ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಆಯೋಮಯಗೊಂಡ ಇರಾನ್; ತಣಿಯದ ಅಯತೊಲ್ಲಾ ವಿರುದ್ಧ ಭುಗಿಲೆದ್ದ ಆಕ್ರೋಶ: ಜನಾಕ್ರೋಶಕ್ಕೆ ಕಾರಣವೇನು?

Ayatollah Khamenei: ಇರಾನ್‌ನಲ್ಲಿ ಅಯತೊಲ್ಲಾ ಅಲ್‌ ಖಮೇನಿ ಆಡಳಿತದ ವಿರುದ್ಧ ಜನರ ಆಕ್ರೋಶ ದಿನೇ ದಿನೆ ಹೆಚ್ಚುತ್ತಿದ್ದು, ಪ್ರತಿಭಟನೆ, ಅಶಾಂತಿ ಮತ್ತು ರಾಜಕೀಯ ಬಿಕ್ಕಟ್ಟು ತೀವ್ರಗೊಳ್ಳುತ್ತಿವೆ. ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತಿದೆ. ಪ್ರತಿಭಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದು, 2,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಇರಾನ್‌ನಲ್ಲಿ ಹತೋಟಿಗೆ ಬಾರದ ಆಂತರಿಕ ದಂಗೆ

ಇರಾನ್‌ನಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ) -

Profile
Sushmitha Jain Jan 9, 2026 9:44 PM

ಟೆಹ್ರಾನ್‌, ಜ. 9: ಇರಾನ್‌ನ (Iran) ಮೂಲಭೂತವಾದಿ ಹಾಗೂ ದೇಶದ ಪರಮೋಚ್ಚ ನಾಯಕ ಅಯತೊಲ್ಲಾ ಅಲ್‌ ಖಮೇನಿ (Ayatollah Khamenei) ನೇತೃತ್ವದ ಸರ್ಕಾರದ ವಿರುದ್ಧ ರಾಜಧಾನಿ ಟೆಹ್ರಾನ್‌ನಲ್ಲಿ ಆರಂಭವಾದ ಪ್ರತಿಭಟನೆ ದೇಶಾದ್ಯಂತ ವ್ಯಾಪಿಸಿದೆ. ಭದ್ರತಾ ಪಡೆಗಳು ಹಾಗೂ ಪ್ರತಿಭಟನಾಕಾರರ ನಡುವಿನ ತಿಕ್ಕಾಟದಲ್ಲಿ 8 ಮಕ್ಕಳು ಸೇರಿದಂತೆ 45ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ಪ್ರತಿಭಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದು, 2,000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಹಣದುಬ್ಬರ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ

ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಸಮುದಾಯದಿಂದ ನಿರ್ಬಂಧಕ್ಕೊಳಗಾಗಿರುವ ಇರಾನ್‌ನಲ್ಲಿ ಕಳೆದ ಕೆಲ ವರ್ಷಗಳಿಂದ ಹಣದುಬ್ಬರ ಮಿತಿಮೀರಿದೆ. ಇರಾನಿ ರಿಯಾಲ್‌ನ ಮೌಲ್ಯ ಕುಸಿತದಿಂದಾಗಿ ಆಹಾರ, ಔಷಧ, ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇದರಿಂದಾಗಿ ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ. 2025ರ ಡಿಸೆಂಬರ್ ಹೊತ್ತಿಗೆ ಹಣದುಬ್ಬರ ಶೇಕಡಾ 42.4, ಆಹಾರ ಹಣದುಬ್ಬರ ಶೇಕಡಾ 70ಕ್ಕೆ ತಲುಪಿದೆ ಹಾಗೂ ರಿಯಾಲ್ ಡಾಲರ್‌ಗೆ ಹೋಲಿಸಿದರೆ ಶೇಕಡಾ 80ರಷ್ಟು ಕುಸಿದಿದೆ. ಇದು ಸರಕಾರದ ನಿರ್ವಹಣೆಯ ಕೊರತೆ, ಭ್ರಷ್ಟಾಚಾರ ಮತ್ತು ನಿರ್ಬಂಧಗಳಿಂದ ಉಂಟಾಗಿದೆ.

