ನವದೆಹಲಿ: ಮಿಲಿಟರಿ ಶಕ್ತಿ ಪ್ರದರ್ಶನದಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಗಂಭೀರವಾಗಿ ಮಾತುಕತೆಗೆ ಬನ್ನಿ ಎಂದು ಇರಾನ್ ನ ವಿದೇಶಾಂಗ ಸಚಿವ (Iran foreign minister) ಅಬ್ಬಾಸ್ ಅರಘ್ಚಿ (Abbas Araghchi) ಹೇಳಿದ್ದಾರೆ. ಬ್ರಿಕ್ಸ್ ( BRICS) ಸಮಾವೇಶದಲ್ಲಿ ಭಾಗವಹಿಸಲು ನವದೆಹಲಿಗೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಇರಾನ್ (iran war) ವಿರುದ್ಧದ ಯುದ್ಧದಲ್ಲಿ ಯಾವುದೇ ಗುರಿಯನ್ನು ಸಾಧಿಸಲು ಅಮೆರಿಕ ಹತಾಶವಾದ ಬಳಿಕ ಅವರು ಮಾತುಕತೆಗೆ ಮುಂದಾಗಿದ್ದಾರೆ. ಇಸ್ಲಾಮಿಕ್ ಗಣರಾಜ್ಯಕ್ಕೆ ಅಮೆರಿಕದ ಮೇಲೆ ನಂಬಿಕೆ ಇಲ್ಲ. ಇದಕ್ಕೆ ಹಲವು ಕಾರಣಗಳು ಇವೆ. ಅಮೆರಿಕನ್ನರು ಇರಾನಿಯನ್ನರನ್ನು ನಿಸ್ಸಂದೇಹವಾಗಿ ನಂಬಬಹುದು ಎಂದು ಹೇಳಿದರು.
ನಮ್ಮನ್ನು ನಂಬಲು ಅಮೆರಿಕನ್ನರಿಗೆ ಹಲವಾರು ಕಾರಣಗಳಿವೆ. ಆದರೆ ಇರಾನ್ ಅಮೆರಿಕವನ್ನು ನಂಬದಿರಲು ಅದಕ್ಕಿಂತ ಹೆಚ್ಚಿನ ಕಾರಣಗಳನ್ನು ಹೊಂದಿದೆ. ದೇಶಗಳ ನಡುವಿನ ಮಾತುಕತೆಗಳು ವಿಶ್ವಾಸದ ಮೇಲೆ ನಿಂತಿದೆ. ನಮಗೆ ಅಮೆರಿಕನ್ನರ ಮೇಲೆ ನಂಬಿಕೆ ಇಲ್ಲದೇ ಇರುವುದೇ ರಾಜತಾಂತ್ರಿಕ ಪ್ರಯತ್ನಕ್ಕೆ ಒಂದು ಪ್ರಮುಖ ಅಡ್ಡಿಯಾಗಿದೆ ಎಂದು ಅರಘ್ಚಿ ತಿಳಿಸಿದರು.
ನೊರೊ ವೈರಸ್-ಹಂಟಾವೈರಸ್ ಆತಂಕದ ನಡುವೆ ಮತ್ತೆ ವೈರಲ್ ಆದ ಬಾಬಾ ವಂಗಾ ಭವಿಷ್ಯ!
ಇರಾನ್ ಕೇವಲ ಗೌರವದ ಭಾಷೆಗೆ ಮಾತ್ರ ಉತ್ತರ ನೀಡುತ್ತದೆ. ಕದನ ವಿರಾಮ ಜಾರಿಯಲ್ಲಿದೆ. ಆದರೆ ಇದು ಯಾವಾಗ ಬೇಕಾದರೂ ಮುರಿಯಬಹುದು. ರಾನ್‌ಗೆ ಸಂಬಂಧಿಸಿದ ಯಾವುದಕ್ಕೂ ಮಿಲಿಟರಿ ಪರಿಹಾರವಲ್ಲ. ಅಮೆರಿಕನ್ನರು ನಮ್ಮನ್ನು ಪದೇ ಪದೇ ಪರೀಕ್ಷಿಸಿದ್ದಾರೆ. ನಾವು ಯಾವುದೇ ಒತ್ತಡ ಅಥವಾ ಬೆದರಿಕೆಗೆ ಎಂದಿಗೂ ಮಣಿಯುವುದಿಲ್ಲ ಎಂದು ತಿಳಿಸಿದರು.
ಮಧ್ಯಪ್ರಾಚ್ಯದಲ್ಲಿ ಶಾಂತಿ ತರಲು ಭಾರತ ಪ್ರಮುಖ ಪಾತ್ರ ವಹಿಸಿದೆ. ಈ ನಿಟ್ಟಿನಲ್ಲಿ ನವದೆಹಲಿಯು ಸಾಕಷ್ಟು ಕೆಲಸ ಮಾಡಿದೆ. ಭಾರತದ ಯಾವುದೇ ರಚನಾತ್ಮಕ ಪಾತ್ರವನ್ನು ನಾವು ಸ್ವಾಗತಿಸುತ್ತೇವೆ ಎಂದ ಅವರು, ಚೀನಿಯರು ಕೂಡ ಒಳ್ಳೆಯ ಉದ್ದೇಶಗಳನ್ನು ಹೊಂದಿದ್ದಾರೆ ಎಂದರು.
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಪರಿಹರಿಸಲು ಚೀನಾ ಸೇರಿದಂತೆ ಯಾವುದೇ ರಾಷ್ಟ್ರ ಮುಂದೆ ಬಂದರೂ ಕೂಡ ಬೆಂಬಲಕ್ಕೆ ತಾನು ಮುಕ್ತ ಎಂದು ಹೇಳಿದ ಅರಘ್ಚಿ, ಸಂಘರ್ಷ ನಿಲ್ಲಿಸಲು ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವ ಯಾವುದೇ ದೇಶವನ್ನು ವಿಶೇಷವಾಗಿ ಚೀನಾವನ್ನು ನಾವು ಪ್ರಶಂಸಿಸುತ್ತೇವೆ. ನಾವು ಚೀನಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.
ಬ್ರಿಕ್ಸ್ ಸಭೆಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್, ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಜಾಗತಿಕ ಇಂಧನ ಪೂರೈಕೆಯನ್ನು ತೀವ್ರವಾಗಿ ಅಡ್ಡಿಪಡಿಸಬಹುದು ಎಂದು ಹೇಳಿದರು.
ಹಾರ್ಮೊಜ್ ಬಿಕ್ಕಟ್ಟಿಗೆ ಯುಎಇ ಹೊಸ ಪ್ಲಾನ್! ಹೊಸ ತೈಲ ಪೈಪ್‌ಲೈನ್ ಯೋಜನೆಗೆ ಅಸ್ತು
ಇದಕ್ಕೆ ಪ್ರತಿಕ್ರಿಯಿಸಿದ ಅರಘ್ಚಿ, ಇರಾನ್‌ನೊಂದಿಗೆ ಯುದ್ಧದಲ್ಲಿರುವ ದೇಶಗಳನ್ನು ಹೊರತುಪಡಿಸಿ ಎಲ್ಲರಿಗೂ ಹೊರ್ಮುಜ್ ಮುಕ್ತವಾಗಿದೆ. ಜಲ ಮಾರ್ಗದಲ್ಲಿ ಪರಿಸ್ಥಿತಿ ಕಠಿಣವಾಗಿದೆ. ಆದರೆ ಇರಾನ್ ಷರತ್ತುಬದ್ಧ ಸಹಕಾರದ ನಿಲುವನ್ನು ಕಾಯ್ದುಕೊಂಡಿದೆ. ಯುದ್ಧವು ಕೊನೆಗೊಂಡ ಬಳಿಕ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.