ಇಸ್ರೇಲ್ ಸೇನೆಯಿಂದ ಮತ್ತೊಂದು ಮಹತ್ವದ ಮೈಲಿಗಲ್ಲು; ಇರಾನ್‌ನ ಕುದ್ಸ್ ಫೋರ್ಸ್‌ನ ಕಮಾಂಡರ್ ಫಿನಿಶ್
Quds Force: ಈಶಾನ್ಯ ಲೆಬನಾನ್‌ನಲ್ಲಿ ನಡೆಸಿದ ದಾಳಿಯಲ್ಲಿ ಇರಾನ್‌ನ ಮಿಲಿಟಿರಿ ಪಡೆ ಕುದ್ಸ್ ಫೋರ್ಸ್‌ನ ಹಿರಿಯ ಕಮಾಂಡರ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಮತ್ತು ಶಿನ್ ಬೆಟ್ ಭದ್ರತಾ ಸಂಸ್ಥೆ ಘೋಷಿಸಿವೆ. ಮೃತ ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಿಭಾಗ ಕುದ್ಸ್ ಪಡೆಯ ಕಾರ್ಯಾಚರಣೆ ಘಟಕದಲ್ಲಿ ಉನ್ನತ ಕಮಾಂಡರ್ ಆಗಿದ್ದ.
ಸಾಂದರ್ಭಿಕ ಚಿತ್ರ. -
ಜೆರುಸಲೇಂ, ಡಿ. 25: ಈಶಾನ್ಯ ಲೆಬನಾನ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ಮಿಲಿಟಿರಿ ಪಡೆ ಕುದ್ಸ್ ಫೋರ್ಸ್‌ನ (Quds Force) ಹಿರಿಯ ಕಮಾಂಡರ್ ಸಾವನ್ನಪ್ಪಿದ್ದಾನೆ ಎಂದು ಇಸ್ರೇಲ್ ಮಿಲಿಟರಿ ಮತ್ತು ಶಿನ್ ಬೆಟ್ ಭದ್ರತಾ ಸಂಸ್ಥೆ ಘೋಷಿಸಿವೆ. ಮೃತ ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ (Hussein Mahmoud Marshad al-Jawhari) ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ನ ವಿಭಾಗ ಕುದ್ಸ್ ಪಡೆಯ ಕಾರ್ಯಾಚರಣೆ ಘಟಕದಲ್ಲಿ ಉನ್ನತ ಕಮಾಂಡರ್ ಆಗಿದ್ದ ಎಂದು ಇಸ್ರೇಲ್ ರಕ್ಷಣಾ ಪಡೆ ಮತ್ತು ಶಿನ್ ಬೆಟ್ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಸಿರಿಯಾದ ಗಡಿಗೆ ಹೋಗುವ ರಸ್ತೆಯಲ್ಲಿ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಟ್ರಕ್‌ನಲ್ಲಿದ್ದ ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ ಮತ್ತು ಅವರ ಸಹವರ್ತಿ ಸಾವನ್ನಪ್ಪಿರೆ ಎಂದು ಲೆಬನಾನ್‌ನ ಸುದ್ದಿ ಸಂಸ್ಥೆ ಈ ಹಿಂದೆ ವರದಿ ಮಾಡಿತ್ತು. ಇದೀಗ ಇಸ್ರೇಲ್ ಈ ಸುದ್ದಿಯನ್ನು ದೃಢಪಡಿಸಿದೆ. ಅಲ್-ಜವಾಹರಿಯ ಜತೆ ಮೃತಪಟ್ಟ ಕಾರ್ಯಕರ್ತ ಮಜೀದ್ ಕನ್ಸೌವಾ ಎಂದು ಹೇಳಿದೆ. ಸದ್ಯ ಇಸ್ರೇಲ್ ನಡೆಸಿದ ದಾಳಿಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇಸ್ರೇಲ್ ಪಡೆ ನಡೆಸಿದ ದಾಳಿಯ ದೃಶ್ಯ:
🚨❌ #فوری در عملیات مشترک ارتش اسرائیل و شاباک: یک تروریست کلیدی در واحد عملیات «نیروی قدس» ایران حذف شد
— ارتش دفاعی اسرائیل | IDF Farsi (@IDFFarsi) December 25, 2025
🔸 امروز (پنجشنبه) ارتش اسرائیل و شاباک در منطقه نصریه در لبنان، حسین محمود مرشد الجوهری، تروریست کلیدی در واحد عملیات «نیروی قدس» (۸۴۰) را که در سالهای اخیر در طراحی… pic.twitter.com/Du6aPTs6sK
ಇಸ್ರೇಲ್ ಹೇಳಿಕೆಯ ಪ್ರಕಾರ, ಅಲ್-ಜವಾಹರಿ ಇತ್ತೀಚಿನ ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಭಯೋತ್ಪಾದಕ ಸಂಚುಗಳನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಯುನಿಟ್ 840 ಎಂದೂ ಕರೆಯಲ್ಪಡುವ ಕಾರ್ಯಾಚರಣೆ ಘಟಕವು ಇಸ್ರೇಲ್ ವಿರುದ್ಧ ಇರಾನ್ ನಡೆಸುವ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದ ಎನ್ನಲಾಗಿದೆ.
ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಯುದ್ಧ ನಡೆಯಿತು. ಇದೀಗ ಇಸ್ರೇಲ್ ಸೇನೆಯು ಇರಾನ್ ಬೆಂಬಲಿತ ಲೆಬನಾನ್‌ನ ಮೇಲೆ ಪ್ರತಿದಿನ ದಾಳಿ ನಡೆಸುತ್ತಿದೆ. ಲೆಬನಾನ್‌ನಲ್ಲಿರು ಉಗ್ರಗಾಮಿ ಗುಂಪು ಹೆಜ್ಬೊಲ್ಲಾದ ಪುನರ್‌ನಿರ್ಮಾಣವನ್ನು ತಡೆಯುವ ಪ್ರಯತ್ನ ಇದು ಎಂದು ಇಸ್ರೇಲ್ ಹೇಳಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ 2024ರ ನವೆಂಬರ್‌ನಲ್ಲಿ ಇಸ್ರೇಲ್ ಮತ್ತು ಲೆಬ್‌ನಾನ್‌ನ ಹೆಜ್ಬೊಲ್ಲಾ ಗುಂಪಿನ ನಡುವಿನ ಒಂದು ವರ್ಷಕ್ಕೂ ಹೆಚ್ಚು ಕಾಲ ನಡೆದ ಸಂಘರ್ಷಕ್ಕೆ ತೆರೆ ಬಿದ್ದಿತ್ತು. ಜತೆಗೆ ಎರಡೂ ಕಡೆ ನಿಶ್ಯಸ್ತ್ರ ಒಪ್ಪಂದ ಪಾಲಿಸಬೇಕೆಂದು ಸಹಿ ಹಾಕಲಾಗಿತ್ತು.
ಅದಾಗಿಯೂ ಹೆಜ್ಬೊಲ್ಲಾ ಕದನ ವಿರಾಮ ಒಪ್ಪಂದ ಮುರಿದಿದೆ ಎಂದು ಇಸ್ರೇಲ್ ಆರೋಪಿಸಿದೆ. ಹೀಗಾಗಿ ಹೆಜ್ಬೊಲ್ಲಾದ ಪುನರ್‌ನಿರ್ಮಾಣವನ್ನು ತಡೆಯುವ ಉದ್ದೇಶದಿಂದ ದಾಳಿ ನಡೆಸುತ್ತಿರುವುದಾಗಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. ಹೆಜ್ಬೊಲ್ಲಾದ ದೀರ್ಘ ಕಾಲದ ಪ್ರಾಯೋಜಕ ಇರಾನ್ ಗುಂಪು ನಿಶ್ಯಸ್ತ್ರಗೊಳಿಸುವ ಅಂತಾರಾಷ್ಟ್ರೀಯ ಮತ್ತು ದೇಶೀಯ ಒಪ್ಪಂದಗಳನ್ನು ತಿರಸ್ಕರಿಸಿದೆ ಎನ್ನುವುದು ಇಸ್ರೇಲ್ ವಾದ. ಹುಸೇನ್ ಮಹಮೂದ್ ಮಾರ್ಷದ್ ಅಲ್-ಜವಾಹರಿ ಹತ್ಯೆಯ ಬಗ್ಗೆ ಸದ್ಯ ಇರಾನ್ ಅಥವಾ ಲೆಬನಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕದನ ವಿರಾಮಕ್ಕೆ ಇಸ್ರೇಲ್-ಸಿರಿಯಾ ಒಪ್ಪಿಗೆ
ಜುಲೈಯಲ್ಲಿ ಇಸ್ರೇಲ್ ಮತ್ತು ಸಿರಿಯಾದ ನಾಯಕರು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದರು. ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಸಿರಿಯಾದ ನೂತನ ನಾಯಕ ಅಹ್ಮದ್ ಅಲ್-ಶರಾ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.