ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಮೆರಿಕದ ಒಪ್ಪಂದ ತಿರಸ್ಕರಿಸಿದ ಇರಾನ್; ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಆರಂಭವಾಗುವ ಭೀತಿ

ಇರಾನ್ ಸೇನಾ ಅಧಿಕಾರಿಗಳು ಅಮೆರಿಕದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ವಾಷಿಂಗ್ಟನ್‌ನ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ ಎಂದು ಹೇಳಿದ್ದಾರೆ. ಜತೆಗೆ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಯುದ್ಧ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇರಾನ್ ಸೇನೆ ಹೈ ಅಲರ್ಟ್‌ನಲ್ಲಿ ಇದ್ದು, ಯಾವುದೇ ದಾಳಿ ಎದುರಿಸಲು ಸಿದ್ಧವಾಗಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಇರಾನ್ ಮಾತುಕತೆಯನ್ನು ತಿರಸ್ಕರಿಸಿದ್ದು, ಪರಮಾಣು ಭೀತಿ ಬಗ್ಗೆ ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಜಾಫರ್ ಅಸಾದಿ - ಡೋನಾಲ್ಡ್ ಟ್ರಂಪ್ (ಸಂಗ್ರಹ ಚಿತ್ರ)

ವಾಷಿಂಗ್ಟನ್‌, ಮೇ 2: ಅಮೆರಿಕ ಮತ್ತು ಇಸ್ರೇಲ್ (US - Israel) ಇರಾನ್ ವಿರುದ್ಧ ಹೂಡಿರುವ ಯುದ್ಧ ಮತ್ತೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಇರಾನ್ ಸಶಸ್ತ್ರ ಪಡೆಗಳು ಎಚ್ಚರಿಸಿವೆ. ಅಮೆರಿಕವು ಯಾವುದೇ ಒಪ್ಪಂದಗಳು ಅಥವಾ ಸಂಧಿಗಳಿಗೆ ಬದ್ಧವಾಗಿಲ್ಲ ಎಂಬುದು ಲಭ್ಯವಿರುವ ಪುರಾವೆಗಳಿಂದ ಸಾಬೀತಾಗುತ್ತಿದೆ ಎಂದು ಇರಾನ್ ಪ್ರತಿಪಾದಿಸಿದೆ. ಇರಾನ್‌ನ ಸೇನಾ ಪ್ರಧಾನ ಕಚೇರಿಯ ಉಪ ಮುಖ್ಯಸ್ಥ ಮೊಹಮ್ಮದ್ ಜಾಫರ್ ಅಸಾದಿ ಈ ಕುರಿತು ಹೇಳಿಕೆ ನೀಡಿದ್ದು, ಅಮೆರಿಕದ ಅಧಿಕಾರಿಗಳ ಇತ್ತೀಚಿನ ನಡವಳಿಕೆಗಳು ರಾಜತಾಂತ್ರಿಕ ತಿಳುವಳಿಕೆಯಲ್ಲಿ ವಿಶ್ವಾಸದ ಕೊರತೆಯನ್ನು ತೋರಿಸುತ್ತಿವೆ ಎಂದು ಆರೋಪಿಸಿದ್ದಾರೆ.

"ಅಮೆರಿಕದ ಹೇಳಿಕೆಗಳು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾಡುತ್ತಿರುವಂತವು. ಮೊದಲನೆಯದಾಗಿ ತೈಲ ಬೆಲೆ ಕುಸಿತವನ್ನು ತಡೆಯುವುದು ಮತ್ತು ಎರಡನೆಯದಾಗಿ ತಾವು ಸೃಷ್ಟಿಸಿರುವ ಅವಾಂತರಗಳಿಂದ ಹೊರಬರುವುದು ಅವರ ಮುಖ್ಯ ಉದ್ದೇಶ" ಎಂದು ಅಸಾದಿ ಕಿಡಿಕಾರಿದ್ದಾರೆ. ಇರಾನ್ ಸೇನೆಯು ಹೈ ಅಲರ್ಟ್‌ನಲ್ಲಿದ್ದು, ಅಮೆರಿಕದ ಯಾವುದೇ ಹೊಸ ಸಾಹಸ ಅಥವಾ ಮೂರ್ಖತನದ ನಡೆಗೆ ತಕ್ಕ ಉತ್ತರ ನೀಡಲು ಸನ್ನದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಡೊನಾಲ್ಡ್‌ ಟ್ರಂಪ್–ವ್ಲಾಡಿಮಿರ್ ಪುಟಿನ್ 90 ನಿಮಿಷ ಮಾತುಕತೆ: ಇರಾನ್ ಯುದ್ಧ, ಉಕ್ರೇನ್ ಕದನ ವಿರಾಮದ ಬಗ್ಗೆ ಮಹತ್ವದ ಚರ್ಚೆ