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ:



ಪ್ರತಿಭಟನೆಗೆ ವ್ಯಾಪಾರಿಗಳು ಸಾಥ್

ಇರಾನ್‌ನಲ್ಲಿ ಆರ್ಥಿಕ ಕುಸಿತ, ಬೆಲೆ ಏರಿಕೆ ಮತ್ತು ಸರ್ಕಾರದ ವಿರುದ್ಧದ ಪ್ರತಿಭಟನೆಗಳು ತೀವ್ರಗೊಂಡಿದ್ದು, ಟೆಹ್ರಾನ್‌ನ ದೊಡ್ಡ ಬಜಾರ್‌ನಂತಹ ಪ್ರಮುಖ ವ್ಯಾಪಾರಿಗಳು ಮತ್ತು ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆಗೆ ಬೆಂಬಲ ನೀಡುತ್ತಿದ್ದಾರೆ. ಇದು ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆಯನ್ನು ಹೆಚ್ಚಿಸಿದೆ. ಇಷ್ಟೇ ಅಲ್ಲದೇ ಇರಾನ್‌ ಸರ್ವೋಚ್ಚ ನಾಯಕ ಖಮೇನಿ ಅವರ ತವರು ಮತ್ತು ಅವರ ಆಂತರಿಕ ವಲಯದಿಂದ ಬಿಗಿಯಾಗಿ ನಿಯಂತ್ರಿಸಲ್ಪಡುವ ನಗರವಾದ ಮಷಾದ್‌ನಲ್ಲೂ ಭಾರೀ ಪ್ರತಿಭಟನೆ ನಡೆದಿದೆ.

ಇರಾನ್‌ನಲ್ಲಿ ಬೀದಿಗಿಳಿದ ಜನ, ಭಾರಿ ಪ್ರತಿಭಟನೆ, 7 ಮಂದಿ ಸಾವು

ಮುಲ್ಲಾ ಸತ್ತರೆ ಮಾತ್ರ ನಾಡಿಗೆ ಸ್ವಾತಂತ್ರ್ಯ!

ಇರಾನ್‌ನಲ್ಲಿ ಗ್ರಾಮೀಣ ಪ್ರದೇಶ ಸೇರಿದಂತೆ ಹಲವೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇಸ್ಲಾಮಿಕ್ ರಿಪಬ್ಲಿಕ್‌ನ ಧ್ವಜಗಳನ್ನು ಸುಡಲಾಗುತ್ತಿದೆ. ‘ಮುಲ್ಲಾ ಸಾಯುವವರೆಗೆ ಈ ನಾಡಿಗೆ ಸ್ವಾತಂತ್ರ್ಯ ಸಿಗವುದಿಲ್ಲ’, ‘ಖಮೇನಿ ಸಾಯಲಿ’, ‘ಮುಲ್ಲಾಗಳು ತೊಲಗಲಿ’, ‘ನಿರಂಕುಶ ಪ್ರಭುತ್ವಕ್ಕೆ ಸಾವಾಗಲಿ’ ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗುತ್ತಿದ್ದಾರೆ ಎಂದು ಪತ್ರಕರ್ತೆ ಮಸಿಹ್ ಅಲಿನೇಜಾದ್ ಅವರು ಟ್ವೀಟ್ ಮಾಡಿದ್ದಾರೆ.

ಗಡಿಪಾರಾದ ಇರಾನ್ ಯುವರಾಜ ರೆಜಾ ಪಹ್ಲವಿ ಅಮೆರಿಕದಲ್ಲಿ!

ಗಡಿಪಾರುಗೊಂಡ ಇರಾನ್ ಯುವರಾಜ ರೆಜಾ ಪಹ್ಲವಿ ಅಮೆರಿಕದಲ್ಲಿ ವಾಸಿಸುತ್ತಿದ್ದು, ಇರಾನ್‌ನಲ್ಲಿ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಆಡಳಿತಕ್ಕಾಗಿ ಹೋರಾಡುತ್ತಿದ್ದಾರೆ. ಇಸ್ಲಾಮಿಕ್ ಆಡಳಿತದ ಕುಸಿತಕ್ಕಾಗಿ ಕರೆ ನೀಡಿರುವ ರೆಜಾ ಪಹ್ಲವಿ, ಅಮೆರಿಕದ ಮಿಲಿಟರಿ ಹಸ್ತಕ್ಷೇಪವಿಲ್ಲದೆ ಜನರು ಸ್ವತಃ ಬದಲಾವಣೆ ತರಬಹುದು ಎಂದು ಹೇಳಿದ್ದಾರೆ. ಆದರೆ ಅಮೆರಿಕವು ಪ್ರತಿಭಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಪಹ್ಲವಿ ಅವರ ಹೋರಾಟಕ್ಕೆ ಬೆಂಬಲ ನೀಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.

