ಲಂಡನ್, ಡಿ. 29: ಭಾರತದ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾದ ವಿಜಯ್ ಮಲ್ಯ (Vijay Mallya) ಜತೆ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿರುವ ಫೋಟೊ, ವಿಡಿಯೊ ಹಂಚಿಕೊಂಡು "ನಾವೇ ಅತೀ ದೊಡ್ಡ ಪಲಾಯನವಾದಿಗಳು" ಎಂದು ಹೇಳಿಕೆ ನೀಡಿರುವುದಕ್ಕೆ ಲಲಿತ್ ಮೋದಿ (Lalit Modi) ಇದೀಗ ಸಾಮಾಜಿಕ ಜಲಾತಾಣ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗಷ್ಟೇ ವಿಜಯ ಮಲ್ಯ ಹಾಗೂ ಐಪಿಎಲ್ ಅವ್ಯವಹಾರದಿಂದ ವಿದೇಶಕ್ಕೆ ಪರಾರಿಯಾದ ಲಲಿತ್ ಮೋದಿ ಇಬ್ಬರು ಜತೆಯಾಗಿ ಪಾರ್ಟಿ ಮಾಡಿದ ಫೋಟೊ, ವಿಡಿಯೊ ಭಾರಿ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ತಮ್ಮನ್ನು ಭಾರತದ ಅತಿದೊಡ್ಡ ಪಲಾಯನವಾದಿಗಳು ಎಂದು ಪರಿಚಯಿಸಿಕೊಂಡಿರುವುದು ದೇಶವನ್ನು ಅಪಹಾಸ್ಯ ಮಾಡಿದಂತೆ ಎನಿಸಿತ್ತು.
ಲಲಿತ್ ಮೋದಿ ಈ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, “ಭಾರತದಲ್ಲಿ ಮತ್ತೆ ಇಂಟರ್‌ನೆಟ್ ಬ್ರೇಕ್ ಮಾಡೋಣ. ಜನ್ಮದಿನದ ಶುಭಾಶಯಗಳು ನನ್ನ ಸ್ನೇಹಿತ ವಿಜಯ್ ಮಲ್ಯ. ಲವ್ ಯು” ಎಂಬ ಶೀರ್ಷಿಕೆ ಬರೆದುಕೊಂಡಿದ್ದರು. ಅಷ್ಟೇ ಅಲ್ಲದೆ ವಿಡಿಯೊದಲ್ಲಿ “ನಾವು ಇಬ್ಬರೂ ಭಾರತದ ಅತಿ ದೊಡ್ಡ ಪಲಾಯನವಾದಿಗಳು” ಎಂದು ಮೋದಿ ಹೇಳಿದ್ದು ಈ ವೇಳೆ ಮಲ್ಯ ನಗುತ್ತಿರುವುದು ಕಂಡು ಬಂದಿತ್ತು.
ವಿಜಯ್ ಮಲ್ಯ ಅವರ 70ನೇ ಜನ್ಮದಿನದ ಹಿನ್ನೆಲೆಯಲ್ಲಿ ಲಲಿತ್ ಮೋದಿ ಇಂಗ್ಲೆಂಡ್‌ನಲ್ಲಿರುವ ಲಂಡನ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅತೀ ದೊಡ್ಡ ಪಾರ್ಟಿ ಆಯೋಜನೆ ಮಾಡಿದ್ದರು ಎಂದು ವರದಿಗಳು ತಿಳಿಸಿವೆ. ಈ ಕುರಿತು ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿರು ಲಲಿತ್ ಮೋದಿ, “ನನ್ನ ಹೇಳಿಕೆಯಿಂದ ಯಾರದ್ದೇ ಭಾವನೆಗಳಿಗೆ ನೋವು ಉಂಟಾಗಿದ್ದರೆ ಕ್ಷಮೆಯಾಚಿಸುತ್ತೇನೆ. ವಿಶೇಷವಾಗಿ ಭಾರತ ಸರ್ಕಾರಕ್ಕೆ ಅತ್ಯಂತ ಗೌರವ ನೀಡುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.
