ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

'ಆಪರೇಷನ್ ಸಿಂದೂರ್' ವೇಳೆ ನಾಶವಾದ ಕಟ್ಟಡವೇ ಉಗ್ರರ ಹೆಡ್ ಆಫೀಸ್; ಸತ್ಯ ಒಪ್ಪಿಕೊಂಡ ಲಷ್ಕರ್ ಕಮಾಂಡರ್

ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ ವೇಳೆ ಭಾರತ ನಡೆಸಿದ ದಾಳಿಯಿಂದ ಪಾಕಿಸ್ತಾನದ ಮುರ್ಡಿಕೆ ಲಷ್ಕರ್-ಎ-ತೈಬಾ ಉಗ್ರರ ತರಬೇತಿ ಕೇಂದ್ರ ಮಾರ್ಕಜ್-ಎ-ತೈಬಾ ಸಂಪೂರ್ಣ ನಾಶವಾಗಿದ್ದು, ಉಗ್ರ ಸಂಘಟನೆಗಳ ಶಕ್ತಿ ಕುಸಿದಿದೆ ಎಂದು ಪಾಕ್ ಉಗ್ರ ಸಂಘಟನೆ ಮುಖ್ಯ ಕಮಾಂಡರ್ ಹಫೀಸ್ ಅಬ್ದುಲ್ ರವೂಫ್ ಸ್ವತಃ ಒಪ್ಪಿಕೊಂಡಿದ್ದಾನೆ.

ಉಗ್ರ ಸಂಘಟನೆ ಮುಖ್ಯ ಕಮಾಂಡರ್ ಹಫೀಸ್ ಅಬ್ದುಲ್ ರವೂಫ್

ಇಸ್ಲಾಮಾಬಾದ್‌, ಜ. 15: ಕಳೆದ ವರ್ಷ ಭಾರತ ನಡೆಸಿದ ಆಪರೇಷನ್ ಸಿಂದೂರ್‌ (Operation Sindoor) ಕಾರ್ಯಾಚರಣೆ ಬಗ್ಗೆ ಪಾಕಿಸ್ತಾನ (Pakistan)ದ ಉಗ್ರ ಸಂಘಟನೆ ಮುಖ್ಯ ಕಮಾಂಡರ್ ಹಫೀಸ್ ಅಬ್ದುಲ್ ರವೂಫ್ (Hafiz Abdul Rauf) ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾನೆ. ಭಾರತ ನಡೆಸಿದ ದಾಳಿಯಲ್ಲಿ ಪಾಕಿಸ್ತಾನದ ಮುರ್ಡಿಕೆ (Muridke)ಯಲ್ಲಿರುವ ಉಗ್ರರ ತರಬೇತಿ ಶಿಬಿರ ʼಮಾರ್ಕಜ್-ಎ-ತೈಬಾʼ (Markaz-e-Taiba) ಸಂಪೂರ್ಣ ನಾಶವಾಗಿದ್ದು, ಭಯೋತ್ಪಾದನಾ ಸಂಘಟನೆಗಳ ಬೆನ್ನುಮೂಳೆ ಮುರಿದಂತಾಗಿದೆ ಎಂದು ಒಪ್ಪಿಕೊಂಡಿದ್ದಾನೆ. ಈ ಮೂಲಕ ಪಾಕಿಸ್ತಾನದ ವರ್ಷಗಳ ನಿರಾಕರಣೆ ಹಾಗೂ ದ್ವಂದ್ವ ನೀತಿಯು ಬಯಲಾದಂತಾಗಿದೆ.

ಅಮೆರಿಕ(America)ದಿಂದ ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಲ್ಪಟ್ಟಿರುವ ಲಷ್ಕರ್-ಎ-ತೊಯ್ಬಾ(Lashkar-e-Taiba)ದ ಆಪರೇಷನಲ್ ಕಮಾಂಡರ್ ಹಫೀಜ್ ಅಬ್ದುಲ್ ರೌಫ್, ಸಭೆಯೊಂದರಲ್ಲಿ ಮಾತನಾಡುತ್ತ, "ಆ ದಾಳಿ ಅತ್ಯಂತ ಭಯಾನಕವಾಗಿದ್ದು, ಕಟ್ಟಡ ಸಂಪೂರ್ಣ ನಾಶವಾಗಿಬಿಟ್ಟಿದೆ. ಆ ಸ್ಥಳ ಇನ್ನು ಮಸೀದಿಯಾಗಿ ಉಳಿದಿಲ್ಲ. ಇಂದು ನಾವು ಅಲ್ಲಿ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ” ಎಂದು ಹೇಳಿದ್ದು, ಇದು ಭಾರತದ ಕಾರ್ಯಾಚರಣೆ ಗುರಿಯನ್ನು ನಿಖರವಾಗಿ ತಲುಪಿದೆ ಎಂಬುವುದಕ್ಕೆ ಜೀವಂತ ಸಾಕ್ಷಿ ಎನಿಸಿಕೊಂಡಿದೆ.

