ರಿಯಾದ್, ಮಾ.3: ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚುತ್ತಿದ್ದಂತೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಮಂಗಳವಾರ (ಮಾ.3) ಡ್ರೋನ್ ದಾಳಿ (Iran drone attack) ನಡೆದಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟದ ಶಬ್ಧ ಕೇಳಿಬಂದಿದೆ. ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ (US-Iran attack) ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯವರ (Ayatollah Ali Khamenei) ಹತ್ಯೆಗೆ ಕಾರಣವಾದ ನಂತರ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ಮಧ್ಯೆ ಈ ದಾಳಿ ನಡೆದಿದೆ.
ಡ್ರೋನ್ ದಾಳಿ ನಡೆದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೂಟರ್ನ್ ಹೊಡೆದಿದ್ದಾರೆ. ಅಮೆರಿಕ ನೇರವಾಗಿ ಯುದ್ಧಭೂಮಿಗೆ ಭೂಸೇನೆಯನ್ನು ಕಳುಹಿಸುವ ಅಗತ್ಯ ಇಲ್ಲದಿರಬಹುದು ಎಂದು ಟ್ರಂಪ್ ಹೇಳಿದ್ದಾರೆ. ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಇರಾನ್‌ನ ಡ್ರೋನ್‌ಗಳು ದಾಳಿ ಮಾಡಿದ ನಂತರ ಬಲವಾದ ಪ್ರತಿಕ್ರಿಯೆಯ ಬಗ್ಗೆ ಇರಾನ್‌ಗೆ ಟ್ರಂಪ್ ಎಚ್ಚರಿಕೆ ನೀಡಿದರು. ರಿಯಾದ್‌ನಲ್ಲಿರುವ ತನ್ನ ರಾಯಭಾರ ಕಚೇರಿಯ ಮೇಲಿನ ದಾಳಿ ಮತ್ತು ಅಮೆರಿಕನ್ ಸೈನಿಕರ ಹತ್ಯೆಗೆ ವಾಷಿಂಗ್ಟನ್‌ನ ಪ್ರತಿಕ್ರಿಯೆಯನ್ನು ನೀವು (ಇರಾನ್) ಶೀಘ್ರದಲ್ಲೇ ನೋಡಲಿದ್ದೀರಿ ಎಂದು ಎಚ್ಚರಿಸಿದ್ದಾರೆ.
ಇಲ್ಲಿದೆ ವಿಡಿಯೊ:
ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಮಾನವರಹಿತ ಡ್ರೋನ್‌ಗಳು ಡಿಕ್ಕಿ ಹೊಡೆದಿವೆ. ಡ್ರೋನ್‌ಗಳು ಚಾನ್ಸೆರಿ ಕಟ್ಟಡದ ಛಾವಣಿಯನ್ನು ಹೊಡೆದಿವೆ. ವರದಿ ಪ್ರಕಾರ, ಡ್ರೋನ್‌ಗಳು ಇರಾನಿನದ್ದಾಗಿರಬಹುದೆಂದು ಶಂಕಿಸಲಾಗಿದೆ. ಆದರೆ ಯಾವುದೇ ಗುಂಪು ಇನ್ನೂ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿಲ್ಲ.
ಅಪಾಯದಲ್ಲಿ ಇರಾನ್‌ನ ಹಾರ್ಮುಜ್ ಜಲಸಂಧಿ: ಭಾರತದ ಮೇಲೇನು ಪರಿಣಾಮ? ಇಂಧನ ದರ ಏರಿಕೆಯಾಗುತ್ತಾ?
ಘಟನೆಯಿಂದ ಯಾವುದೇ ಸಾವು-ನೋವುಗಳು, ಗಾಯಗಳ ಬಗ್ಗೆ ವರದಿಯಾಗಿಲ್ಲ. ಎರಡು ಡ್ರೋನ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಸೌದಿ ಅರೇಬಿಯಾದ ರಕ್ಷಣಾ ಸಚಿವಾಲಯವು ದೃಢಪಡಿಸಿತು. ದಾಳಿಯಲ್ಲಿ ಅಲ್ಪ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡಕ್ಕೆ ಸಣ್ಣಪುಟ್ಟ ವಸ್ತು ಹಾನಿಯಾಗಿದೆ ಎಂದು ಸಚಿವಾಲಯ ಮಂಗಳವಾರ (ಮಾ.3) ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ದಾಳಿ ಬಳಿಕ ಕಟ್ಟಡದಿಂದ ಹೊಗೆ ಮೇಲೇಳುತ್ತಿರುವ ದೃಶ್ಯದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಟೆಹ್ರಾನ್ ಮೇಲೆ ವಾರಾಂತ್ಯದ ದಾಳಿಗಳ ನಂತರ ಪ್ರತೀಕಾರವಾಗಿ ಇರಾನ್ ಗುರಿಯಾಗಿಸಿಕೊಂಡಿರುವ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದು. ಸಂಘರ್ಷ ಹೆಚ್ಚುತ್ತಿದ್ದಂತೆ ಇರಾನ್, ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.
ಸೋಮವಾರ (ಮಾ.2) ರಾತ್ರಿ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಯುಎಸ್ ರಾಯಭಾರ ಕಚೇರಿಯ ಮೇಲೆ ದೊಡ್ಡ ಸ್ಫೋಟದ ಶಬ್ದ ಕೇಳಿಬಂದಿದ್ದು, ದಟ್ಟ ಹೊಗೆ ಏರುತ್ತಿರುವುದು ಕಂಡುಬಂದಿದೆ. ಇಸ್ರೇಲಿ, ಅಮೆರಿಕ ಮಿಲಿಟರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ದಾಳಿಗೊಳಗಾದ ಇತ್ತೀಚಿನ ವಾಷಿಂಗ್ಟನ್ ರಾಯಭಾರ ಕಚೇರಿ ಇದಾಗಿದೆ.