ಮತ್ತೊಂದೆಡೆ, ಇರಾನ್ ನೀಡಿದ್ದ ಇತ್ತೀಚಿನ ಮಾತುಕತೆಯ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇರಾನ್ ಒಪ್ಪಿಕೊಳ್ಳಲಾಗದಂತಹ ರಿಯಾಯಿತಿ ಕೇಳುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಯುದ್ಧವಿರಾಮದ ನಂತರ ಸಂಘರ್ಷ "ಕೊನೆಗೊಂಡಿದೆ" ಎಂದು ಟ್ರಂಪ್ ಹೇಳುತ್ತಿದ್ದರೂ, ಯುದ್ಧದ ಅಧಿಕಾರಕ್ಕೆ ಸಂಬಂಧಿಸಿದ ನಿರ್ಣಯಗಳನ್ನು ಅವರು ಅಸಂವಿಧಾನಿಕ ಎಂದು ಕರೆದಿದ್ದಾರೆ. ಈ ನಡುವೆ ಕಾಂಗ್ರೆಸ್‌ನ ಗಡುವು ಕೂಡ ಯಾವುದೇ ನಿರ್ಧಾರವಿಲ್ಲದೆ ಮುಕ್ತಾಯಗೊಳ್ಳುವ ಹಂತದಲ್ಲಿದೆ.

ಇದಲ್ಲದೆ, ಇರಾನ್ ಮೇಲಿನ ಸಂಘರ್ಷವನ್ನು ಸಮರ್ಥಿಸಿಕೊಂಡಿರುವ ಟ್ರಂಪ್, "ಮತಿಭ್ರಷ್ಟರ ಕೈಗೆ ಪರಮಾಣು ಆಯುಧಗಳು ಸಿಗಲು ನಾವು ಬಿಡುವುದಿಲ್ಲ" ಎಂದು ಗುಡುಗಿದ್ದಾರೆ. ಕದನ ವಿರಾಮದ ನಂತರವೂ ಪರಿಸ್ಥಿತಿ ತಿಳಿಯಾದಂತೆ ಕಾಣುತ್ತಿಲ್ಲ. ಇರಾನ್ ನಾಯಕತ್ವವು ವಿಭಜನೆಯಾಗಿದೆ ಎಂದು ಟ್ರಂಪ್ ಟೀಕಿಸಿದ್ದು, ಜಾಗತಿಕ ಮಟ್ಟದಲ್ಲಿ ಯುದ್ಧದ ಭೀತಿ ಮತ್ತೆ ಎದುರಾಗಿದೆ. ಇರಾನ್ ಮತ್ತು ಅಮೆರಿಕ ನಡುವಿನ ಈ ವಾಕ್ಸಮರವು ಮಧ್ಯಪ್ರಾಚ್ಯದಲ್ಲಿ ಮತ್ತೆ ಅಸ್ಥಿರತೆಯನ್ನು ಉಂಟುಮಾಡುವ ಆತಂಕವನ್ನು ಹೆಚ್ಚಿಸಿದೆ. ಅಮೆರಿಕದ ನಡೆಯನ್ನು ಇರಾನ್ ತೀವ್ರವಾಗಿ ಗಮನಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಸಂಘರ್ಷ ಮತ್ತೆ ಸ್ಫೋಟಗೊಳ್ಳುವ ಲಕ್ಷಣಗಳು ಕಾಣುತ್ತಿವೆ.