ರವಾಗುತ್ತಿದ್ದು, ಉದ್ವಿಗ್ನ ವಾತಾವರಣ ಮುಂದುವರಿದಿದೆ. ಈ ಮಧ್ಯೆ ಯುದ್ಧದ 21ನೇ ದಿನವಾದ ಮಾರ್ಚ್‌ 20ರಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿ (Ali Mohammad Naini) ಮೃತಪಟ್ಟಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಅಚ್ಚರಿ ಎಂದರೆ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ. ಆ ಮೂಲಕ ಯುದ್ಧ ಮತ್ತಷ್ಟು ವಿಕೋಪಕ್ಕೆ ತಿರುಗುವ ಸೂಚನೆ ಸಿಕ್ಕಿದೆ.

"ಮಾರ್ಚ್‌ 20ರ ಬೆಳಗ್ಗೆ ನಡೆದ ಕ್ರಿಮಿನಲ್, ಹೇಡಿತನದ ಭಯೋತ್ಪಾದಕ ದಾಳಿಯಲ್ಲಿ ನೈನಿ ಹುತಾತ್ಮರಾಗಿದ್ದಾರೆ" ಎಂದು ಐಆರ್‌ಜಿಸಿ ಹೇಳಿಕೆಯಲ್ಲಿ ತಿಳಿಸಿದೆ. ಅಮೆರಿಕದ ನೌಕಾಪಡೆಗಳಿಗೆ ಸವಾಲೊಡ್ಡಿದ ಕೆಲವೇ ಗಂಟೆಗಳಲ್ಲಿ ನಡೆದ ಕ್ಷಿಪ್ರ ವೈಮಾನಿಕ ದಾಳಿಯಲ್ಲಿ ಐಆ‌ರ್‌ಜಿಸಿಯ ಹಿರಿಯ ಅಧಿಕಾರಿ ಅಲಿ ಸಾವನ್ನಪ್ಪಿರುವುದನ್ನು ಇರಾನ್ ದೃಢಪಡಿಸಿದೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ವಕ್ತಾರ ಜನರಲ್ ಅಲಿ ಮೊಹಮ್ಮದ್ ನೈನಿಯ ಹತ್ಯೆ:



ಸವಾಲೊಡ್ಡಿದ್ದ ಅಲಿ

ಇರಾನ್ ಇನ್ನು ಮುಂದೆ ಯುರೇನಿಯಂ ಅನ್ನು ಉತ್ಕೃಷ್ಟಗೊಳಿಸಲು ಅಥವಾ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಯಾರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆಯನ್ನು ಬ್ರಿಗೇಡಿಯರ್ ಜನರಲ್ ಅಲಿ ಮೊಹಮ್ಮದ್ ನೈನಿ ಬಹಿರಂಗವಾಗಿ ಟೀಕಿಸಿದ್ದರು. ಇಸ್ರೇಲ್ ಮತ್ತು ಅಮೆರಿಕ ಜತೆಗಿನ ಯುದ್ಧದ ಹೊರತಾಗಿಯೂ ಇರಾನ್‌ನ ಕ್ಷಿಪಣಿ ಉದ್ಯಮವು ತನ್ನ ಅತ್ಯುನ್ನತ ಮಟ್ಟವನ್ನು ತಲುಪಿದೆ ಎಂದು ಅವರು ಹೇಳಿದ್ದರು.

ಇಸ್ರೇಲ್ ವೈಮಾನಿಕ ದಾಳಿಗೆ ಇರಾನ್ ಉನ್ನತ ಅಧಿಕಾರಿ ಅಲಿ ಲಾರಿಜಾನಿ ಬಲಿ

ಯುದ್ಧದ ಸಮಯದಲ್ಲಿಯೂ ಇರಾನ್‌ನ ಕ್ಷಿಪಣಿ ಉತ್ಪಾದನೆ ಮುಂದುವರಿಯುತ್ತಿದೆ. ಸಾಕಷ್ಟು ದಾಸ್ತಾನುಗಳು ಲಭ್ಯವಿದೆ ಎಂದು ತಿಳಿಸಿದ್ದರು. "ನಮ್ಮ ಕ್ಷಿಪಣಿ ಉದ್ಯಮವು ಅತ್ಯುನ್ನತ ಮಟ್ಟವನ್ನು ತಲುಪಿದೆ. ಇನ್ನುಮುಂದೆ ಶತ್ರುಗಳಿಗೆ ಬಲವಾದ ಹೊಡೆತ ಸಿಗಲಿದೆ. ಯುದ್ಧ ಮುಂದುವರಿದಂತೆ, ಅದು ಹೆಚ್ಚು ಸಂಕೀರ್ಣ ಮತ್ತು ತೀವ್ರವಾಗುತ್ತದೆ" ಎಂದು ನೈನಿ ಎಚ್ಚರಿಸಿದ್ದರು.

ಇರಾನ್ ನೌಕಾಪಡೆ ನಾಶವಾಗಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನೂ ಅವರು ತಳ್ಳಿಹಾಕಿದ್ದರು. "ಇರಾನ್ ನೌಕಾಪಡೆ ನಾಶವಾಗಿದೆ ಎಂದು ಟ್ರಂಪ್ ಹೇಳಲಿಲ್ಲವೇ? ಹಾಗಿದ್ದಲ್ಲಿ ಧೈರ್ಯವಿದ್ದರೆ ಅವರು ತಮ್ಮ ಹಡಗುಗಳನ್ನು ಪರ್ಷಿಯನ್ ಕೊಲ್ಲಿಗೆ ಕಳುಹಿಸಲಿ" ಎಂದು ಅವರು ಹೇಳಿದ್ದಾಗಿ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಅದಾಗಿ ಕೆಲವೇ ಗಂಟೆಗಳಲ್ಲಿ ಅವರು ಹತರಾದರು.

ಈ ವಾರ ಇರಾನ್ ಸರ್ಕಾರ ಮತ್ತು ಮಿಲಿಟರಿ ನಾಯಕತ್ವಕ್ಕೆ ಸಿಕ್ಕ ನಾಲ್ಕನೇ ದೊಡ್ಡ ಹೊಡೆತ ಇದಾಗಿದೆ. ಇತರ ಮೂವರು ಹಿರಿಯ ಅಧಿಕಾರಿಗಳಾದ ಅಲಿ ಲಾರಿಜಾನಿ, ಘೋಲಮ್ರೆಜಾ ಸೊಲೈಮಾನಿ ಮತ್ತು ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಈಗಾಗಲೇ ಮೃತಪಟ್ಟಿದ್ದಾರೆ.

ಇಸ್ರೇಲ್ ದಾಳಿಗೆ ಬಲಿಯಾದ ಮತ್ತೊಬ್ಬ ಇರಾನ್ ನಾಯಕ

ಮಿಲಿಟರಿ, ಇಂಧನ ತಾಣಗಳ ಮೇಲೆ ದಾಳಿ

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ತೀವ್ರವಾಗಿ ಉಲ್ಬಣಗೊಂಡಿದೆ. ಎರಡೂ ಕಡೆಯವರು ಮಿಲಿಟರಿ ನೆಲೆ ಮತ್ತು ಇಂಧನ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದು, ಇದು ಜಾಗತಿಕ ಇಂಧನ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚಿಸಿದೆ. ತೈಲ ಬೆಲೆ ಅಧಿಕವಾಗುವ ಆತಂಕ ಮೂಡಿದೆ.

ವಿದೇಶ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author