ಹಫೀಸ್ ಅಬ್ದುಲ್ ರವೂಫ್ ಹೇಳಿಕೆ:



ಅಷ್ಟೇ ಅಲ್ಲದೆ ದಾಳಿಗಳಲ್ಲಿ ಸತ್ತ ಭಯೋತ್ಪಾದಕರ ಅಂತ್ಯಕ್ರಿಯೆ ನೇತೃತ್ವವನ್ನು ಅವನೇ ವಹಿಸಿದ್ದು, ಆ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಸಹ ಆಗಿದ್ದವು. ಈಗ, ಹಲವು ತಿಂಗಳುಗಳು ಬಳಿಕ ಬಂದ ಅವನ ಈ ಹೇಳಿಕೆಗಳಿಂದ ಮುರ್ಡಿಕೆಯಲ್ಲಿ ಏನಿತ್ತು? ಅಲ್ಲಿ ಏನು ನಾಶವಾಯಿತು ಎಂಬುದರ ಕುರಿತು ಪಾಕ್ ನೀಡುತ್ತಿದ್ದ ದ್ವಂದ್ವ ಹೇಳಿಕೆಗಳಿಗೆ ತೆರೆ ಎಳೆದಂತಾಗಿದೆ.

ತಾಲಿಬಾನ್‌ ಜತೆ ಶಾಂತಿ ಮಾತುಕತೆ ನಡುವೆಯೇ ಪಾಕಿಸ್ತಾನ-ಅಫ್ಘಾನ್‌ ಗಡಿಯಲ್ಲಿ ಘರ್ಷಣೆ; 5 ಪಾಕ್ ಸೈನಿಕರು ಬಲಿ

ʼಆಪರೇಷನ್ ಸಿಂದೂರ್ʼ ಹಿನ್ನೆಲೆ

2025ರ ಏಪ್ರಿಲ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರತಿಕಾರದ ಭಾಗವಾಗಿ ಭಾರತ ಆಪರೇಷನ್ ಸಿಂದೂರ್ ಕಾರ್ಯಾಚರಣೆ ಆರಂಭಿಸಿತ್ತು. ಪಹಲ್ಗಾಮ್ ದಾಳಿಯಲ್ಲಿ ಲಷ್ಕರ್-ಎ-ತೈಬಾ, "ದಿ ರೆಸಿಸ್ಟೆನ್ಸ್ ಫ್ರಂಟ್(TRF)" ಹೆಸರಿನಲ್ಲಿ 26 ನಾಗರಿಕರನ್ನು ಹತ್ಯೆ ಮಾಡಿತ್ತು. ಭಾರತದ ಆಪರೇಷನ್ ಸಿಂದೂರ್‌ಗೆ ಪ್ರತಿಯಾಗಿ ಪಾಕ್ ನಡೆಸಿದ ಕ್ಷಿಪಣಿ ಹಾಗೂ ವೈಮಾನಿಕ ದಾಳಿಗಳಲ್ಲಿ ಬಳಸಲಾಗಿರುವ ತಂತ್ರಜ್ಞಾನ ಹಾಗೂ ಸ್ಫೋಟಕಗಳು ಚೀನಾದಿಂದ ರವಾನೆಯಾಗಿದ್ದವು ಎಂಬುದನ್ನೂ ರೌಫ್‌ ಬಾಯಿಬಿಟ್ಟಿದ್ದಾನೆ. ಈ ಆರೋಪವನ್ನು ಪಾಕ್ ಹಿಂದೆ ನಿರಾಕರಿಸಿತ್ತು.

