ಕೀವ್, ಮಾ. 31: ಸೌದಿ ಅರೇಬಿಯಾದಲ್ಲಿರುವ (Saudi Arabia) ಅಮೆರಿಕದ (America) ಮಿಲಿಟರಿ ನೆಲೆಗಳ ಮೇಲೆ ಇರಾನ್ (Iran) ದಾಳಿ ನಡೆಸುವ ಮುನ್ನ ರಷ್ಯಾವು ಮಧ್ಯಪ್ರಾಚ್ಯದಾದ್ಯಂತ ಇರುವ ಅಮೆರಿಕ ಮತ್ತು ಅದರ ಮಿತ್ರಪಡೆಗಳ ಮಿಲಿಟರಿ ಸೌಲಭ್ಯಗಳ ಮೇಲೆ ಸ್ಯಾಟಲೈಟ್ ಮೂಲಕ ಕಣ್ಗಾವಲು ನಡೆಸಿತ್ತು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗಂಭೀರ ಆರೋಪ ಮಾಡಿದ್ದಾರೆ.
ಕತಾರ್‌ನಲ್ಲಿ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಝೆಲೆನ್ಸ್ಕಿ, ಈ ಪ್ರದೇಶದಲ್ಲಿ ಅಮೆರಿಕದ ಪಡೆಗಳನ್ನು ಗುರಿಯಾಗಿಸಲು ರಷ್ಯಾವು ಇರಾನ್‌ನೊಂದಿಗೆ ಗುಪ್ತಚರ ಮಾಹಿತಿಯನ್ನು ಹಂಚಿಕೊಂಡಿದೆ ಎಂಬ ಬಗ್ಗೆ ತಮಗೆ "100%" ವಿಶ್ವಾಸವಿದೆ ಎಂದು ಹೇಳಿದ್ದಾರೆ. "ಇರಾನಿಯನ್ನರಿಗೆ ಸಹಾಯ ಮಾಡುವುದು ರಷ್ಯಾದ ಹಿತಾಸಕ್ತಿ. ಅವರು ಮಾಹಿತಿ ಹಂಚಿಕೊಳ್ಳುತ್ತಾರೆ ಎಂಬುದು ನನಗೆ ತಿಳಿದಿದೆ. ಅವರು ಸಹಾಯ ಮಾಡುತ್ತಾರೆಯೇ? ಖಂಡಿತವಾಗಿಯೂ, ನೂರಕ್ಕೆ ನೂರರಷ್ಟು ಸಹಾಯ ಮಾಡುತ್ತಾರೆ" ಎಂದು ಅವರು ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.
ರಷ್ಯಾ ಬಗ್ಗೆ ವೊಲೊಡಿಮಿರ್ ಝೆಲೆನ್ಸ್ಕಿ ಮಾತು:
ಝೆಲೆನ್ಸ್ಕಿ ವಾದವೇನು?
ಮಾರ್ಚ್ 24 ಮತ್ತು 26ರ ನಡುವೆ ರಷ್ಯಾದ ಉಪಗ್ರಹಗಳು ಇರಾನ್‌ನ ಹಿತಾಸಕ್ತಿಗಾಗಿ ಹಲವು ಆಯಕಟ್ಟಿನ ಸ್ಥಳಗಳ ಚಿತ್ರಗಳನ್ನು ತೆಗೆದಿವೆ ಎಂದು ತಮಗೆ ಗುಪ್ತಚರ ಮಾಹಿತಿ ಲಭ್ಯವಾಗಿದೆ ಎಂಬುದಾಗಿ ಝೆಲೆನ್ಸ್ಕಿ 'X' ನಲ್ಲಿ ಬರೆದಿದ್ದಾರೆ. ಚಾಗೋಸ್ ದ್ವೀಪ ಸಮೂಹದ ಡಿಯಾಗೋ ಗಾರ್ಸಿಯಾ ಮಿಲಿಟರಿ ನೆಲೆ, ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆ ಸೇರಿ ಹಲವು ಪ್ರಮುಖ ತೈಲ ಕ್ಷೇತ್ರಗಳ ಚಿತ್ರಗಳನ್ನು ರಷ್ಯಾ ಸೆರೆಹಿಡಿದಿದೆ ಎಂದು ಅವರು ಪಟ್ಟಿ ಮಾಡಿದ್ದಾರೆ.
ಇರಾನ್ ವಿರುದ್ಧದ ಯುದ್ಧದಿಂದ ಅಮೆರಿಕಗೆ ಭಾರಿ ಆರ್ಥಿಕ ಹೊರೆ; ದಿನಕ್ಕೆ 8,455 ಕೋಟಿ ರುಪಾಯಿ ವೆಚ್ಚ!
ಯಾವುದೇ ದೇಶವು ಪದೇ ಪದೆ ಇಂತಹ ವಿಚಕ್ಷಣಾ ಮಾಹಿತಿ ಸಂಗ್ರಹಿಸುತ್ತಿದೆ ಎಂದರೆ ಅದು ದಾಳಿಗೆ ತಯಾರಿ ನಡೆಸುತ್ತಿದೆ ಎಂದೇ ಅರ್ಥ ಎಂದು ಅವರು ವಿಶ್ಲೇಷಿಸಿದ್ದಾರೆ. ರಷ್ಯಾವನ್ನು "ಆಕ್ರಮಣಕಾರಿ ರಾಷ್ಟ್ರ" ಎಂದು ಕರೆದ ಝೆಲೆನ್ಸ್ಕಿ, ಇಷ್ಟೆಲ್ಲ ನಡೆಯುತ್ತಿದ್ದರೂ ಕೆಲವು ರಾಷ್ಟ್ರಗಳು ರಷ್ಯಾದ ಮೇಲಿನ ನಿರ್ಬಂಧಗಳನ್ನು ಏಕೆ ಸಡಿಲಗೊಳಿಸುತ್ತಿವೆ ಎಂದು ಪ್ರಶ್ನಿಸಿದ್ದಾರೆ. ಅಮೆರಿಕ ಮತ್ತು ಬ್ರಿಟನ್ ನೆಲೆಗಳ ಮೇಲೆ ದಾಳಿ ಮಾಡಲು ರಷ್ಯಾ ಮಾಹಿತಿ ನೀಡುತ್ತಿರುವಾಗ, ನಿರ್ಬಂಧಗಳನ್ನು ತೆಗೆದುಹಾಕುವುದು ವಿಚಿತ್ರವಾಗಿ ಕಾಣುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ಮಾರ್ಚ್ 26ರಂದು ಸೌದಿ ಅರೇಬಿಯಾದಲ್ಲಿ ನಡೆದ ಇರಾನ್ ಕ್ಷಿಪಣಿ ದಾಳಿಯಲ್ಲಿ ಕೆಲವು ಅಮೆರಿಕದ ಸೈನಿಕರು ಗಾಯಗೊಂಡಿದ್ದರು ಎಂಬುದು ಇಲ್ಲಿ ಗಮನಾರ್ಹ.