ವೈರಲ್ ಆದ ವಿಡಿಯೊ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಅನೇಕ ಬಳಕೆದಾರರು ಇದನ್ನು ಮೋದಿ ಮತ್ತು ಮಲ್ಯ ಭಾರತ ಸರ್ಕಾರವನ್ನು ಹಾಸ್ಯ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. “ಇದು ಕೇವಲ ಹಾಸ್ಯವಲ್ಲ, ಭಾರತ ಸರ್ಕಾರವನ್ನು ಅಣಕಿಸಿದ್ದಾರೆ. ದೇಶಕ್ಕೆ ವಂಚಿಸಿ ಪರಾರಿಯಾದವರು ವಿದೇಶಿ ನೆಲದಿಂದಲೇ ನಗುತ್ತಾ ಮಾತನಾಡಿದಾಗ, ನಮ್ಮ ದೇಶದ ಕಾನೂನು ಮತ್ತು ರಾಜಕೀಯ ಇಚ್ಛಾಶಕ್ತಿ ಎಷ್ಟು ದುರ್ಬಲವಾಗಿದೆ ಎಂಬುದನ್ನು ತೋರಿಸುತ್ತದೆ. ಇಷ್ಟಾದರೂ ಸರ್ಕಾರ ಮೌನವಾಗಿರುವುದು ಅಪಾಯಕಾರಿ ಸಂದೇಶ ನೀಡುತ್ತದೆ” ಎಂದು ಇನ್ನೊಬ್ಬರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಲಾಯನವಾದಿಗಳು ಎಂಬ ಹೇಳಿಕೆಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅವರನ್ನು ಭಾರತಕ್ಕೆ ಕರೆತಂದು ಕಾನೂನಿನ ಮುಂದೆ ನಿಲ್ಲಿಸಲು ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ ಎಂದು ತಿಳಿಸಿದೆ. “ಈ ಪಲಾಯನವಾದಿಗಳನ್ನು ಭಾರತಕ್ಕೆ ಕರೆತರಲು ನಾವು ಬದ್ಧರಾಗಿದ್ದೇವೆ. ಅವರ ವಾಪಸಿಗಾಗಿ ಸಂಬಂಧಿಸಿದ ದೇಶಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಪ್ರಕ್ರಿಯೆಗಳು ನಡೆಯುತ್ತಿವೆ” ಎಂದು ಎಂಇಎ ವಕ್ತಾರ ರಂಧೀರ್ ಜೈಸ್ವಾಲ್ ಹೇಳಿದರು.
ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಪಡೆದ ಸಾಲಗಳಿಗೆ ಸಂಬಂಧಿಸಿದ ವಂಚನೆ ಹಾಗೂ ಹಣಕಾಸು ಅಕ್ರಮ ಆರೋಪಗಳಲ್ಲಿ ಮಲ್ಯ ಭಾರತಕ್ಕೆ ಬೇಕಾಗಿದ್ದಾರೆ. ಇತ್ತ ಐಪಿಎಲ್‌ನ ಆರಂಭವಾದ ವರ್ಷಗಳಲ್ಲಿ ಲೀಗ್ ಅಧ್ಯಕ್ಷರಾಗಿದ್ದಾಗ ಹಣಕಾಸು ದುರುಪಯೋಗ ಮತ್ತು ಅಕ್ರಮಗಳ ಆರೋಪಗಳನ್ನು ಲಲಿತ್ ಮೋದಿ ಎದುರಿಸುತ್ತಿದ್ದಾರೆ. ಮಲ್ಯ 2016ರಲ್ಲಿ ಹಾಗೂ ಮೋದಿ 2010ರಲ್ಲಿ ಭಾರತ ತೊರೆದಿದ್ದಾರೆ.