ಬರ್ಲಿನ್: ಜರ್ಮನಿಯ ಮೋರ್ಸ್ ನಗರದ ಡ್ಯೂಸ್‌ಬರ್ಗ್ ಪ್ರದೇಶದ ಗುರುದ್ವಾರದಲ್ಲಿ ( Germany gurdwara) ಹಿಂಸಾತ್ಮಕ ಘರ್ಷಣೆ ಭುಗಿಲೆದ್ದ ಪರಿಣಾಮ 11 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಧಾರ್ಮಿಕ ಆವರಣದೊಳಗೆ ತೆಗೆದಿದ್ದಾರೆ ಎನ್ನಲಾದ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಎರಡು ಗುಂಪುಗಳ ನಡುವಿನ ದೈಹಿಕ ವಾಗ್ವಾದವನ್ನು ತೋರಿಸುತ್ತವೆ. ಈ ಹೋರಾಟದಲ್ಲಿ ಚಾಕುಗಳು ಮತ್ತು ಕಿರ್ಪಾನ್‌ಗಳು ಸೇರಿದಂತೆ ಚೂಪಾದ ವಸ್ತುಗಳನ್ನು ಬಳಸಲಾಗಿದೆ ಎಂದು ತಿಳಿದು ಬಂದಿದೆ. ಘರ್ಷಣೆಯ ವೇಳೆಗೆ ಸುಮಾರು 40 ಜನರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.
ಗುರುದ್ವಾರದ ಹಣಕಾಸು ಮತ್ತು ನಿರ್ವಹಣೆಯ ವಿವಾದಗಳಿಂದ ಘರ್ಷಣೆ ಉಂಟಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಆದರೂ ಜರ್ಮನ್ ಪೊಲೀಸರು ನಿರ್ದಿಷ್ಟ ಕಾರಣವನ್ನು ದೃಢಪಡಿಸಿಲ್ಲ. ಭಾನುವಾರ ಮಧ್ಯಾಹ್ನ ಘರ್ಷಣೆ ಆರಂಭವಾಗಿ ವೇಗವಾಗಿ ಉಲ್ಬಣಗೊಂಡಿತು, ಒಂದು ಗುಂಪು ಸಂಘಟಿತ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಎದುರಾಳಿಗಳನ್ನು ದಿಕ್ಕು ತಪ್ಪಿಸಲು ಪೆಪ್ಪರ್ ಸ್ಪ್ರೇ ಬಳಸಲಾಯಿತು, ನಂತರ ಚಾಕುಗಳು ಮತ್ತು ಬಂದೂಕಿನಿಂದ ದಾಳಿ ನಡೆಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಡಿಯೋ ನೋಡಿ
ಆರಂಭಿಕ ತನಿಖೆಯ ನಂತರ, ವಿವಾದಗಳು ಹೊಸ ನಿರ್ದೇಶಕರ ಮಂಡಳಿಯ ಚುನಾವಣೆಯಿಂದ ಉಂಟಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ವಿವಾದಗಳು ಗುರುದ್ವಾರ ನಿಧಿಗಳನ್ನು ಸಹ ಒಳಗೊಂಡಿವೆ ಎಂದು ವರದಿಯಾಗಿದೆ. ಹಿಂಸಾಚಾರ ಭುಗಿಲೆದ್ದಾಗ, ಅನೇಕ ಭಕ್ತರು ಭಯಭೀತರಾಗಿ ಗುರುದ್ವಾರದಿಂದ ಓಡಿಹೋದರು ಎಂದು ಪ್ರತ್ಯದರ್ಶಿಗಳು ಹೇಳಿದ್ದಾರೆ. ಜರ್ಮನಿಯ ಮೂರ್ಸ್‌ನಲ್ಲಿರುವ ಗುರುದ್ವಾರದೊಳಗಿನ ಹಿಂಸಾಚಾರವನ್ನು ಸಿಖ್ಖರು ಟೀಕಿಸಿದ್ದಾರೆ. ಪತ್ರಕರ್ತ ಮತ್ತು ಲೇಖಕ ಮಾನ್ ಅಮನ್ ಸಿಂಗ್ ಛಿನಾ ನಂತರ ಈ ಘಟನೆಯ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಈ ಘಟನೆಯನ್ನು "ನಾಚಿಕೆಗೇಡಿನ ಘರ್ಷಣೆ" ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಗುಂಪು ಘರ್ಷಣೆ; ಹಲವು ಮನೆಗೆಳಿಗೆ ಬೆಂಕಿ
ಹಿಂಸಾಚಾರದ ಪ್ರಮಾಣ ಎಷ್ಟಿತ್ತೆಂದರೆ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ತ್ವರಿತವಾಗಿ ದೊಡ್ಡ ಪ್ರಮಾಣದ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಬಿಲ್ಡ್ ವರದಿಯ ಪ್ರಕಾರ, ಗುಂಡಿನ ದಾಳಿಯ ವರದಿಗಳ ನಂತರ ಡಸೆಲ್ಡಾರ್ಫ್‌ನ ವಿಶೇಷ ಕಾರ್ಯಪಡೆ (SEK) ಘಟಕ ಸೇರಿದಂತೆ ಸುಮಾರು 100 ಅಧಿಕಾರಿಗಳು ಕಟ್ಟಡವನ್ನು ಸುತ್ತುವರೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.