Iran Protests: ಇರಾನ್ ಪ್ರತಿಭಟನೆಗಳಲ್ಲಿ 3,428ಕ್ಕೂ ಹೆಚ್ಚು ಮಂದಿ ಸಾವು, ದೇಶ ತೊರೆಯಲು ಭಾರತೀಯರಿಗೆ ಎಚ್ಚರಿಕೆ
ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ಸೂಚನೆ ನೀಡಿದ್ದು, ಸಾಧ್ಯವಾದಷ್ಟು ಬೇಗ ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ಮಾರ್ಗಗಳ ಮೂಲಕ ದೇಶ ತೊರೆಯುವಂತೆ ಮನವಿ ಮಾಡಿದೆ. ಅಲ್ಲದೆ ಪ್ರತಿಭಟನೆ ನಡೆಯುವ ಪ್ರದೇಶಗಳಿಂದ ದೂರವಿರಲು, ಎಚ್ಚರಿಕೆಯಿಂದ ಇರುವಂತೆ ಮತ್ತು ಸ್ಥಳೀಯ ಸುದ್ದಿಗಳನ್ನು ಗಮನಿಸುವಂತೆ ಸಲಹೆ ನೀಡಲಾಗಿದೆ.
ಇರಾನ್ ದಂಗೆ -
ಟೆಹ್ರಾನ್, ಜ.15: ಇರಾನ್‌ನಲ್ಲಿ (Iran Protests) ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳ ಮೇಲೆ ನಡೆಸಿದ ಕಠಿಣ ದಮನದಲ್ಲಿ ಕನಿಷ್ಠ 3,428 ಮಂದಿ ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಮತ್ತು 10,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ನಾರ್ವೆ ಮೂಲದ ಇರಾನ್ ಹ್ಯೂಮನ್ ರೈಟ್ಸ್ (IHR) ಸಂಸ್ಥೆ ತಿಳಿಸಿದೆ ಎಂದು ಎಎಫ್‌ಪಿ ವರದಿ ಮಾಡಿದೆ.
ಜನವರಿ 8ರಿಂದ 12ರ ವರೆಗೆ ನಡೆದ ಪ್ರತಿಭಟನೆಗಳ ಅವಧಿಯಲ್ಲಿ 3,379 ಮಂದಿ ಸಾವನ್ನಪ್ಪಿದ್ದಾರೆ ಎಂದು IHR ಹೇಳಿದೆ. ಇದಕ್ಕೂ ಮೊದಲು ಅಮೆರಿಕ ಮೂಲದ ಹ್ಯೂಮನ್ ರೈಟ್ಸ್ ಆಕ್ಟಿವಿಸ್ಟ್ಸ್ ನ್ಯೂಸ್ ಏಜೆನ್ಸಿ ಬುಧವಾರ ಬೆಳಿಗ್ಗೆ ಕನಿಷ್ಠ 2,571 ಮಂದಿ ಸತ್ತಿದ್ದಾರೆ ಎಂದು ವರದಿ ಮಾಡಿತ್ತು. ಇರಾನ್ ಸರ್ಕಾರಿ ಟಿವಿ ಹಲವು ಮಂದಿ ಹುತಾತ್ಮರಾಗಿದ್ದಾರೆ ಎಂದು ಒಪ್ಪಿಕೊಂಡಿದ್ದರೂ, ನಿಖರ ಸಂಖ್ಯೆಯನ್ನು ಪ್ರಕಟಿಸಿಲ್ಲ.
ಜೈಶಂಕರ್ ಜತೆ ಚರ್ಚೆ
ಈ ನಡುವೆ ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಘ್ಚಿ ಅವರು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಬುಧವಾರ ದೂರವಾಣಿ ಕರೆ ಮಾಡಿದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ಜೈಶಂಕರ್, “ಇರಾನ್ ಹಾಗೂ ಅದರ ಸುತ್ತಮುತ್ತಲಿನ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ” ಎಂದು ತಿಳಿಸಿದ್ದಾರೆ.