ಪಾಕ್ ಪಾತ್ರದ ಕುರಿತು ಬಹಿರಂಗ ಹೇಳಿಕೆ

ಪಾಕಿಸ್ತಾನದಲ್ಲಿ “ಜಿಹಾದ್‌ಗೆ ಮುಕ್ತ ಸ್ವಾತಂತ್ರ್ಯ” ನೀಡಲಾಗಿದೆ ಮತ್ತು ಭಯೋತ್ಪಾದಕರ ನೇಮಕಾತಿ ಹಾಗೂ ತರಬೇತಿ ವಿಶ್ವದ ಬೇರೆ ಯಾವುದೇ ದೇಶಕ್ಕಿಂತ ಸುಲಭವಾಗಿ ಆಗುತ್ತದೆ ಎಂದು ರೌಫ್‌ ಹೇಳಿದ್ದಾನೆ. ಅಷ್ಟೇ ಅಲ್ಲದೇ ಚೀನಾವನ್ನು ಕೂಡ ಶ್ಲಾಘಿಸಿದ ರೌಫ್, ಪಹಲ್ಗಾಮ್ ನಂತರ ಭಾರತ–ಪಾಕ್ ನಡುವಿನ ಉದ್ವಿಗ್ನ ಸಮಯದಲ್ಲಿ ಬೀಜಿಂಗ್ ಪಾಕಿಸ್ತಾನಕ್ಕೆ ನೆರವಾಗಿತ್ತು ಎಂದಿದ್ದಾನೆ. ಅವನ ಪ್ರಕಾರ, ಚೀನಾದ ನೆರವು ಭಾರತ ಕುರಿತ ಬಹುತೇಕ ತಕ್ಷಣದ ಗುಪ್ತಚರ ಮಾಹಿತಿಯನ್ನು ಪಾಕಿಸ್ತಾನಕ್ಕೆ ಒದಗಿಸಿತು.

ನಾಶವಾಗಿದ್ದ 'ಮಾರ್ಕಜ್-ಎ-ತೈಬಾ'ದಲ್ಲೇ ಭರ್ಜರಿ ಸಮಾರಂಭ

ʼಆಪರೇಷನ್ ಸಿಂದೂರ್ʼ ವೇಳೆ ನಾಶವಾಗಿದೆ ಎಂದು ರೌಫ್ ಹೇಳುತ್ತಿರುವ ಅದೇ ಮಾರ್ಕಜ್-ಎ-ತೈಬಾ ಕಟ್ಟದಲ್ಲಿಯೇ ಹೊಸದಾಗಿ ತರಬೇತಿ ಪಡೆದ ಭಯೋತ್ಪಾದಕರ ಪಾಸಿಂಗ್-ಔಟ್ ಸಮಾರಂಭವನ್ನು ಗುರುವಾರ (ಜನವರಿ 15) ಆಯೋಜಿಸಲಾಗಿತ್ತು. ಆ ಕಾರ್ಯಕ್ರಮದಲ್ಲಿ ರೌಫ್, ಹಫೀಜ್ ಸಯೀದ್‌ನ ಪುತ್ರ ಹಫೀಜ್ ತಲ್ಹಾ ಸಯೀದ್ ಮತ್ತು ಲಷ್ಕರ್ ಉಪಪ್ರಮುಖ ಸೈಫುಲ್ಲಾ ಕಸೂರಿ ಸೇರಿದಂತೆ ಹಲವು ಉನ್ನತ ಕಮಾಂಡರ್‌ಗಳು ಭಾಗವಹಿಸಿದ್ದರು. ಈ ಸಮಾರಂಭವು ಆಪರೇಷನ್ ಸಿಂದೂರ್ ನಂತರವೂ ಜಿಹಾದ್‌ಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ ಎಂಬುದಕ್ಕೆ ಸಾಕ್ಷಿ ಎಂದು ಮೂಲಗಳು ತಿಳಿಸಿವೆ.

ಇನ್ನು ಮುರ್ಡಿಕೆಯಲ್ಲಿ ನಾಶವಾಗಿರುವುದು ಪಾಕಿಸ್ತಾನದ ಉಗ್ರರ ಹೆಡ್ ಆಫೀಸ್ ಎಂದು ಭಾರತ ಈ ಹಿಂದೆಯೇ ಹೇಳಿತ್ತು. ಆದರೆ ಪಾಕಿಸ್ತಾನ ಅದನ್ನು ನಿರಾಕರಿಸುತ್ತ ಬಂದಿತ್ತು. ಆದರೆ ಈಗ ಪಾಕ್ ಪೋಷಿತ ಲಷ್ಕರ್‌ನ ಕಮಾಂಡರ್ ತಾನೇ ಭಾರತದ ದಾಳಿಯನ್ನು ಒಪ್ಪಿಕೊಂಡು ನೀಡಿರುವ ಹೇಳಿಕೆಗಳಿಂದ ಪಾಕ್‌ಗೆ ಭಾರಿ ಮುಖಭಂಗವಾದಂತಾಗಿದೆ.