ಪ್ಯಾರಿಸ್, ಜೂನ್ 19: ಭಾರತದ ಪ್ರಧಾನಮಂತ್ರಿ (PM) ನರೇಂದ್ರ ಮೋದಿ (Narendra Modi) ಅವರ ಫ್ರಾನ್ಸ್ ಭೇಟಿ (France Visit)ಯ ಅಂತ್ಯದಲ್ಲಿ ಫ್ರಾನ್ಸ್ ಅಧ್ಯಕ್ಷ (French President) ಎಮ್ಯಾನುಯೆಲ್ ಮ್ಯಾಕ್ರೋನ್ (Emmanuel Macron) ಹಿಂದಿಯಲ್ಲಿ ಮಾತನಾಡಿ ವಿಶೇಷವಾಗಿ ಬೀಳ್ಕೊಟ್ಟಿದ್ದು, ಜಾಗತಿಕ ರಾಜತಾಂತ್ರಿಕ ವಲಯದಲ್ಲಿ (Diplomatic Circles) ಗಮನ ಸೆಳೆದಿದೆ.
ಸಾಮಾನ್ಯ ರಾಜತಾಂತ್ರಿಕ ಸಂಪ್ರದಾಯಗಳನ್ನು ಮೀರಿ ಮ್ಯಾಕ್ರೋನ್ ಹಿಂದಿಯಲ್ಲಿ ಮಾತನಾಡುವ ಮೂಲಕ ಭಾರತದೊಂದಿಗೆ ಇರುವ ಸ್ನೇಹವನ್ನು ಮತ್ತಷ್ಟು ಬಲವಾಗಿ ಪ್ರದರ್ಶಿಸಿದರು. ಮೋದಿ ಅವರ ಭೇಟಿಯ ಸಮಾರೋಪದ ಅಂಗವಾಗಿ ಬಿಡುಗಡೆ ಮಾಡಿದ ವಿಡಿಯೊ ಸಂದೇಶದಲ್ಲಿ ಮ್ಯಾಕ್ರೋನ್, "ಪ್ರಿಯ ಮಿತ್ರ ನರೇಂದ್ರ, ನನಗೆ ಬಹಳ ಖುಷಿಯಾಗಿದೆ. ನಿಮ್ಮ ಭೇಟಿಗೆ ಸ್ವಾಗತ. ಫ್ರಾನ್ಸ್-ಭಾರತ ಸ್ನೇಹ ಅಮರವಾಗಿರಲಿ" ಎಂದು ಹಿಂದಿಯಲ್ಲಿ ಹೇಳಿದರು.
ಹಿಂದಿ ಮಾತುಗಳನ್ನು ಪೂರ್ಣಗೊಳಿಸಿದ ಬಳಿಕ ನಗುತ್ತಾ, "ನಾನು ಸರಿಯಾಗಿ ಹೇಳಿದ್ದೇನೆ ಎಂದು ಭಾವಿಸುತ್ತೇನೆ" ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ಬಳಿಕ ಇಂಗ್ಲಿಷ್‌ನಲ್ಲಿ ಮಾತನಾಡಿದ ಅವರು, "ಪ್ರಿಯ ಮಿತ್ರ ನರೇಂದ್ರ ಮೋದಿ, ನಿಮ್ಮ ಭೇಟಿಗೆ ಧನ್ಯವಾದಗಳು. ನಮ್ಮ ಸ್ನೇಹಕ್ಕೆ ಧನ್ಯವಾದಗಳು. ಇದು ಅತ್ಯಂತ ಫಲಪ್ರದ ಭೇಟಿಯಾಗಿತ್ತು. ಫ್ರಾನ್ಸ್ ನಿಮಗೆ ಪ್ರೀತಿಸುತ್ತದೆ. ಮುಂದಿನ ಫೆಬ್ರವರಿಯಲ್ಲಿ ಮತ್ತೆ ಭೇಟಿಯಾಗುವ ನಿರೀಕ್ಷೆಯಲ್ಲಿದ್ದೇವೆ. ಜೈ ಹಿಂದ್" ಎಂದು ಹೇಳಿದರು.
ಜಿ7 ಶೃಂಗಸಭೆಯಲ್ಲಿ ಮೋದಿ ