ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತೈಲ ಬೆಲೆ ಬ್ಯಾರೆಲ್‌ಗೆ 200 ಡಾಲರ್‌ ತಲುಪಲಿದೆ: ಹಡಗುಗಳ ಮೇಲಿನ ದಾಳಿಗೆ ಇರಾನ್ ಖಡಕ್‌ ಎಚ್ಚರಿಕೆ

ಪಶ್ಚಿಮ ಏಷ್ಯಾದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿ ಇರಾನ್ ಪಡೆಗಳು ವ್ಯಾಪಾರಿ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆತಂಕ ಹೆಚ್ಚಾಗಿದೆ. ಪರಿಸ್ಥಿತಿ ತೀವ್ರಗೊಂಡರೆ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 200 ಡಾಲರ್‌ ತಲುಪಬಹುದು ಎಂದು ಇರಾನ್ ಎಚ್ಚರಿಕೆ ನೀಡಿದೆ. ಹೊರ್ಮುಜ್ ಜಲಸಂಧಿಯಲ್ಲಿ ಉದ್ಭವಿಸಿರುವ ಉದ್ವಿಗ್ನತೆಯಿಂದ ವಿಶ್ವದ ತೈಲ ಸರಬರಾಜಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಂಗ್ರಹ ಚಿತ್ರ

ನವದೆಹಲಿ, ಮಾ. 12: ಪಶ್ಚಿಮ ಏಷ್ಯಾದಲ್ಲಿ (West Asia) ಸಂಘರ್ಷವು ಭೀಕರ ಸ್ವರೂಪ ಪಡೆದಿದ್ದು, ಜಾಗತಿಕ ಇಂಧನ ಮಾರುಕಟ್ಟೆಯು(Oil Market) ತಲ್ಲಣಗೊಂಡಿದೆ. ಬುಧವಾರ ಪರ್ಷಿಯನ್ ಕೊಲ್ಲಿಯಲ್ಲಿ (Persian Gulf) ಇರಾನ್‌ನ (Iran) ಪಡೆಗಳು ತಮ್ಮ ಆದೇಶವನ್ನು ಉಲ್ಲಂಘಿಸಿದ ಮೂರು ವ್ಯಾಪಾರಿ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿವೆ. ಈ ದಾಳಿಯ ಬೆನ್ನಲ್ಲೇ ಆಕ್ರೋಶಭರಿತ ಇರಾನ್, "ವಿಶ್ವವು ಪ್ರತಿ ಬ್ಯಾರೆಲ್ ತೈಲಕ್ಕೆ 200 ಡಾಲರ್‌ ಬೆಲೆ ನೀಡಲು ಸಿದ್ಧವಾಗಲಿ" ಎಂದು ಗಂಭೀರ ಎಚ್ಚರಿಕೆ ನೀಡಿದೆ. ಅಮೆರಿಕ (US) ಮತ್ತು ಇಸ್ರೇಲ್ (Israel) ಜಂಟಿಯಾಗಿ ನಡೆಸಿದ ವಾಯುದಾಳಿಗಳಿಗೆ ಪ್ರತಿಕಾರವಾಗಿ ಇರಾನ್ ಈ ತೈಲ ಯುದ್ಧದ ಬೆದರಿಕೆಯನ್ನು ಒಡ್ಡಿದೆ.

ಅಮೆರಿಕ ಪಡೆಗಳು ಈಗಾಗಲೇ 58 ಇರಾನ್ ನೌಕಾಪಡೆ ಹಡಗುಗಳನ್ನು ಧ್ವಂಸಗೊಳಿಸಿವೆ ಮತ್ತು ಇರಾನ್ ಸೇನೆಯು ಶಕ್ತಿಗುಂದಿದೆ ಎಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ ವಾಸ್ತವದಲ್ಲಿ ಹೊರ್ಮುಜ್ ಜಲಸಂಧಿಯ ಮೇಲೆ ಇರಾನ್ ಇಂದಿಗೂ ಪ್ರಬಲ ಭೌಗೋಳಿಕ ನಿಯಂತ್ರಣ ಹೊಂದಿದ್ದು, ಅಲ್ಲಿ ಸುಮಾರು ಒಂದು ಡಜನ್ ಮೈನ್‌ಗಳನ್ನು (Mines) ಅಳವಡಿಸಿದೆ. ಇದರಿಂದಾಗಿ ಜಗತ್ತಿನ ಐದನೇ ಒಂದು ಭಾಗದಷ್ಟು ತೈಲ ಸಾಗಿಸುವ ಈ ಮಾರ್ಗವು ಸಂಪೂರ್ಣವಾಗಿ ಬಂದ್ ಆಗಿದೆ. ಈ ಭೀಕರ ತೈಲ ಆಘಾತವನ್ನು ತಗ್ಗಿಸಲು ಅಂತರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಇತಿಹಾಸದಲ್ಲೇ ಅತಿ ದೊಡ್ಡ ಮಟ್ಟದ ಅಂದರೆ 400 ಮಿಲಿಯನ್ ಬ್ಯಾರೆಲ್ ತುರ್ತು ತೈಲ ಮೀಸಲನ್ನು ಬಿಡುಗಡೆ ಮಾಡಲು ಶಿಫಾರಸು ಮಾಡಿದೆ. ಇದಕ್ಕೆ ತಕ್ಷಣ ಸ್ಪಂದಿಸಿರುವ ಟ್ರಂಪ್, ಅಮೆರಿಕದ ಮೀಸಲು ನಿಧಿಯಿಂದಲೇ 172 ಮಿಲಿಯನ್ ಬ್ಯಾರೆಲ್ ತೈಲವನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ.

ಇರಾನ್ ಯುದ್ದ ಪರಿಣಾಮ: ಪುಣೆ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಅಡ್ಡಿ

ಯುದ್ಧವು ಈಗಾಗಲೇ 2,000ಕ್ಕೂ ಹೆಚ್ಚು ಬಲಿ ಪಡೆದಿದ್ದು, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಪುತ್ರ ಮತ್ತು ಉತ್ತರಾಧಿಕಾರಿ ಮೊಜ್ತಾಬಾ ಖಮೇನಿ ವಾಯುದಾಳಿಯಲ್ಲಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಸಮುದ್ರದಲ್ಲಿ ಥೈಲ್ಯಾಂಡ್, ಜಪಾನ್ ಮತ್ತು ಮಾರ್ಷಲ್ ಐಲೆಂಡ್ಸ್ ಧ್ವಜವಿರುವ ಹಡಗುಗಳ ಮೇಲೆ ದಾಳಿ ನಡೆದಿದ್ದು, ಇದುವರೆಗೆ ಒಟ್ಟು 14 ವ್ಯಾಪಾರಿ ಹಡಗುಗಳು ಹಾನಿಗೊಳಗಾಗಿವೆ. ಇರಾನ್ ಸೇನೆಯು ಅಮೆರಿಕ ಮತ್ತು ಇಸ್ರೇಲ್ ಜತೆ ವ್ಯವಹಾರ ನಡೆಸುವ ಬ್ಯಾಂಕುಗಳ ಮೇಲೆಯೂ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಒಟ್ಟಾರೆಯಾಗಿ, ಈ ಸಂಘರ್ಷವು ವಿಶ್ವದ ಆರ್ಥಿಕತೆಯನ್ನು 1970ರ ದಶಕದ ನಂತರದ ಅತ್ಯಂತ ಕೆಟ್ಟ ತೈಲ ಬಿಕ್ಕಟ್ಟಿಗೆ ತಳ್ಳುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ.