ಇಸ್ಲಾಮಾಬಾದ್: ಕೆಲ ದಿನಗಳ ಹಿಂದೆಯಷ್ಟೇ ಭಾರತದ ಸೇನಾ ಮುಖ್ಯಸ್ಥ (Indian Army Chief) ಜನರಲ್ ಉಪೇಂದ್ರ ದ್ವಿವೇದಿ (General Upendra Dwivedi) ಪಾಕಿಸ್ತಾನಕ್ಕೆ (Pakistan) ಭಯೋತ್ಪಾದನೆಯನ್ನು ನಿಲ್ಲಿಸಿ, ಇಲ್ಲವಾದಲ್ಲಿ ಭೌಗೋಳಿಕ ನಕ್ಷೆಯಲ್ಲಿ ಕೂಡ ಇರದಂತೆ ಅಳಿಸಿ ಹಾಕಿ ಬಿಡುತ್ತೇವೆ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಉಪೇಂದ್ರ ದ್ವಿವೇದಿ ಅವರ ಈ ಹೇಳಿಕೆಯಿಂದ ಕಂಗೆಟ್ಟ ಪಾಕಿಸ್ತಾನ ಇದೀಗ ಭಾರತದ ವಿರುದ್ಧ ನಾಲಗೆ ಹರಿಬಿಟ್ಟಿದೆ.
ಹೌದು, ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್(Pahalgam)ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆಯ ಕಿಡಿ ಹೆಚ್ಚಾಗುತ್ತಿದ್ದು, ಉಪೇಂದ್ರ ದ್ವಿವೇದಿ ನೀಡಿದ ಎಚ್ಚರಿಕೆಯ ಗಂಟೆ ಪಾಕ್ ನಿದ್ದೆಗೆಡಿಸಿದೆ. ಇದರಿಂದ ದಾರಿ ಕಾಣದಂತೆ ವರ್ತಿಸುತ್ತಿರುವ ಪಾಕ್ ಭಾರತದ ಮೇಲೆ ಟೀಕಾಸ್ತ್ರವನ್ನು ಉಪಯೋಗಿಸುತ್ತಿದ್ದು, ಭಾರತ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅಶಾಂತಿಯನ್ನು ನಿರ್ಮಿಸುತ್ತಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif) ಆರೋಪಿಸಿದ್ದಾರೆ.
ಜತೆಗೆ ಭಾರತ ಕೊಟ್ಟ ವಾರ್ನಿಂಗಿಗೆ ಭಾರೀ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ತನ್ನದೇ ಯುದ್ಧ ವಿಮಾನಗಳ ಅವಶೇಷಗಳಡಿ ಭಾರತವನ್ನು ಹೂತುಹಾಕುತ್ತೇವೆ ಎಂದು ಹೇಳಿದ್ದಾರೆ.
ಈ ಬಗ್ಗೆ ಆಸಿಫ್ ಸಾಮಾಜಿಕ ಮಾಧ್ಯಮವಾದ ಎಕ್ಸ್‌ನಲ್ಲಿ (X) ಪೋಸ್ಟ್ ಮಾಡಿದ್ದು, ಭಾರತದ ಮಿಲಿಟರಿ ಮತ್ತು ರಾಜಕೀಯ ನಾಯಕರ ನೀಡುತ್ತಿರುವ ಹೇಳಿಕೆಗಳು ಎರಡು ರಾಷ್ಟ್ರಗಳ ನಡುವೆ ಮೂಡಿರುವ ಬಿರುಕನ್ನು ಮತ್ತಷ್ಟು ಜಾಸ್ತಿಗೊಳಿಸುತ್ತಿದ್ದು, ಕಳೆದುಹೋದ ವಿಶ್ವಾಸಾರ್ಹತೆಯನ್ನು ಗಳಿಸುವಲ್ಲಿ ವಿಫಲ ಪ್ರಯತ್ನ ಮಾಡುತ್ತಿದೆ ಎಂದು ಟೀಕಿಸಿದ್ದಾರೆ. ಸರ್ಕಾರವು ಜನರ ಗಮನ ಬೇರೆಡೆಗೆ ಸೆಳೆಯಲು ಉದ್ವಿಗ್ನತೆಯನ್ನು ಹುಟ್ಟುಹಾಕುತ್ತಿದೆ ಎಂಬ ಆರೋಪವನ್ನೂ ಮಾಡಿದ್ದಾರೆ.
ಪಾಕಿಸ್ತಾನ ಅಲ್ಲಾಹನ ಹೆಸರಿನಲ್ಲಿ ನಿರ್ಮಿತವಾದ ರಾಷ್ಟ್ರ. ನಮ್ಮ ಸೈನಿಕರು ಅಲ್ಲಾಹುನ ಸೈನಿಕರು. ಭಾರತ ಈ ಬಾರಿ ನಮ್ಮ ವಿರುದ್ಧ ಬಂತು ಅಂದರೆ ಅದು ತನ್ನ ಯುದ್ಧ ವಿಮಾನಗಳ ಭಗ್ನಾವಶೇಷಗಳ ಅಡಿಯಲ್ಲಿ ಹೂತು ಹೋಗಲಿದೆ. ಅಲ್ಲಾಹು ಅಕ್ಬರ್ ಎಂದು ಆಸಿಫ್ ಪೋಸ್ಟ್ ಮಾಡಿದ್ದಾರೆ.
ಇನ್ನು ಪಹಲ್ಗಾಮ್‌ನಲ್ಲಿ 26 ಭಾರತೀಯರ ಹತ್ಯೆಗೆ ಭಾರತ ‘ಆಪರೇಷನ್ ಸಿಂದೂರ’ದ ಮೂಲಕ ಪ್ರತೀಕಾರವನ್ನು ತೀರಿಸಿಕೊಂಡಿತು. ಇಡೀ ದೇಶ ನಿದ್ದೆಯಲ್ಲಿರುವಾಗ ರಾತ್ರಿ 1 ಗಂಟೆಯಿಂದ ಎರಡರ ನಡುವೆ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಮೂರು ನಿಷೇಧಿತ ಉಗ್ರ ಸಂಘಟನೆಗಳ ಒಂಬತ್ತು ನೆಲೆಗಳ ಮೇಲೆ ಕ್ಷಿಪಣಿಗಳ ದಾಳಿಯನ್ನು ಮಾಡಿತ್ತು. ಪರಿಣಾಮವಾಗಿ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದರು.
ಇಷ್ಟಾದರೂ ಪಾಕಿಸ್ತಾನ ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಾಗಿ ಹೇಳಿಕೊಂಡು ಬಂದಿದಲ್ಲದೇ, ಭಾರತದ ವಿರುದ್ಧ ಯಶಸ್ವಿ ದಾಳಿಯನ್ನು ಮಾಡಿದ್ದೇವೆ ಎಂದು ಪುನರುಚ್ಚರಿಸಿತು.