Israel Attack: ಇರಾನ್ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಇಸ್ರೇಲ್ ದಾಳಿ
ಟೆಹ್ರಾನ್ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುವುದನ್ನು ತಡೆಯವ ಸಲುವಾಗಿ ಇಸ್ರೇಲ್ ಶುಕ್ರವಾರ ಇರಾನಿನ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಿಲಿಟರಿ ದಾಳಿಯನ್ನು ನಡೆಸಿದೆ. ಇದರಿಂದ ದೇಶದ ಪ್ರಮುಖ ಯುರೇನಿಯಂ ತಯಾರಿಕಾ ಘಟಕದಲ್ಲೂ ಭಾರಿ ಸ್ಫೋಟಗಳು ಉಂಟಾಗಿವೆ. ಈ ದಾಳಿಯನ್ನು 'ರೈಸಿಂಗ್ ಲಯನ್' ಎಂದು ಇಸ್ರೇಲ್ ಕರೆದಿದೆ.


ಟೆಹ್ರಾನ್: ಇರಾನಿನ ಸೇನಾ ನೆಲೆಗಳು (Iran Military Sites), ಪರಮಾಣು (Nuclear) ಶಸ್ತ್ರಾಗಾರಗಳ ಮೇಲೆ ಶುಕ್ರವಾರ ಇಸ್ರೇಲ್ ದಾಳಿ (Israeli Jets attack) ನಡೆಸಿದೆ. ಇದರಿಂದ ಟೆಹ್ರಾನ್ (Tehran)ನಲ್ಲಿ ಭಾರಿ ಸ್ಫೋಟಗಳು ಉಂಟಾಗಿವೆ. ರಾಜ್ಯಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಟೆಹ್ರಾನ್ನ ಪರಮಾಣು ಶಸ್ತ್ರಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ನ 12ಕ್ಕೂ ಅಧಿಕ ಜೆಟ್ ಗಳು ಶುಕ್ರವಾರ ದಾಳಿ ನಡೆಸಿದೆ. ಇದರಿಂದ ಹಲವಾರು ಸ್ಪೋಟದ ಸದ್ದುಗಳು ಕೇಳಿ ಬಂದಿತ್ತು. ಇದರಿಂದಾಗಿ ರಾಜ್ಯಾದ್ಯಂತ ವಾಯು ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಯಿತು.
ಟೆಹ್ರಾನ್ನಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಪಡಿಸುವುದನ್ನು ತಡೆಯವ ಸಲುವಾಗಿ ಇಸ್ರೇಲ್ ಶುಕ್ರವಾರ ಇರಾನಿನ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಿಲಿಟರಿ ದಾಳಿಯನ್ನು ನಡೆಸಿದೆ. ಇದರಿಂದ ದೇಶದ ಪ್ರಮುಖ ಯುರೇನಿಯಂ ತಯಾರಿಕಾ ಘಟಕದಲ್ಲೂ ಭಾರಿ ಸ್ಫೋಟಗಳು ಉಂಟಾಗಿವೆ. ಈ ದಾಳಿಯನ್ನು 'ರೈಸಿಂಗ್ ಲಯನ್' ಎಂದು ಇಸ್ರೇಲ್ ಕರೆದಿದೆ.
ಇರಾನಿನ ಸೇನಾ ನೆಲೆಗಳು, ಪರಮಾಣು ಶಸ್ತ್ರಾಗಾರಗಳ ಮೇಲೆ ನಡೆಸಿದ 'ರೈಸಿಂಗ್ ಲಯನ್ ದಾಳಿಯಲ್ಲಿ ಇಸ್ರೇಲ್ ಸೇನೆಯು ಇರಾನ್ ಕಮಾಂಡರ್ಗಳು ಮತ್ತು ಕ್ಷಿಪಣಿ ಕಾರ್ಖಾನೆಗಳನ್ನು ಕೂಡ ಗುರಿಯಾಗಿಸಿಕೊಂಡಿತ್ತು ಎಂದು ಇಸ್ರೇಲ್ ತಿಳಿಸಿದೆ.
ವಿಡಿಯೊ ಸಂದೇಶ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಇತಿಹಾಸದಲ್ಲಿ ಇದೊಂದು ನಿರ್ಣಾಯಕ ಕ್ಷಣವಾಗಿದೆ ಎಂದು ಹೇಳಿದ್ದಾರೆ. ತಮ್ಮ ದೇಶದ ಜೆಟ್ಗಳು ಇರಾನಿನ ಪರಮಾಣು ತಾಣಗಳ ಮೇಲೆ ದಾಳಿ ನಡೆಸಿರುವುದನ್ನು ಘೋಷಿಸಿದ ಇಸ್ರೇಲ್ನ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್, ಬಳಿಕ ವಿವಿಧ ಭಾಗಗಳಲ್ಲಿ ದಾಳಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಶೇಷ ಪರಿಸ್ಥಿತಿ ಇರುವುದಾಗಿ ಘೋಷಿಸಿದರು.
