ವಾಷಿಂಗ್ಟನ್, ಸೆ. 26: ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ (UNGA) ಹಿನ್ನೆಲೆಯಲ್ಲಿ ಶುಕ್ರವಾರ (ಸೆಪ್ಟೆಂಬರ್ 25) ನಡೆದ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಭಾರತವೇ ಪಾಕಿಸ್ತಾನದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿ ಪ್ರಶ್ನೆ ಕೇಳಲು ಮುಂದಾದರು. ಇದಕ್ಕೆ ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
“ಭಯೋತ್ಪಾದಕ ದೇಶವೊಂದು ನನಗೆ ಈ ಪ್ರಶ್ನೆ ಕೇಳುತ್ತಿದೆಯೇ?” ಎಂದು ಜೈಶಂಕರ್ ಪ್ರತಿಕ್ರಿಯಿಸಿದರು. ಈ ವೇಳೆ ಕಾರ್ಯಕ್ರಮವು ಕೇವಲ ಹೇಳಿಕೆಗಳಿಗಾಗಿ ನಿಗದಿಯಾಗಿತ್ತು ಎಂದು ವರದಿಯಾಗಿದೆ. ಪ್ರಶ್ನೆ ಕೇಳಲು ಪತ್ರಕರ್ತ ಮುಂದಾದ ಬಳಿಕ ಜೈಶಂಕರ್ ಹಾಗೂ ಇತರ ಪ್ರತಿನಿಧಿಗಳು ಅಲ್ಲಿಂದ ಹೊರನಡೆದರು.
ಭಾರತವು ಹಲವು ವರ್ಷಗಳಿಂದ ಪಾಕಿಸ್ತಾನ ಅಥವಾ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳಿಗೆ ಸಂಬಂಧಿಸಿದಂತೆ ಗಡಿಯಾಚೆಗಿನ ಭಯೋತ್ಪಾದನೆ ಕುರಿತು ಆತಂಕ ವ್ಯಕ್ತಪಡಿಸುತ್ತಿದೆ. 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಮೃತಪಟ್ಟ ಬಳಿಕ ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ದಾಳಿ ನಡೆಸಿತ್ತು ಎಂದು ವರದಿ ತಿಳಿಸಿದೆ.
ಇದೇ ವೇಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲೂ ಭಾರತವು ಪಾಕಿಸ್ತಾನದ ವಿರುದ್ಧ ಭಯೋತ್ಪಾದನೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಪರಿಸ್ಥಿತಿ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿದೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ವಿಶ್ವಾಸಾರ್ಹ ಕ್ರಮ ಕೈಗೊಳ್ಳಬೇಕು ಎಂದು ನಿರಂತರವಾಗಿ ಒತ್ತಾಯಿಸುತ್ತಿದೆ.
ಜೈಶಂಕರ್ ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಉನ್ನತ ಮಟ್ಟದ ಸಭೆಗಳಲ್ಲಿ ಭಾರತೀಯ ನಿಯೋಗವನ್ನು ಮುನ್ನಡೆಸುತ್ತಿದ್ದಾರೆ.