ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel-Iran conflict: ಇಸ್ರೇಲ್‌ ದಾಳಿಯಲ್ಲಿ ಇರಾನ್‌ನ 3 ಪ್ರಮುಖ ಪರಮಾಣು ತಾಣಗಳು ಧ್ವಂಸ

ಇರಾನ್ ವಿರುದ್ಧ ಇಸ್ರೇಲ್ ನಡೆಸಿದ ದಾಳಿಗೆ ಅಮೆರಿಕವೂ ಕೈಜೋಡಿಸಿದೆ. ಭಾನುವಾರ ರಾತ್ರಿ ಅಮೆರಿಕದ ಸೇನೆಯು ಇರಾನ್‌ನ ಟೆಹ್ರಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ.

ಟೆಹ್ರಾನ್‌: ಇರಾನ್ ವಿರುದ್ಧ ಇಸ್ರೇಲ್ (Israel-Iran war) ಸಂಘರ್ಷ ಮುಂದುವರಿದಿದ್ದು, ಅಮೆರಿಕದ ಸಹಾಯದಿಂದ ಭಾನುವಾರ ಟೆಹ್ರಾನ್‌ನಲ್ಲಿರುವ (Tehran) 3 ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ (Fordow), ನಟಾಂಜ್ (Natanz)ಮತ್ತು ಎಸ್ಫಹಾನ್ (Esfahan) ಮೇಲೆ ವೈಮಾನಿಕ ದಾಳಿ (air strike) ನಡೆಸಿದೆ. ಜೂನ್ 13ರಂದು ಇರಾನ್‌ನ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ದಾಳಿಯ ಬಳಿಕ ಕಂಡು ಬಂದ ಅತಿ ದೊಡ್ಡ ಪ್ರಮಾಣದ ದಾಳಿ ಇದಾಗಿದೆ. ಇದರಿಂದ ಇರಾನ್‌ಗೆ ಭಾರಿ ನಷ್ಟವಾಗಿರುವುದಾಗಿ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (IAEA) ಮಹಾನಿರ್ದೇಶಕ ರಾಫೆಲ್ ಮರಿಯಾನೋ ಗ್ರೊಸಿ ತಿಳಿಸಿದ್ದಾರೆ.

ಇರಾನ್ ವಿರುದ್ಧದ ಯುದ್ಧದಲ್ಲಿ ಇಸ್ರೇಲ್ ಜತೆಗೂಡಿರುವ ಅಮೆರಿಕ ಸೇನೆಯು ಭಾನುವಾರ ರಾತ್ರಿ ಪೂರ್ತಿ ದಾಳಿ ನಡೆಸಿ ಟೆಹ್ರಾನ್‌ನಲ್ಲಿರುವ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಫಹಾನ್ ಅನ್ನು ಧ್ವಂಸಗೊಳಿಸಿದೆ ಎಂದು ವರದಿಯೊಂದಿ ತಿಳಿಸಿದೆ.



ಈ ಕುರಿತು ವಿಶ್ವಸಂಸ್ಥೆಗೆ ಮಾಹಿತಿ ನೀಡಿರುವ ಇರಾನ್ ನಿಯಂತ್ರಣ ಅಧಿಕಾರಿಗಳು, ಈ ದಾಳಿಗಳಿಂದ ಆಫ್-ಸೈಟ್ ವಿಕಿರಣ ಮಟ್ಟದಲ್ಲಿ ಯಾವುದೇ ಹೆಚ್ಚಳವಾಗಿಲ್ಲ ಎಂದು ತಿಳಿಸಿರುವುದಾಗಿ ರಾಫೆಲ್ ಮರಿಯಾನೋ ಗ್ರೊಸಿ ಹೇಳಿದ್ದು, ಎರಡು ರಾಷ್ಟ್ರಗಳು ಶಾಂತಿ ಪಾಲನೆ ಮಾಡುವಂತೆ ಕರೆ ನೀಡಿದ್ದಾರೆ.

ಇರಾನ್‌ನ ಪರಮಾಣು ಸೌಲಭ್ಯಗಳನ್ನು ಗುರಿಯಾಗಿಸಲು ಜೂನ್ 13ರಿಂದ ಇಸ್ರೇಲ್ ಪ್ರಾರಂಭಿಸಿರುವ ಹಲವು ದಾಳಿಗಳಲ್ಲಿ ಎಸ್ಫಹಾನ್ ಪರಮಾಣು ತಾಣದಲ್ಲಿ ಅಪಾರ ಪ್ರಮಾಣದ ಹಾನಿಯಾಗಿರುವುದಾಗಿ ಗ್ರೊಸಿ ದೃಢಪಡಿಸಿದ್ದಾರೆ.

ಈ ದಾಳಿಯಿಂದ ಎಸ್ಫಹಾನ್ ಸಂಕೀರ್ಣದಲ್ಲಿ ಹಲವಾರು ಕಟ್ಟಡಗಳು ಹಾನಿಗೊಳಗಾಗಿವೆ. ಈ ಸ್ಥಳಗಳಲ್ಲಿರುವ ಹಲವು ಭೂಗತ ಸುರಂಗಗಳ ಪ್ರವೇಶದ್ವಾರಗಳ ಮೇಲೆ ಪರಿಣಾಮ ಬೀರಿದೆ ಎನ್ನಲಾಗಿದೆ.