ಇರಾನ್ನ ಪರಮಾಣು ಬಾಂಬ್, ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ನಾಂಟಾಂಜ್ ಯುರೇನಿಯಂ ಘಟಕಗಳ ಮೇಲೆ ಇಸ್ರೇಲ್ ದಾಳಿ ನಡೆಸಿತು. ಇದು ಈ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಇರಾನಿನ ವಿಜ್ಞಾನಿಗಳನ್ನು ಗುರಿಯಾಗಿಸಿಕೊಂಡು ದಿನಪೂರ್ತಿ ನಡೆಸಿದ ದಾಳಿಯಾಗಿದೆ ಎಂದು ಅವರು ಹೇಳಿದರು.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಇಸ್ರೇಲ್ ರಕ್ಷಣಾ ಪಡೆಗಳು, ಇರಾನ್ನ ವಿವಿಧ ಪ್ರದೇಶಗಳಲ್ಲಿನ ಪರಮಾಣು ಗುರಿಗಳು ಸೇರಿದಂತೆ ಅನೇಕ ಸೇನಾ ನೆಲೆಗಳ ಮೇಲೆ ಇಸ್ರೇಲ್ ಜೆಟ್ಗಳು ದಾಳಿ ನಡೆಸಿ ಮೊದಲ ಹಂತದ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದೆ.
ಇಸ್ರೇಲ್ ದಾಳಿ ನಡೆಸಿದ ವೇಳೆ ಇರಾನ್ನ ನಾಯಕರು ಉನ್ನತ ಭದ್ರತಾ ಸಭೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಒಂದು ವೇಳೆ ಪರಮಾಣು ಬಾಂಬ್ ತಯಾರಿ ಕಾರ್ಯವನ್ನು ಇರಾನ್ ಪೂರ್ಣಗೊಳಿಸಿದ್ದರೆ ಅದು ಕೆಲವೇ ದಿನಗಳಲ್ಲಿ 15 ಪರಮಾಣು ಬಾಂಬ್ಗಳನ್ನುತಯಾರಿಸುತ್ತಿತ್ತು ಎಂದು ಇಸ್ರೇಲ್ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಮೆರಿಕ ಹೇಳಿದ್ದೇನು?
ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯಿಸಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಇದು ಇಸ್ರೇಲ್ ಏಕಪಕ್ಷೀಯವಾಗಿ ಕೈಗೊಂಡ ನಿರ್ಧಾರವಾಗಿದೆ. ಅದು ತನ್ನ ರಕ್ಷಣೆಗಾಗಿ ಈ ಕಾರ್ಯಾಚರಣೆ ಅಗತ್ಯವಾಗಿತ್ತೆಂದು ನಂಬಿದೆ ಎಂದು ಹೇಳಿದ್ದಾರೆ.
ನಾವು ಇರಾನ್ ವಿರುದ್ಧದ ದಾಳಿಗಳಲ್ಲಿ ಭಾಗಿಯಾಗಿಲ್ಲ. ಅಮೆರಿಕನ್ ಪಡೆಗಳನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇರಾನ್ ಪ್ರತಿ ದಾಳಿಯ ವೇಳೆ ಅಮೆರಿಕದ ಹಿತಾಸಕ್ತಿಯನ್ನು ಪರಿಗಣಿಸಬೇಕು. ಅಮೆರಿಕದ ಸಿಬ್ಬಂದಿಯನ್ನು ಗುರಿಯಾಗಿಸಿಕೊಳ್ಳಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ahmedabad Plane Crash: ತಟ್ಟೆಗೆ ಹಾಕಿದ್ದ ಊಟ, ಸಿಲುಕಿಕೊಂಡ ವಿಮಾನದ ಭಾಗಗಳು; ದುರಂತದ ಭೀಕರತೆಗೆ ಸಾಕ್ಷಿಯಾದ ಚಿತ್ರಗಳಿವು
ಟೆಹ್ರಾನ್ನ ಹೆಚ್ಚುತ್ತಿರುವ ಯುರೇನಿಯಂ ತಯಾರಿಕೆ ಕುರಿತು ಅಮೆರಿಕ ಮತ್ತು ಇರಾನಿನ ಅಧಿಕಾರಿಗಳು ಭಾನುವಾರ ಒಮಾನ್ನಲ್ಲಿ ಆರನೇ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಿದ್ದರು. ಆದರೆ ಇದೀಗ ಇರಾನ್ ಮೇಲಿನ ಇಸ್ರೇಲ್ ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕ್ಯಾಬಿನೆಟ್ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಟ್ರಂಪ್ ಗುರುವಾರವಷ್ಟೇ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸಬಹುದು ಎಂದು ಹೇಳಿದ್ದು, ಶಾಂತಿಯುತವಾಗಿ ಸಮಸ್ಯೆ ಪರಿಹಾರವಾಗಲಿದೆ ಎನ್ನುವ ಭರವಸೆಯನ್ನು ವ್ಯಕ್ತಪಡಿಸಿದ್ದರು.