ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Israel-Iran Conflict: ಇರಾನ್‌ ಮೇಲೆ ಇಸ್ರೇಲ್‌ ದಾಳಿ; ಮಧ್ಯಪ್ರಾಚ್ಯ ಮತ್ತೆ ಸಂಘರ್ಷ ಭರಿತ: ಭಾರತೀಯರಿಗೆ ಎಚ್ಚರಿಕೆ

ಇರಾನ್‌ ಮೇಲೆ ಇಸ್ರೇಲ್‌ ಸರಣಿ ದಾಳಿಗಳನ್ನು ನಡೆಸಿದ್ದು ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಮತ್ತು 329 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ ಶುಕ್ರವಾರ ಮುಂಜಾನೆ ನಡೆಸಿದ ಹಠಾತ್‌ ದಾಳಿಯಲ್ಲಿ ಇರಾನ್ ಸೇನೆಯ ಪ್ರಮುಖ ಅಧಿಕಾರಿಗಳು, ಪರಮಾಣು ವಿಜ್ಞಾನಿಗಳು ಸೇರಿದಂತೆ ಅನೇಕ ಪ್ರಮುಖರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಟೆಹ್ರಾನ್:‌ ಇರಾನ್‌ ಮೇಲೆ ಇಸ್ರೇಲ್‌ ಸರಣಿ ದಾಳಿಗಳನ್ನು ನಡೆಸಿದ್ದು, ಮಧ್ಯಪ್ರಾಚ್ಯ ಮತ್ತೆ ಸಂಘರ್ಷ ಭರಿತವಾಗಿದೆ (Israel-Iran Conflict). ಇರಾನ್ ರಾಜಧಾನಿ ಟೆಹ್ರಾನ್‌ ಗುರಿಯಾಗಿಸಿಕೊಂಡು ಶುಕ್ರವಾರ (ಜೂ. 13) ಮುಂಜಾನೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ಕನಿಷ್ಠ 78 ಜನರು ಸಾವನ್ನಪ್ಪಿದ್ದಾರೆ ಮತ್ತು 329 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. "ಟೆಹ್ರಾನ್ ಪ್ರಾಂತ್ಯದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ 329 ಮಂದಿ ಗಾಯಗೊಂಡು 78 ಮಂದಿ ಹುತಾತ್ಮರಾಗಿದ್ದಾರೆ" ಎಂದು ಇರಾನ್‌ನ ಸುದ್ದಿಸಂಸ್ಥೆ ಫಾರ್ಸ್ ಹೇಳಿದೆ.

ಇಸ್ರೇಲ್ ಶುಕ್ರವಾರ ಮುಂಜಾನೆ ನಡೆಸಿದ ಹಠಾತ್‌ ದಾಳಿಯಲ್ಲಿ ಇರಾನ್ ಸೇನೆಯ ಪ್ರಮುಖ ಅಧಿಕಾರಿಗಳು, ಪರಮಾಣು ವಿಜ್ಞಾನಿಗಳು ಸೇರಿದಂತೆ ಅನೇಕ ಪ್ರಮುಖರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಇರಾನ್‌ನ ಪರಮಾಣು ಶಸ್ತ್ರಾಗಾರ ಮತ್ತು ದೀರ್ಘ-ಶ್ರೇಣಿಯ ಕ್ಷಿಪಣಿಗಳನ್ನು ಗುರಿಯಾಗಿಸಲು ಇಸ್ರೇಲ್‌ ಸುಮಾರು 200 ವಿಮಾನಗಳನ್ನು ನಿಯೋಜಿಸಿತ್ತು.



ಈ ಸುದ್ದಿಯನ್ನೂ ಓದಿ: Israel Attack: ಇರಾನ್‌ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಇಸ್ರೇಲ್ ದಾಳಿ

ಮೊದಲ ಹಂತ ಪೂರ್ಣ

ಇಸ್ರೇಲ್ ರಕ್ಷಣಾ ಪಡೆಗಳು (IDF) ತನ್ನ ಕಾರ್ಯಾಚರಣೆಯ "ಮೊದಲ ಹಂತ" ಪೂರ್ಣಗೊಂಡಿರುವುದಾಗಿ ಘೋಷಿಸಿದೆ. ಇರಾನ್‌ನಾದ್ಯಂತ ಅನೇಕ ಸ್ಥಳಗಳನ್ನು ಗುರಿಯಾಗಿಸಿಕೊಂಡ ಇಸ್ರೇಲ್‌ನ ವಾಯುಪಡೆಯ ಜೆಟ್‌ಗಳು ಕಾರ್ಯನಿರ್ವಹಿಸಿವೆ. ಟೆಹ್ರಾನ್‌ನ ವಸತಿ ಪ್ರದೇಶಗಳ ಮೇಲಿನ ಈ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸಾವನ್ನಪ್ಪಿದ್ದಾರೆ ಎಂದು ಇರಾನ್‌ ಆರೋಪಿಸಿದೆ.

ಇತ್ತ ಇರಾನ್‌ ಪ್ರತೀಕಾರವಾಗಿ ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಈ ದಾಳಿಯನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ ಎಂದು ಇಸ್ರೇಲ್‌ ಹೇಳಿದೆ.

ಇರಾನ್ ತನ್ನ ಪರಮಾಣು ಸೌಲಭ್ಯಗಳ ಮೇಲೆ ಇಸ್ರೇಲ್ ನಡೆಸಿದ ದಾಳಿ ಮತ್ತು ಹಿರಿಯ ಅಧಿಕಾರಿಗಳ ಹತ್ಯೆಯನ್ನು ಖಂಡಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಆಗ್ರಹಿಸಿದೆ. ತುರ್ತು ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ.

ಭಾರತೀಯರಿಗೆ ಎಚ್ಚರಿಕೆ

ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಭಾರತವು ಇರಾಕ್‌ ಮತ್ತು ಇರಾನ್‌ನಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಅನಗತ್ಯ ಸಂಚಾರಕ್ಕೆ ಬ್ರೇಕ್‌ ಹಾಕುವಂತೆ ಸೂಚಿಸಿದೆ. ಸದಾ ತಮ್ಮೊಂದಿಗೆ ಸಂಪರ್ಕದಲ್ಲಿರುವಂತೆ ಇರಾನ್ ಹಾಗೂ ಇರಾಕ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಇತ್ತ ಅಮೆರಿಕ ಇಸ್ರೇಲ್ ದಾಳಿಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಪುನರುಚ್ಚರಿಸಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರೈಸಿಂಗ್ ಲಯನ್

ಟೆಹ್ರಾನ್‌ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುವುದನ್ನು ತಡೆಯವ ಸಲುವಾಗಿ ಶುಕ್ರವಾರ ಇರಾನಿನ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಿಲಿಟರಿ ದಾಳಿಯನ್ನು ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಇದರಿಂದ ದೇಶದ ಪ್ರಮುಖ ಯುರೇನಿಯಂ ತಯಾರಿಕಾ ಘಟಕದಲ್ಲೂ ಭಾರಿ ಸ್ಫೋಟಗಳು ಉಂಟಾಗಿವೆ. ಈ ಕಾರ್ಯಾಚರಣೆಯನ್ನು 'ರೈಸಿಂಗ್ ಲಯನ್' ಎಂದು ಇಸ್ರೇಲ್ ಕರೆದಿದೆ.

Ramesh Ballamoole

View all posts by this author