ಇರಾನ್‌ನ ಮಧ್ಯೆ ಪರ್ವತಗಳ ಆಳದೊಳಗೆ ನಿರ್ಮಿಸಲಾಗಿರುವ ಫೋರ್ಡೋ ಯುರೇನಿಯಂ ತಯಾರಿ ಕೇಂದ್ರದ ಭೂಗತ ಸ್ಥಳ ಮತ್ತು ಅದನ್ನು ಧ್ವಂಸಗೊಳಿಸಲು ಬಳಸಲಾಗಿರುವ ಬಾಂಬ್‌ನ ಸಾಮರ್ಥ್ಯದಿಂದಾಗಿ ಆಗಿರುವ ಹಾನಿಯ ಪ್ರಮಾಣವನ್ನು ತಕ್ಷಣವೇ ನಿರ್ಧರಿಸುವುದು ಸಾಧ್ಯವಿಲ್ಲ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ತಿಳಿಸಿದೆ.

ಫೋರ್ಡೋದಲ್ಲಿ ಕೂಡ ಹೆಚ್ಚಿನ ಪ್ರಮಾಣದ ಹಾನಿಯಾಗಿರುವುದು ಖಚಿತ. ಆದರೆ ಹಾನಿಯ ಮಟ್ಟವನ್ನು ಕೂಡಲೇ ನಿರ್ಧರಿಸಲು ಸಾಧ್ಯವಿಲ್ಲ ಎಂದು ಗ್ರೋಸಿ ಹೇಳಿದರು. ಅಮೆರಿಕ ಸೇನೆಯ ದಾಳಿಗೂ ಮುನ್ನವೇ ಫೋರ್ಡೋದಿಂದ ಹೆಚ್ಚಿನ ಪ್ರಮಾಣದ ಯುರೇನಿಯಂನ ದಾಸ್ತಾನನ್ನುಇರಾನ್ ಸ್ಥಳಾಂತರಿಸಿದೆ ಎಂದು ತಜ್ಞರು ಊಹಿಸಿದ್ದಾರೆ.

ಈ ಕುರಿತು ಬಿಡುಗಡೆಯಾಗಿರುವ ಮ್ಯಾಕ್ಸರ್ ಟೆಕ್ನಾಲಜೀಸ್‌ನ ಉಪಗ್ರಹ ಚಿತ್ರಣದಲ್ಲಿ ಅಮೆರಿಕ ದಾಳಿಗೂ ಮೊದಲು ಅಂದರೆ ಗುರುವಾರ ಮತ್ತು ಶುಕ್ರವಾರ ಫೋರ್ಡೋದಲ್ಲಿ "ಅಸಾಮಾನ್ಯ ಚಟುವಟಿಕೆ"ಯನ್ನು ಗುರುತಿಸಲಾಗಿದೆ. ಇದರಲ್ಲಿ ಯುರೇನಿಯಂನ ದಾಸ್ತಾನು ಕೇಂದ್ರದ ಪ್ರವೇಶದ್ವಾರದ ಹೊರಗೆ ಅನೇಕ ವಾಹನಗಳು ಸಾಲುಗಟ್ಟಿ ನಿಂತಿರುವುದನ್ನು ಉಪಗ್ರಹ ಚಿತ್ರಗಳು ಗುರುತಿಸಿವೆ.

ಇಲ್ಲಿಂದ ಶೇ. 60ರಷ್ಟು ಯುರೇನಿಯಂ ಅನ್ನು ಅಮೆರಿಕದ ದಾಳಿಗೆ ಮುನ್ನ ಗೌಪ್ಯ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎನ್ನಲಾಗಿದ್ದು, ಈ ಹಿಂದೆ ವ್ಯಾಪಕವಾಗಿ ಹಾನಿಗೊಳಗಾಗಿದ್ದ ನಟಾಂಜ್ ಮೇಲೆ ಮತ್ತೊಮ್ಮೆ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: Israel-Iran conflict: ಇರಾನ್-ಇಸ್ರೇಲ್ ಸಂಘರ್ಷ: ವಿಶ್ವದ ಶಕ್ತಿಶಾಲಿ ರಾಷ್ಟ್ರಗಳ ಬೆಂಬಲ ಯಾರಿಗೆ?

ಇರಾನ್‌ನಲ್ಲಿ ಪರಮಾಣು ಕೇಂದ್ರಗಳ ಸುತ್ತ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿ ಸುಮಾರು 400 ಕೆ.ಜಿ. ಗಿಂತಲೂ ಹೆಚ್ಚು ಯುರೇನಿಯಂ ಅಲ್ಲಿ ದಾಸ್ತಾನು ಇದೆ ಎಂದು ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಊಹಿಸಿದೆ. ನಾವು ಶಾಂತಿಯನ್ನು ಕಾಪಾಡಬೇಕು. ಇದಕ್ಕಾಗಿ ನಾವು ಕೆಲಸ ಮಾಡಬೇಕು. ಇದೇ ಕಾರಣಕ್ಕೆ ಅಮೆರಿಕದೊಂದಿಗೆ ನಾವು ಮಾತುಕತೆ ನಡೆಸುವುದಾಗಿ ಗ್ರೋಸಿ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author