ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಐಪಿಎಲ್‌ಗೆ ಅಡ್ಡಿಪಡಿಸಿತ್ತು ಕಾಂಗ್ರೆಸ್‌ʼʼ: ದಾವೂದ್ ಇಬ್ರಾಹಿಂ, ಕ್ರಿಕೆಟ್‌, ಪ್ರಧಾನಿ ಮೋದಿ, ರಾಹುಲ್ ಗಾಂಧಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಲಲಿತ್ ಮೋದಿ

Lalit Modi Makes Explosive Claims: ಐಪಿಎಲ್‌ ಆರಂಭಿಸಿದ್ದ, ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೇಶ ತೊರೆದ ಲಲಿತ್ ಮೋದಿ ವೃತ್ತಿ ಜೀವನದ ದೊಡ್ಡ ವಿವಾದಗಳ ಕುರಿತು ಮತ್ತೆ ಮಾತನಾಡಿದ್ದಾರೆ. ದಾವೂದ್ ಇಬ್ರಾಹಿಂನ ತಂಡವು ತನ್ನನ್ನು ಗುರಿಯಾಗಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ. ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಅಕ್ರಮ ಬೆಟ್ಟಿಂಗ್ ಮತ್ತು ಪಂದ್ಯ ಫಿಕ್ಸಿಂಗ್ ಜಾಲಗಳನ್ನು ಭೂಗತ ಜಾಲಗಳೊಂದಿಗಿನ ಸಂಘರ್ಷಕ್ಕೆ ಕಾರಣವಾಯಿತು ಎಂದಿದ್ದಾರೆ.

ಲಲಿತ್ ಮೋದಿ

ಲಂಡನ್, ಜೂ. 5: ಐಪಿಎಲ್‌ ಆರಂಭಿಸಿದ್ದ, ಬಿಸಿಸಿಐನ ಉಪಾಧ್ಯಕ್ಷರಾಗಿದ್ದ ಕೊನೆಗೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ದೇಶ ತೊರೆದ ಲಲಿತ್ ಮೋದಿ (Lalit Modi) ವೃತ್ತಿ ಜೀವನದ ಅತ್ಯಂತ ದೊಡ್ಡ ವಿವಾದಗಳ ಕುರಿತು ಮತ್ತೆ ಮಾತನಾಡಿದ್ದಾರೆ. ದಾವೂದ್ ಇಬ್ರಾಹಿಂನ (Dawood Ibrahim) ತಂಡವು ತನ್ನನ್ನು ಗುರಿಯಾಗಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ. ವಿದೇಶದಲ್ಲೇ ಉಳಿಯುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಅವರು, ಐಪಿಎಲ್‌ ಅನ್ನು ದುರ್ಬಲಗೊಳಿಸಲು ಕಾಂಗ್ರೆಸ್ ನಾಯಕರು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ಜತೆಗೆ, ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ನ ಆರಂಭಿಕ ವರ್ಷಗಳಲ್ಲಿ ಅಕ್ರಮ ಬೆಟ್ಟಿಂಗ್ ಮತ್ತು ಪಂದ್ಯ ಫಿಕ್ಸಿಂಗ್ ಜಾಲಗಳನ್ನು ನಿಯಂತ್ರಿಸಲು ಕೈಗೊಂಡ ಪ್ರಯತ್ನಗಳು ಭೂಗತ ಜಾಲಗಳೊಂದಿಗಿನ ಸಂಘರ್ಷಕ್ಕೆ ಕಾರಣವಾಯಿತು ಎಂದು ಲಲಿತ್ ಮೋದಿ ವಿವರಿಸಿದ್ದಾರೆ. ದಾವೂದ್ ಇಬ್ರಾಹಿಂನ ತಂಡವು ತನ್ನನ್ನು ಹಲವು ಬಾರಿ ಗುರಿಯಾಗಿಸಿಕೊಂಡಿತ್ತು ಎಂದು ಹೇಳಿದ ಅವರು, ಮೂರು ಬಾರಿ ಹತ್ಯೆ ಯತ್ನ ನಡೆದಿದ್ದವು ಎಂದಿದ್ದಾರೆ. ಅಲ್ಲದೆ, ತನ್ನ ಮಗನನ್ನು ಒಮ್ಮೆ ಅಪಹರಿಸಲಾಗಿತ್ತು. ಕುಟುಂಬದ ವಿರುದ್ಧ ಬಂದ ಬೆದರಿಕೆಗಳೇ ಕ್ರಿಕೆಟ್ ಆಡಳಿತದಿಂದ ದೂರ ಸರಿಯುವಂತೆ ಮಾಡಿದ್ದವು ಎಂದು ಅವರು ಹೇಳಿದ್ದಾರೆ.