ಇಂಟರ್‌ನೆಟ್ ಮತ್ತು ಫೋನ್ ಸೇವೆ ಬಂದ್

ಕಳೆದ 12 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಗೆ ದೇಶವೇ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇರಾನ್‌ನಿಂದ ಗಡಿಪಾರು ಆಗಿರುವ ಯುವರಾಜ ರೇಜಾ ಪಹ್ಲವಿ ಗುರುವಾರ (ಜನವರಿ 6) ಸಾಮೂಹಿಕ ಪ್ರತಿಭಟನೆಗೆ ಕರೆ ನೀಡಿದ್ದ ಬೆನ್ನಲ್ಲೇ ತಡರಾತ್ರಿ ಟೆಹ್ರಾನ್‌ ಮತ್ತು ಇತರ ನಗರಗಳಲ್ಲಿ ಸಾವಿರಾರು ಜನರು ಬೀದಿಗಿಳಿದು ಖಮೇನಿ ಸರಕಾರದ ವಿರುದ್ಧ ಘೋಷಣೆ ಕೂಗಲು ಆರಂಭಿಸಿದ್ದಾರೆ. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಖಮೇನಿ ಸರಕಾರ ಮುನ್ನೆಚ್ಚರಿಕ ಕ್ರಮವಾಗಿ ಇಂಟರ್‌ನೆಟ್ ಹಾಗೂ ಅಂತಾರಾಷ್ಟ್ರೀಯ ಫೋನ್ ಸೇವೆಗಳನ್ನು ಸ್ಥಗಿತಗೊಳಿಸಿದೆ.

ಮಾಧ್ಯಮಗಳ ಮೇಲೂ ನಿರ್ಬಂಧ

ಇನ್ನು ಇರಾನ್‌ನಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದ್ದು, ಇರಾನಿ ಸರ್ಕಾರಿ ಮಾಧ್ಯಮಗಳು ಸೀಮಿತ ಪ್ರಸಾರ ನೀಡುತ್ತಿವೆ. ಅಲ್ಲದೇ ದೇಶಿಯ ಹಾಗೂ ವಿದೇಶಿ ಪತ್ರಕರ್ತರು ನಿರ್ಬಂಧ ಮತ್ತು ಬಂಧನದ ಭೀತಿ ಎದರಿಸುವಂತಾಗಿದೆ. ಆನ್‌ಲೈನ್ ವಿಡಿಯೊಗಳು ಕೇವಲ ಘಟನೆಗಳ ತುಣುಕುಗಳನ್ನು ಮಾತ್ರ ನೀಡುತ್ತಿವೆ.

ಪರಿಸ್ಥಿತಿ ಬಿಗಡಾಯಿಸಿದರೆ ಮಧ್ಯ ಪ್ರವೇಶ

ಮತ್ತೊಂದೆಡೆ ಇರಾನ್ ಪ್ರತಿಭಟನಾಕಾರರ ಬೆಂಬಲಕ್ಕೆ ಇರಾನ್‌ ಸರ್ಕಾರದ ವಿರೋಧಿ ಆಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಧಾವಿಸಿದ್ದಾರೆ. ʼʼಶಾಂತಿಯುತವಾಗಿ ಪ್ರತಿಭಟನೆ ನಡೆಸುವವರ ವಿರುದ್ಧ ಗುಂಡಿನ ದಾಳಿ ನಡೆಸಿದರೆ ನಾವು ಸುಮ್ಮನಿರಲ್ಲ. ಸರ್ಕಾರ ಪ್ರತಿಭಟನಾಕಾರರನ್ನು ಹಿಂಸಾಚಾರದ ಮೂಲಕ ಧಮನಿಸಲು ಹೊರಟರೆ ಅಮೆರಿಕವು ಪ್ರತಿಭಟನಾಕಾರರ ನೆರವಿಗೆ ಬರಲಿದೆʼ’ ಎಂದು ಎಂದು ಟ್ರಂಪ್‌ ಇರಾನ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.