ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಭಾರತ ಬೆಂಬಲ ಎಂದಿಗೂ ಮರೆಯುವುದಿಲ್ಲʼʼ: ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ ಇರಾನ್‌

Ayatollah Ali Khamenei: ಇರಾನ್‌ನ ಪರಮೋಚ್ಚ ನಾಯಕ ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದ ಭಾರತ ಸರ್ಕಾರ ಹಾಗೂ ಭಾರತೀಯ ಜನತೆಗೆ ಇರಾನ್ ಕೃತಜ್ಞತೆ ವ್ಯಕ್ತಪಡಿಸಿದೆ. ಭಾರತದ ಅಧಿಕೃತ ನಿಯೋಗ, ರಾಜಕೀಯ ನಾಯಕರು ಮತ್ತು ವಿವಿಧ ಧರ್ಮಗಳ ಪ್ರತಿನಿಧಿಗಳ ಉಪಸ್ಥಿತಿ ಉಭಯ ದೇಶಗಳ ನಡುವಿನ ಐತಿಹಾಸಿಕ ಸ್ನೇಹ ಹಾಗೂ ಪರಸ್ಪರ ಗೌರವದ ಸಂಕೇತವಾಗಿದೆ ಎಂದು ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಟೆಹರಾನ್‌/ದೆಹಲಿ, ಜು. 6: ಇರಾನ್‌ನ ಪರಮೋಚ್ಚ ನಾಯಕ ದಿವಂಗತ ಅಯತೊಲ್ಲಾ ಅಲಿ ಖಮೇನಿ (Ayatollah Seyyed Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಗೌರವ ಸಲ್ಲಿಸಿದ ಭಾರತ ಸರ್ಕಾರ ಹಾಗೂ ಭಾರತೀಯ ಜನತೆಗೆ ಇರಾನ್ ಸರ್ಕಾರ ಕೃತಜ್ಞತೆ ವ್ಯಕ್ತಪಡಿಸಿದೆ. ಈ ಮೂಲಕ ಉಭಯ ದೇಶಗಳ ನಡುವಿನ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಮಾನವೀಯ ಬಾಂಧವ್ಯ ಮತ್ತಷ್ಟು ಬಲಗೊಂಡಿದೆ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ತಿಳಿಸಿದೆ.

ಭಾರತದ ಪರವಾಗಿ ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸಯ್ಯದ್ ಅತಾ ಹಸ್ನೈನ್ ಹಾಗೂ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರ ಮಾರ್ಗರಿಟಾ ನೇತೃತ್ವದ ನಿಯೋಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಖಾಮೆನೇಯಿ ಅವರಿಗೆ ಅಂತಿಮ ನಮನ ಸಲ್ಲಿಸಿತು.

ಇದರೊಂದಿಗೆ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಜೊತೆಗೆ ಸಿಖ್, ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಧಾರ್ಮಿಕ ಮುಖಂಡರೂ ಶ್ರದ್ಧಾಂಜಲಿ ಸಲ್ಲಿಸಿದರು.

ಇರಾನ್ ರಾಯಭಾರ ಕಚೇರಿ ಹೇಳಿದ್ದೇನು?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದ ಸಂದೇಶದಲ್ಲಿ, ಭಾರತ ಸರ್ಕಾರ ಮತ್ತು ಭಾರತೀಯ ಜನರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿರುವ ಇರಾನ್, ಈ ಬೆಂಬಲವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದೆ.

ಭಾರತದ ರಾಜಕೀಯ ನಾಯಕರು, ಸಂಸದರು, ವಿದ್ವಾಂಸರು, ಬುದ್ಧಿಜೀವಿಗಳು ಹಾಗೂ ವಿವಿಧ ಧರ್ಮಗಳ ಮುಖಂಡರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿರುವುದು ಉಭಯ ರಾಷ್ಟ್ರಗಳ ನಡುವಿನ ಆಳವಾದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧದ ಪ್ರತೀಕವಾಗಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.

ಟೆಹ್ರಾನ್‌ನಲ್ಲಿ ಖಮೇನಿಗೆ ಅಂತಿಮ ಸಾರ್ವಜನಿಕ ವಿದಾಯ; ಪ್ರತೀಕಾರದ ಘೋಷಣೆಗಳಿಂದ ಮೊಳಗಿದ ಇರಾನ್

ಇದು ಇರಾನ್ ಜನರ ದುಃಖದ ಸಂದರ್ಭದಲ್ಲಿ ಭಾರತ ತೋರಿದ ಗೌರವ, ಸ್ನೇಹ ಮತ್ತು ಸಹಾನುಭೂತಿಯ ಸಂಕೇತವಾಗಿದ್ದು, ಉಭಯ ರಾಷ್ಟ್ರಗಳ ಸ್ನೇಹವನ್ನು ಇನ್ನಷ್ಟು ಬಲಪಡಿಸುವ ಅಡಿಪಾಯವಾಗಲಿದೆ ಎಂದು ಹೇಳಿದೆ.

ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರ ಭಾಗಿ

ಟೆಹರಾನ್‌ನಲ್ಲಿ ನಡೆದ ಅಂತಿಮಯಾತ್ರೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಖಾಮೆನೇಯಿ ಅವರ ಶವಪೆಟ್ಟಿಗೆಯನ್ನು ಧ್ವಜದಿಂದ ಹೊದಿಸಿ ವಿಶೇಷ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು. ಅಂತಿಮವಾಗಿ ಅವರ ಪಾರ್ಥಿವ ಶರೀರವನ್ನು ಅವರ ಜನ್ಮಸ್ಥಳವಾದ ಮಶ್ಹದ್ ನಗರದ ಇಮಾಮ್ ರೆಝಾ ದರ್ಗಾದಲ್ಲಿ ಸಮಾಧಿ ಮಾಡಲಾಗುತ್ತದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.