ಟೆಹ್ರಾನ್, ಫೆ. 28: ಅಮೆರಿಕ ಹಾಗೂ ಇಸ್ರೇಲ್ ಇರಾನ್ ವಿರುದ್ಧ ಜಂಟಿ ದಾಳಿ ನಡೆಸಿದ ಬಳಿಕ ಇದೀಗ ಇರಾನ್, ಇಸ್ರೇಲ್ ಕಡೆಗೆ ಕ್ಷಿಪಣಿಗಳು ಹಾಗೂ ಡ್ರೋನ್‌ಗಳಿಂದ ದಾಳಿ ಮಾಡಿದೆ (Israel-Iran conflict). ಈ ಬಗ್ಗೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ. ಇರಾನ್‌ನ ದಾಳಿಯನ್ನು ಇಸ್ರೇಲ್ ರಕ್ಷಣಾ ಪಡೆಗಳು (IDF) ದೃಢಪಡಿಸಿವೆ. ಇದು ಟೆಹ್ರಾನ್ (Tehran) ಮೇಲೆ ಇಸ್ರೇಲ್ ದಾಳಿಯ ನಂತರ ಯುದ್ಧ ಬೀತಿ ಮುಂದುವರಿಯ ಸೂಚನೆ ನೀಡಿದೆ.
ಕ್ಷಿಪಣಿಗಳನ್ನು ಉಡಾಯಿಸಲಾಗಿದೆ ಎಂಬುದು ದೃಢಪಡಿಸುವ ಕೆಲ ನಿಮಿಷಗಳ ಮುನ್ನ, ಇಸ್ರೇಲ್ ರಕ್ಷಣಾ ಪಡೆಗಳು (IDF) ದೇಶದಾದ್ಯಂತ ಮೊಬೈಲ್ ಫೋನ್‌ಗಳಿಗೆ ಮುಂಚಿತ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿ, ನಾಗರಿಕರು ಸುರಕ್ಷಿತ ಸ್ಥಳಗಳ ಹತ್ತಿರವೇ ಇರಲು ಸೂಚಿಸಿತು. ಈ ಎಚ್ಚರಿಕೆಯನ್ನು, ದೇಶದತ್ತ ಕ್ಷಿಪಣಿ ದಾಳಿ ಸಂಭವಿಸುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಸಿದ್ಧರನ್ನಾಗಿಸಲು ಕೈಗೊಂಡ ಪೂರ್ವಭಾವಿ ಕ್ರಮವೆಂದು ವಿವರಿಸಲಾಗಿದೆ.
ಇಲ್ಲಿದೆ ಪೋಸ್ಟ್:
ಸ್ವಲ್ಪ ಸಮಯದ ನಂತರ, ಇರಾನ್‌ನಿಂದ ಇಸ್ರೇಲ್ ಕಡೆಗೆ ಹಾರಿಸಲಾದ ಕ್ಷಿಪಣಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಐಡಿಎಫ್ ಹೇಳಿದೆ. ಈ ಬೆದರಿಕೆಯನ್ನು ತಡೆಗಟ್ಟಲು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದ್ದು, ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಹೋಮ್ ಫ್ರಂಟ್ ಕಮಾಂಡ್ ವ್ಯವಸ್ಥೆಯ ಮೂಲಕ ಹೆಚ್ಚುವರಿ ಮುನ್ನೆಚ್ಚರಿಕಾ ನಿರ್ದೇಶನಗಳನ್ನು ಕಳುಹಿಸಲಾಗಿದೆ.
ಕ್ಷಿಪಣಿ ದಾಳಿಗಳನ್ನು ಗುರುತಿಸಿದ ನಂತರ ಹಲವು ಪ್ರದೇಶಗಳಲ್ಲಿ ಸೈರನ್‌ಗಳು ಮೊಳಗಿದವು. ಇಸ್ರೇಲಿ ವಾಯುಪಡೆಯು ಬರುತ್ತಿರುವ ಕ್ಷಿಪಣಿಗಳನ್ನು ಅಡ್ಡಗಟ್ಟಲು ಕಾರ್ಯಾಚರಣೆ ನಡೆಸುತ್ತಿದ್ದು, ಅಗತ್ಯವಿದ್ದಲ್ಲಿ ಅವುಗಳನ್ನು ನಿಷ್ಕ್ರಿಯಗೊಳಿಸಲು ದಾಳಿಯನ್ನೂ ನಡೆಸುತ್ತಿದೆ ಎಂದು ತಿಳಿಸಿದೆ.
ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ; ಖಮೇನಿ ಕಚೇರಿ ಮೇಲೂ ಅಟ್ಯಾಕ್, 30ಕ್ಕೂ ಹೆಚ್ಚು ಕಡೆ ಬಾಂಬ್ ಸ್ಫೋಟ
ಪರಿಸ್ಥಿತಿಯ ಮೌಲ್ಯಮಾಪನದ ನಂತರ, ಇಸ್ರೇಲ್ ರಕ್ಷಣಾ ಪಡೆಗಳು ಶನಿವಾರ ಬೆಳಗ್ಗೆ 8 ಗಂಟೆಯಿಂದ ಹೋಮ್ ಫ್ರಂಟ್ ಕಮಾಂಡ್ ಮಾರ್ಗಸೂಚಿಗಳ ಅಡಿಯಲ್ಲಿ ತಕ್ಷಣದಿಂದಲೇ ಬದಲಾವಣೆಗಳು ಜಾರಿಯಾಗುತ್ತವೆ ಎಂದು ಘೋಷಿಸಿತು.
ದೇಶದ ಎಲ್ಲ ಪ್ರದೇಶಗಳನ್ನು ಪೂರ್ಣ ಚಟುವಟಿಕೆ ಸ್ಥಿತಿಯಿಂದ ಅತ್ಯಾವಶ್ಯಕ ಚಟುವಟಿಕೆ ಸ್ಥಿತಿಗೆ ವರ್ಗಾಯಿಸಲಾಗಿದೆ. ಹೊಸ ಮಾರ್ಗಸೂಚಿಗಳ ಪ್ರಕಾರ, ಶಿಕ್ಷಣ ಚಟುವಟಿಕೆಗಳು, ಸಾರ್ವಜನಿಕ ಸಭೆಗಳು ಹಾಗೂ ಬಹುತೇಕ ಉದ್ಯೋಗ ಸಂಬಂಧಿತ ಕಾರ್ಯಾಚರಣೆಗಳನ್ನು ನಿಷೇಧಿಸಲಾಗಿದೆ. ಅತ್ಯಾವಶ್ಯಕ ಸೇವೆಗಳಿಗಷ್ಟೇ ವಿನಾಯಿತಿ ನೀಡಲಾಗಿದೆ.
ಅಧಿಕಾರಿಗಳು ಜನರಿಗೆ ಹೋಮ್ ಫ್ರಂಟ್ ಕಮಾಂಡ್ ಚಾನಲ್‌ಗಳ ಮೂಲಕ ನೀಡಲಾಗುವ ಅಧಿಕೃತ ಸೂಚನೆಗಳನ್ನು, ಅದರಲ್ಲೂ ರಾಷ್ಟ್ರೀಯ ತುರ್ತು ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಕಟವಾಗುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದಾರೆ.
ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಮುನ್ನೆಚ್ಚರಿಕಾ ದಾಳಿ ನಡೆಸಿದುದಾಗಿ ಹೇಳಿಕೊಂಡ ನಂತರ ಈ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಇದರಿಂದ ಪ್ರಾದೇಶಿಕ ದ್ವೇಷ ಹೊಂದಿರುವ ಎರಡು ದೇಶಗಳ ನಡುವಿನ ಉದ್ವಿಗ್ನತೆ ತೀವ್ರಗೊಂಡಿದ್ದು, ದೊಡ್ಡ ಮಟ್ಟದ ಸಂಘರ್ಷದ ಭೀತಿ ಮೂಡಿದೆ. ಇನ್ನು ಇಸ್ರೇಲ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.