ವಾಷಿಂಗ್ಟನ್: ಕ್ಯಾಲಿಫೋರ್ನಿಯಾದಲ್ಲಿ ಕಾಣೆಯಾದ ಆರು ದಿನಗಳ ನಂತರ 22 ವರ್ಷದ ತುಮಕೂರು ಮೂಲದ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. (Saketh Srinivasaiah) ಕ್ಯಾಲಿಫೋರ್ನಿಯಾ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ರಾಸಾಯನಿಕ ಮತ್ತು ಜೈವಿಕ ಅಣು ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಫೆಬ್ರವರಿ 9 ರಂದು ನಾಪತ್ತೆಯಾಗಿದ್ದ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ಈ ಕುರಿತು ಮಾಹಿತಿ ನೀಡಿದೆ.
ಈ ತೀವ್ರ ಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನಾವು ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ ಎಂದು ದೂತವಾಸ ಹೇಳಿಕೆಯಲ್ಲಿ ತಿಳಿಸಿದೆ. ಸಾಕೇತ್ ಬರ್ಕ್ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (UC Berkeley) ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದರು. ಸಾಕೇತ್ ಫೆಬ್ರವರಿ 9ರಂದು ನಾಪತ್ತೆಯಾಗಿದ್ದ. ಕೊನೆಯ ಬಾರಿಗೆ ಆತ ಟಿಲ್ಡೆನ್ ರೀಜನಲ್ ಪಾರ್ಕ್‌ನ ಸರೋವರದ ಬಳಿ ಕಂಡುಬಂದಿದ್ದರು ಎಂದು ಮಾಹಿತಿ ಇದೆ. ಅವರ ತಂದೆ ಶ್ರೀನಿವಾಸಯ್ಯ ಅವರು ಫೆಬ್ರವರಿ 9ರಂದು ಕೊನೆಯ ಬಾರಿಗೆ ಮಗನೊಂದಿಗೆ ಮಾತನಾಡಿದ್ದಾಗಿ ಹೇಳಿದ್ದರು. ನಮಗೆ ಇನ್ನೂ ಅವನನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ರೂಮ್‌ಮೇಟ್‌ಗಳು ಮತ್ತು ಇತರರೊಂದಿಗೆ ಸಂಪರ್ಕದಲ್ಲಿದ್ದೇವೆ. ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಅವರು ತಿಳಿಸಿದ್ದರು.
ಸಾಕೇತ್ ಕುಟುಂಬಸ್ಥರು ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದು ಸಹಾಯ ಕೋರಿದ್ದರು. ನಂತರ ಬರ್ಕ್ಲಿ ಪೊಲೀಸ್ ಇಲಾಖೆಗೆ ಔಪಚಾರಿಕ ದೂರು ದಾಖಲಿಸಲಾಗಿತ್ತು. ಕರ್ನಾಟಕ ಸರ್ಕಾರವು ವಿದೇಶಾಂಗ ಸಚಿವಾಲಯಕ್ಕೆ ಸಹಾಯಕ್ಕಾಗಿ ವಿನಂತಿಸಿತ್ತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರ ಅವರಿಗೆ ಬರೆದ ಪತ್ರದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಕಾನ್ಸುಲೇಟ್ ಮೂಲಕ ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಮನ್ವಯ ಮಾಡಿ ಕುಟುಂಬಕ್ಕೆ ಬೆಂಬಲ ನೀಡುವಂತೆ ಕೋರಲಾಗಿತ್ತು. ಸಾಕೇತ್ ಭಾನುವಾರದವರೆಗೂ ಎಲ್ಲರೊಂದಿಗೂ ಸಂಪರ್ಕದಲ್ಲಿದ್ದ. ಸೋಮವಾರ ರಾತ್ರಿ ತನ್ನ ತಾಯಿಗೆ ಕರೆ ಮಾಡಿದ್ದ. ಆದರೆ, ಈ ಕಡೆಯಿಂದ ತಾಯಿ ವಾಪಸ್ ಕರೆ ಮಾಡಿದಾಗ ಫೋನ್ ಎತ್ತಿರಲಿಲ್ಲ. ನಂತರ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು.
ಸಾಕೇತ್ ಅವರು ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪೂರೈಸಿ, ನಂತರ ಪ್ರತಿಷ್ಠಿತ ಬೇಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಳಿಕ ಚೆನ್ನೈ ಐಐಟಿಯಲ್ಲಿ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಪ್ರಸ್ತುತ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ 'ಪ್ರಾಡಕ್ಟ್ ಡೆವಲಪ್‌ಮೆಂಟ್ ಪ್ರೋಗ್ರಾಮ್' ಅಡಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದರು.