ದೆಹಲಿ, ಮೇ 26: ಭಾರತ ಪ್ರವಾಸದಲ್ಲಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ (Marco Rubio) ಸೋಮವಾರ ಉತ್ತರ ಪ್ರದೇಶದ ಆಗ್ರಾದ ಐತಿಹಾಸಿಕ ತಾಜ್ ಮಹಲ್‌ಗೆ (Taj Mahal) ಭೇಟಿ ನೀಡಿದ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶ್ವ ಪರಂಪರೆಯ ತಾಣವಾಗಿರುವ ತಾಜ್ ಮಹಲ್ ಎದುರಿನ ಪ್ರಸಿದ್ಧ ಬೆಂಚ್ ಮೇಲೆ ತಮ್ಮ ಪತ್ನಿ ಜೀನೆಟ್ ರೂಬಿಯೊ (Jeanette Rubio) ಅವರೊಂದಿಗೆ ಕುಳಿತಿರುವ ಚಿತ್ರಗಳನ್ನು ಅವರು ಪೋಸ್ಟ್ ಮಾಡಿದ್ದಾರೆ. ಈ ಸುಂದರ ಚಿತ್ರವೇ ಈಗ ಅಮೆರಿಕ ಮತ್ತು ಇರಾನ್ (US-Iran) ನಡುವಿನ ರಾಜತಾಂತ್ರಿಕ ಸಂಘರ್ಷಕ್ಕೆ ಹೊಸ ಅಸ್ತ್ರವಾಗಿದೆ. ರೂಬಿಯೊ ಅವರ ಪೋಸ್ಟ್ ಬೆನ್ನಲ್ಲೇ, ಇರಾನ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡಿದೆ.
ಹೈದರಾಬಾದ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯು (ಕಾನ್ಸುಲೇಟ್ ಜನರಲ್) ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ರೂಬಿಯೊ ಅವರಿಗೆ ಇತಿಹಾಸ ಅಥವಾ ವಾಸ್ತುಶಿಲ್ಪದ ಜ್ಞಾನವಿದ್ದರೆ, ಅವರು ಇಲ್ಲಿ ಫೋಟೊಗೆ ಪೋಸ್ ನೀಡುತ್ತಿರಲಿಲ್ಲ. ಈ ಸ್ಮಾರಕವನ್ನು ಮೊಘಲ್ ಚಕ್ರವರ್ತಿಯು ತನ್ನ ಇರಾನ್ ಮೂಲದ ಪತ್ನಿಯ ಮೇಲಿನ ಪ್ರೀತಿಗಾಗಿ ನಿರ್ಮಿಸಿದ್ದಾನೆ ಮತ್ತು ಇದನ್ನು ಇರಾನ್‌ನ ಅದ್ಭುತ ವಾಸ್ತುಶಿಲ್ಪಿಗಳು ವಿನ್ಯಾಸಗೊಳಿಸಿದ್ದಾರೆ. ಆದರೆ ರೂಬಿಯೊ ಅವರ ಸರ್ಕಾರವು ಇಂದು ಇರಾನ್ ನಾಗರಿಕತೆಯನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಬೆದರಿಕೆ ಹಾಕುತ್ತಿದೆ ಮತ್ತು ಇತರ ಭವ್ಯ ಸಂಸ್ಕೃತಿಗಳನ್ನು ಅವಮಾನಿಸುತ್ತಿದೆ" ಎಂದು ತೀವ್ರವಾಗಿ ಲೇವಡಿ ಮಾಡಿದೆ.
ವೈರಲ್ ಪೋಸ್ಟ್ ಇಲ್ಲಿದೆ:
ವಿಶ್ವದ ಪ್ರೇಮದ ಸಂಕೇತವಾಗಿರುವ ತಾಜ್ ಮಹಲ್ ಅನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿ ಮುಮ್ತಾಜ್ ಮಹಲ್ ನೆನಪಿಗಾಗಿ 1632ರಲ್ಲಿ ನಿರ್ಮಿಸಿದ್ದರು. ಈ ಸ್ಮಾರಕವು ಪರ್ಷಿಯನ್ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಮೊಘಲ್ ವಾಸ್ತುಶಿಲ್ಪದ ಮೇರುಕೃತಿ ಎನಿಸಿಕೊಂಡಿದೆ. ಮುಮ್ತಾಜ್ ಪರ್ಷಿಯನ್ ಉನ್ನತ ಮನೆತನಕ್ಕೆ ಸೇರಿದವಳಾಗಿದ್ದು, ಆಕೆಯ ತಂದೆ ಅಬ್ದುಲ್ ಹಸನ್ ಅಸಫ್ ಖಾನ್ ಪರ್ಷಿಯನ್ ಅಧಿಕಾರಿಯಾಗಿದ್ದರು. ಆಕೆಯ ಅಜ್ಜ ಮಿರ್ಜಾ ಘಿಯಾಸ್ ಬೇಗ್ ಇರಾನ್‌ನಿಂದ ಭಾರತಕ್ಕೆ ವಲಸೆ ಬಂದಿದ್ದರು.
ಶಾಂತಿ ಮಾತುಕತೆಯ ನಡುವೆಯೇ ಇರಾನ್ ಮೇಲೆ ಮತ್ತೆ ಅಮೆರಿಕ ಸೇನೆ ದಾಳಿ
ಇಂದಿನ ಇರಾನ್ ಗಡಿಯ ಹೊರಗೆ ಪರ್ಷಿಯನ್ ವಾಸ್ತುಶಿಲ್ಪಕ್ಕೆ ತಾಜ್ ಮಹಲ್ ಅತ್ಯಂತ ಪ್ರಮುಖ ಉದಾಹರಣೆಯಾಗಿದೆ. ಇದರ ಬೃಹತ್ ಗುಮ್ಮಟಗಳು, ಅಮೃತಶಿಲೆಯ ಕೆತ್ತನೆಗಳು ಮತ್ತು ಕಟ್ಟುನಿಟ್ಟಾದ ಸಮ್ಮಿತಿ ಶೈಲಿಗಳು ನೇರವಾಗಿ ಪರ್ಷಿಯನ್ ಸಂಪ್ರದಾಯದಿಂದ ಬಂದುದಾಗಿದೆ. ತಾಜ್ ಮಹಲ್‌ನಲ್ಲಿರುವ ವಿಶಾಲ ಚಾರ್‌ಬಾಗ್ ಗಾರ್ಡನ್ ವಿನ್ಯಾಸವು ಪರ್ಷಿಯನ್ ಶೈಲಿಯದ್ದಾಗಿದ್ದು, ಇಲ್ಲಿನ ನೀರಿನ ಕಾಲುವೆಗಳು ಸ್ವರ್ಗದ ನದಿಗಳನ್ನು ಸಂಕೇತಿಸುತ್ತವೆ. ಗೋಡೆಗಳ ಮೇಲಿರುವ ಕುರಾನ್ ವಾಕ್ಯಗಳನ್ನು ಇರಾನ್‌ನ ಶಿರಾಜ್ ಮೂಲದ ಪ್ರಸಿದ್ಧ ಪರ್ಷಿಯನ್ ಕ್ಯಾಲಿಗ್ರಾಫರ್ ಅಬ್ದುಲ್-ಹಕ್ ಕೆತ್ತಿದ್ದಾರೆ. ಆತನ ಕೆಲಸಕ್ಕೆ ಮೆಚ್ಚಿ ಷಹಜಹಾನ್ ʼಅಮಾನತ್ ಖಾನ್ʼ ಎಂಬ ಬಿರುದು ನೀಡಿದ್ದರು. ಒಟ್ಟಿನಲ್ಲಿ ತಾಜ್ ಮಹಲ್ ಪರ್ಷಿಯನ್ ಕಲಾತ್ಮಕತೆ ಮತ್ತು ಭಾರತೀಯ ಕುಶಲತೆಯ ಅದ್ಭುತ ಸಮ್ಮಿಲನವಾಗಿದೆ.