ದಾವೂದ್ ಜಾಲದಿಂದ ಬೆದರಿಕೆ

ದಾವೂದ್ ಜಾಲಕ್ಕೆ ಸಂಬಂಧಿಸಿದೆ ಎನ್ನಲಾದ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದಾಗಿ ಅವರು ವಿವರಿಸಿದ್ದಾರೆ. ಕಾನೂನು ಜಾರಿ ಸಂಸ್ಥೆಗಳಿಗೆ ಅಂತಹ ಕೆಲವು ಸಂವಹನಗಳ ಬಗ್ಗೆ ತಿಳಿದಿತ್ತು ಎಂದು ಅವರು ಹೇಳಿದ್ದಾರೆ. ಲಲಿತ್ ಮೋದಿ ಪಲಾಯನಗೈದವ ಎಂದು ಕರೆಯುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಭಾರತೀಯ ಅಧಿಕಾರಿಗಳು ನಿಜವಾಗಿಯೂ ತಮ್ಮನ್ನು ದೇಶಕ್ಕೆ ಕರೆತರಲು ಬಯಸಿದ್ದರೆ, ಹಲವು ವರ್ಷಗಳ ಹಿಂದೆಯೇ ಅದನ್ನು ಮಾಡಬಹುದಾಗಿತ್ತು ಎಂದು ಅವರು ವಾದಿಸಿದ್ದಾರೆ.

ಇಲ್ಲಿದೆ ವಿಡಿಯೊ:



ತಾವು ಭಾರತೀಯ ಸರ್ಕಾರದ ಕೈಗೆ ಸಿಗದೆ ಅಡಗಿಕೊಂಡಿಲ್ಲ ಎಂದು ಹೇಳಿದ ಅವರು, ವಿದೇಶದಲ್ಲೇ ಉಳಿಯುವ ತಮ್ಮ ನಿರ್ಧಾರವು ಕಾನೂನು ಕ್ರಮಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿಯಲ್ಲ, ಬದಲಾಗಿ ಭದ್ರತಾ ಕಳವಳಗಳಿಂದ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳಿದ ಲಲಿತ್‌ ಮೋದಿ, ತಮ್ಮ ಜೀವಕ್ಕೆ ಬೆದರಿಕೆಯಿದ್ದುದರಿಂದ ಭಾರತದಿಂದ ದೂರ ಉಳಿಯಲು ನಿರ್ಧರಿಸಿದ್ದಾಗಿ ಹೇಳಿದ್ದಾರೆ.

