ಇರಾನ್ ಪಡೆಗಳು ಹಾರ್ಮುಜ್ ಜಲಸಂಧಿಯ ಬಳಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದ್ದಕ್ಕೆ (Iran Israel US War) ಪ್ರತಿಕ್ರಿಯೆಯಾಗಿ ಅಮೆರಿಕ ಸೇನೆಯು ಇರಾನ್ ವಿರುದ್ಧ ದಾಳಿ ನಡೆಸಿದೆ. ಇರಾನ್‌ನ ಜಾಸ್ಕ್ ಮತ್ತು ಬಂದರ್ ಅಬ್ಬಾಸ್‌ನಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ, ಆದರೆ ಈ ದಾಳಿಯ ಅಲೆಯ ವ್ಯಾಪ್ತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಕ್ವೆಶ್ಮ್ ದ್ವೀಪದಲ್ಲಿಯೂ ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಇರಾನ್‌ನ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಅಮೆರಿಕದ ಪಡೆಗಳು ಇರಾನ್‌ನಲ್ಲಿ ಮೂರು ಸುತ್ತಿನ ದಾಳಿಗಳನ್ನು ನಡೆಸಿದ್ದು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್‌ಗಳನ್ನು ಗುರಿಯಾಗಿಸಿಕೊಂಡಿವೆ. ಸಿರಿಕ್‌ನ ಬೆಮಾನಿ ಜಿಲ್ಲೆಯ ಎರಡು ನೀರಿನ ಟ್ಯಾಂಕ್‌ಗಳನ್ನು ಸಹ ಹೊಡೆದು ನಾಶಪಡಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಇರಾನ್‌ನ ಜಾಸ್ಕ್, ಸಿರಿಕ್ ಮತ್ತು ಕೆಶ್ಮ್ ದ್ವೀಪದ ಹಲವಾರು ಸ್ಥಳಗಳ ಮೇಲೆ ಅಮೆರಿಕ ದಾಳಿ ನಡೆಸಿದೆ ಎಂದು ಐಆರ್‌ಜಿಸಿ ದೃಢಪಡಿಸಿದೆ.
ನಿನ್ನೆ ಅಮೆರಿಕದ ಸೇನಾ ಅಪಾಚೆ ಹೆಲಿಕಾಪ್ಟರ್ ಹೊಡೆದುರುಳಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಅಮೆರಿಕದ ಪಡೆಗಳು ಈಗ "ಇರಾನ್ ವಿರುದ್ಧ ಸ್ವರಕ್ಷಣಾ ದಾಳಿಗಳನ್ನು ಪೂರ್ಣಗೊಳಿಸಿವೆ" ಎಂದು ಅಮೆರಿಕದ ಸೇನೆಯ ಕೇಂದ್ರ ಕಮಾಂಡ್ ಹೇಳಿದೆ.
ಮತ್ತೊಂದೆಡೆ ಭಾನುವಾರ ಮಧ್ಯರಾತ್ರಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ಬೆನ್ನಲ್ಲೇ ಇಸ್ರೇಲಿ ಸೇನೆ ಕೂಡ ಇರಾನ್‌ನ 20 ಸ್ಥಳಗಳನ್ನು ಗುರಿಯಾಗಿಸಿ ಪ್ರತಿದಾಳಿ ನಡೆಸಿದೆ. ಇಸ್ರೇಲ್ ಸೇನೆ ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, ಇರಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗದಲ್ಲಿರುವ ಸೇನಾ ಗುರಿಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ದಾಳಿಯ ಬಳಿಕ ಇರಾನ್‌ನ ಇಸ್ಫಹಾನ್, ಕರಾಜ್, ತಬ್ರೀಜ್ ಹಾಗೂ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವುದಾಗಿ ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.
ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್-ಇಸ್ರೇಲ್ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಈ ಮಧ್ಯೆ ಇಸ್ರೇಲ್ ಮೇಲೆ ದಾಳಿ ನಡೆಸಿದ ಹೊರತಾಗಿಯೂ ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ. ಇರಾನ್‌ನ ಕ್ಷಿಪಣಿ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಡಿ, ರಾಜತಾಂತ್ರಿಕತೆಗೆ ಹೆಚ್ಚಿನ ಸಮಯ ನೀಡಬೇಕೆಂದು ನೆತನ್ಯಾಹುಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.