Iran Protests: 2 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಅಮೆರಿಕದಿಂದ ಖಮೇನಿಗೆ ಎಚ್ಚರಿಕೆ
ಈ ಮಧ್ಯೆ ಇರಾನ್‌ನಲ್ಲಿರುವ ಭಾರತೀಯರಿಗೆ ಭಾರತೀಯ ರಾಯಭಾರಿ ಕಚೇರಿ ಎಚ್ಚರಿಕೆ ಸೂಚನೆ ನೀಡಿದ್ದು, ಸಾಧ್ಯವಾದಷ್ಟು ಬೇಗ ವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಸಾರಿಗೆ ಮಾರ್ಗಗಳ ಮೂಲಕ ದೇಶ ತೊರೆಯುವಂತೆ ಮನವಿ ಮಾಡಿದೆ. ಅಲ್ಲದೆ ಪ್ರತಿಭಟನೆ ನಡೆಯುವ ಪ್ರದೇಶಗಳಿಂದ ದೂರವಿರಲು, ಎಚ್ಚರಿಕೆಯಿಂದ ಇರುವಂತೆ ಮತ್ತು ಸ್ಥಳೀಯ ಸುದ್ದಿಗಳನ್ನು ಗಮನಿಸುವಂತೆ ಸಲಹೆ ನೀಡಲಾಗಿದೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ, ಸರ್ಕಾರ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ 26 ವರ್ಷದ ಎರ್ಫಾನ್ ಸೊಲ್ತಾನಿ ಎಂಬ ಯುವಕನಿಗೆ ಮರಣದಂಡನೆ ವಿಧಿಸಲಾಗಿದೆ ಎಂದು ವರದಿಯಾಗಿದೆ. ಪಶ್ಚಿಮ ತೆಹರಾನ್‌ನ ಫರ್ಡಿಯಾಸ್ ಪ್ರದೇಶದಲ್ಲಿ ಜನವರಿ 8ರಂದು ಬಂಧಿಸಲ್ಪಟ್ಟಿದ್ದ ಸೊಲ್ತಾನಿಗೆ ಬುಧವಾರ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎಂದು ಇರಾನ್ ಇಂಟರ್‌ನ್ಯಾಷನಲ್ ವರದಿ ಮಾಡಿದೆ. ಅವನ ಮೇಲೆ ಯಾವ ಆರೋಪಗಳಿವೆ ಎಂಬುದು ಸ್ಪಷ್ಟವಾಗಿಲ್ಲ.
Iran protests: ಇರಾನ್‌ನಲ್ಲಿ ವ್ಯಾಪಕ ದಂಗೆ, ಹೆಣಗಳ ರಾಶಿಯಿಂದ ತುಂಬಿಹೋದ ಆಸ್ಪತ್ರೆಗಳು
ಪ್ರತಿಭಟನೆಗಳ ಮೇಲೆ ನಡೆಸಿದ ದಮನದ ಹಿನ್ನೆಲೆಯಲ್ಲಿ ಇರಾನ್ ಮೇಲೆ ಅಂತರರಾಷ್ಟ್ರೀಯ ಒತ್ತಡ ಹೆಚ್ಚುತ್ತಿದೆ. ಈ ವಿಷಯದಲ್ಲಿ ಇರಾನ್ ಸರ್ಕಾರ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಮಾತಿನ ಸಮರ ನಡೆಯುತ್ತಿದೆ. ಟ್ರಂಪ್ “ಪ್ರತಿಭಟನೆ ಮುಂದುವರಿಸಿ, ಸಹಾಯ ಬರಲಿದೆ” ಎಂದು ಇರಾನಿಯನ್ನರಿಗೆ ಕರೆ ನೀಡಿದ್ದು, ಇದಕ್ಕೆ ಇರಾನ್ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕ ರಾಜಕೀಯ ಅಸ್ಥಿರತೆ ಉಂಟುಮಾಡಲು ಮತ್ತು ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದೆ.
ಇರಾನ್‌ನಲ್ಲಿ ಕಳೆದ ಡಿಸೆಂಬರ್ ಅಂತ್ಯದಲ್ಲಿ ದೇಶದ ದುರ್ಬಲ ಆರ್ಥಿಕ ಸ್ಥಿತಿಗೆ ವಿರುದ್ಧವಾಗಿ ಪ್ರತಿಭಟನೆಗಳು ಆರಂಭಗೊಂಡಿದ್ದು, ಬಳಿಕ ಧಾರ್ಮಿಕ ಆಡಳಿತ ವ್ಯವಸ್ಥೆಗೂ ತಿರುಗಿವೆ. ತೆಹರಾನ್‌ನ ಹಲವು ಭಾಗಗಳಲ್ಲಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮೇನಿ ವಿರುದ್ಧ ಘೋಷಣೆಗಳು ಮತ್ತು ಬರಹಗಳು ಕಾಣಿಸಿಕೊಂಡಿವೆ. ಇಂತಹ ಘೋಷಣೆಗಳಿಗೆ ಇರಾನ್‌ನಲ್ಲಿ ಮರಣದಂಡನೆ ಶಿಕ್ಷೆಯವರೆಗೆ ಕಾನೂನು ಕ್ರಮ ಇದೆ.