ಕಪಾಳಮೋಕ್ಷ ವಿಡಿಯೊ ಬಹಿರಂಗ; ಲಲಿತ್ ಮೋದಿಗೆ ಛೀಮಾರಿ ಹಾಕಿದ ಶ್ರೀಶಾಂತ್‌ ಪತ್ನಿ

ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ

ಇನ್ನು ರಾಹುಲ್ ಗಾಂಧಿ ವಿರುದ್ಧ ವಾಕ್ಸಮರ ನಡೆಸಿದ ಲಲಿತ್ ಮೋದಿ, ಚುನಾವಣಾ ಪ್ರಚಾರಗಳು ಮತ್ತು ರಾಜಕೀಯ ಭಾಷಣಗಳಲ್ಲಿ ರಾಹುಲ್ ಗಾಂಧಿ ಪದೇ ಪದೆ ತಮ್ಮ ಹೆಸರನ್ನು ಪ್ರಸ್ತಾಪಿಸುತ್ತಾರೆ ಎಂದು ಕಿಡಿಕಾರಿದ್ದಾರೆ. ಕ್ರಿಕೆಟ್‌ನೊಂದಿಗೆ ಭಾರತೀಯರಿಗೆ ಇರುವ ಭಾವನಾತ್ಮಕ ಬಾಂಧವ್ಯವೇ ಇದಕ್ಕೆ ಕಾರಣ. ಪ್ರತಿ ಬಾರಿ ಚುನಾವಣೆ ಬಂದಾಗ ರಾಹುಲ್ ಗಾಂಧಿ ತನ್ನ ವಿರುದ್ಧ ಟೀಕೆ ಮಾಡುತ್ತಾರೆ. ಜನರ ಭಾವನೆಗಳನ್ನು ಕೆರಳಿಸಿ ರಾಜಕೀಯ ಲಾಭ ಪಡೆಯಲು ತನ್ನ ಹೆಸರನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಕಾಂಗ್ರೆಸ್‌ನಿಂದ ಐಪಿಎಲ್‌ಗೆ ಅಡೆತಡೆ

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 2009ರ ಐಪಿಎಲ್‌ ವೇಳೆ ಹಲವು ಅಡೆತಡೆಗಳನ್ನು ಸೃಷ್ಟಿಸಿತ್ತು. ಆಗಿನ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಲೋಕಸಭೆ ಚುನಾವಣೆಗಳ ಅವಧಿಯಲ್ಲಿ ಭಾರತದಲ್ಲಿ ಪಂದ್ಯಾವಳಿಯನ್ನು ಆಯೋಜಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ, ಕಾಂಗ್ರೆಸ್ ಆಡಳಿತವಿದ್ದ ರಾಜ್ಯಗಳು ಪಂದ್ಯಗಳ ವೇಳಾಪಟ್ಟಿಗೆ ಸಹಕಾರ ನೀಡಲು ಇಚ್ಛೆ ತೋರಲಿಲ್ಲ. ಹೀಗಾಗಿ ಕೊನೆಗೆ ದಕ್ಷಿಣ ಆಫ್ರಿಕಾದಲ್ಲಿ ಪಂದ್ಯ ನಡೆಸಬೇಕಾಯಿತು ಎಂದು ಅವರು ಹೇಳಿದ್ದಾರೆ.

ಮೋದಿ ಬಗ್ಗೆ ಹೇಳಿದ್ದೇನು?

ಇನ್ನು ಹಲವು ರಾಜಕೀಯ ವ್ಯಕ್ತಿಗಳನ್ನು ಟೀಕಿಸಿದರೂ ಪ್ರಧಾನಿ ನರೇಂದ್ರ ಮೋದಿ ಬಗ್ಗೆ , ಲಲಿತ್ ಮೋದಿ ಸಕಾರಾತ್ಮಕವಾಗಿ ಮಾತನಾಡಿದ್ದಾರೆ. ಪ್ರಧಾನಿ ಕ್ರಿಕೆಟ್ ಮೂಲ ಸೌಕರ್ಯ ಹೆಚ್ಚಿಸುವಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. ಕ್ರಿಕೆಟ್ ಸಂಬಂಧಿತ ವಿಷಯಗಳಲ್ಲಿ, ವಿಶೇಷವಾಗಿ ಅಹಮದಾಬಾದ್‌ನಲ್ಲಿ ಸೌಲಭ್ಯಗಳ ಅಭಿವೃದ್ಧಿಯ ಕುರಿತು ಮಾತುಕತೆಗಳು ನಡೆದಿದ್ದವು ಎಂದು ತಿಳಿಸಿದ್ದಾರೆ. ಆದರೂ, ತಮ್ಮ ಮತ್ತು ನರೇಂದ್ರ ಮೋದಿ ಅವರ ನಡುವಿನ ಸಂಬಂಧವು ರಾಜಕೀಯಕ್ಕಿಂತ ಕ್ರಿಕೆಟ್ ಹಾಗೂ ಕ್ರೀಡಾ ಆಡಳಿತಕ್ಕೆ ಸೀಮಿತವಾಗಿತ್ತು ಎಂದು ಲಲಿತ್ ಮೋದಿ ಸ್ಪಷ್ಟಪಡಿಸಿದ್ದಾರೆ.