ಟೆಹರಾನ್, ಏ. 3: ಅಮೆರಿಕ ಮತ್ತು ಇಸ್ರೇಲ್ (US-Israeli) ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾರ್‌ನ (Iran) ಕಾರಾಜ್ (Karaj) ನಗರದ ಪ್ರಮುಖ ಬಿ1 (B1) ಸೇತುವೆ ಧ್ವಂಸಗೊಂಡ ಬೆನ್ನಲ್ಲೇ, ಇರಾನ್ ಈಗ ಮಧ್ಯಪ್ರಾಚ್ಯದ ಎಂಟು ಪ್ರಮುಖ ಸೇತುವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಇರಾನ್ ನಡೆಸಬಹುದಾದ ಸಂಭಾವ್ಯ ಪ್ರತೀಕಾರ ದಾಳಿಯ ಎಚ್ಚರಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇರಾನ್‌ನ ಅರೆ-ಅಧಿಕೃತ ಮಾಧ್ಯಮ 'ಫಾರ್ಸ್ ನ್ಯೂಸ್ (Fars News)' ಶುಕ್ರವಾರ ಈ ಪಟ್ಟಿಯನ್ನು ಪ್ರಕಟಿಸಿದ್ದು, ನೆರೆಯ ರಾಷ್ಟ್ರಗಳಲ್ಲಿರುವ ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸುವ ಸೂಚನೆ ನೀಡಿದೆ. ಇರಾನ್ ಗುರಿಪಡಿಸಿರುವ ಸೇತುವೆಗಳ ಪಟ್ಟಿಯಲ್ಲಿ ಕುವೈತ್‌ನ ಶೇಖ್ ಜಾಬರ್ ಅಲ್-ಅಹ್ಮದ್ ಅಲ್-ಸಬಾ ಸಮುದ್ರ ಸೇತುವೆ, ಬಹ್ರೇನ್-ಸೌದಿ ಅರೇಬಿಯಾದ ಕಿಂಗ್ ಫಹದ್ ಕಾಸ್‌ವೇ, ಯುಎಇಯ ಶೇಖ್ ಜಾಯೆದ್ ಸೇತುವೆ ಮತ್ತು ಶೇಖ್ ಖಲೀಫಾ ಸೇತುವೆ, ಜೋರ್ಡಾನ್‌ನ ಕಿಂಗ್ ಹುಸೇನ್ ಸೇತುವೆ, ದಾಮಿಯಾ ಸೇತುವೆ ಮತ್ತು ಅಬ್ದೂನ್ ಸೇತುವೆ ಸೇರಿದೆ.
ನಾಶವಾದ ಇರಾನ್‌ನ ಬಿ1 ಸೇತುವೆ:
ಏನಿದು ಬಿ1 ಸೇತುವೆ ವಿವಾದ?
ಅಲ್ಬೋರ್ಜ್ ಪ್ರಾಂತ್ಯದ ಕಾರಾಜ್‌ನಲ್ಲಿರುವ ಸುಮಾರು 1,000 ಮೀಟರ್ ಉದ್ದದ ಬಿ1 ಸೇತುವೆಯು ಇರಾನ್‌ನ ಅತ್ಯಂತ ಆಧುನಿಕ ಮತ್ತು ಪ್ರಮುಖ ಮೂಲಸೌಕರ್ಯಗಳಲ್ಲಿ ಒಂದಾಗಿತ್ತು. ಇದು ಟೆಹರಾನ್ ಮತ್ತು ಕಾರಾಜ್ ನಡುವಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ನಿರ್ಮಿಸಲಾಗಿತ್ತು. ಆದರೆ ಗುರುವಾರ ನಡೆದ ಎರಡು ಭೀಕರ ದಾಳಿಗಳಲ್ಲಿ ಈ ಸೇತುವೆ ಸಂಪೂರ್ಣ ಕುಸಿದು ಬಿದ್ದಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.
ಯುದ್ದ ನಿಲ್ಲಿಸಿ ಶಾಂತಿ ನೆಲೆಸಲು ಸಹಕರಿಸಿ ಎಂದು ಕ್ರಿಶ್ಚಿಯನ್ ಬಾಂಧವರಿಂದ ವಿಶೇಷ ಪ್ರಾರ್ಥನೆ: ರೆವೆರೆಂಡ್ ಪ್ರವೀಣ್
ಟ್ರಂಪ್ ಎಚ್ಚರಿಕೆ
ಈ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಸೇತುವೆ ಧ್ವಂಸವಾಗುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ. "ಇರಾನ್‌ನ ಅತಿ ದೊಡ್ಡ ಸೇತುವೆ ನೆಲಸಮವಾಗಿದೆ, ಇನ್ನು ಮುಂದೆ ಅದನ್ನು ಬಳಸಲು ಸಾಧ್ಯವಿಲ್ಲ. ಬಹಳಷ್ಟು ದಾಳಿ ಬಾಕಿ ಇದೆ! ಇರಾನ್ ತಡವಾಗುವ ಮೊದಲೇ ಶಾಂತಿ ಒಪ್ಪಂದಕ್ಕೆ ಬರುವುದು ಒಳಿತು" ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ ಜಂಟಿ ಕಾರ್ಯಾಚರಣೆ ಆರಂಭವಾದಾಗಿನಿಂದ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿದೆ. ಈ ದಾಳಿಗಳಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಲಿ ಖಮೇನಿ ಸೇರಿದಂತೆ 1,340ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಈಗಾಗಲೇ ಇಸ್ರೇಲ್, ಜೋರ್ಡಾನ್ ಮತ್ತು ಅಮೆರಿಕದ ಮಿಲಿಟರಿ ನೆಲೆಗಳನ್ನು ಹೊಂದಿರುವ ಗಲ್ಫ್ ರಾಷ್ಟ್ರಗಳ ಮೇಲೆ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.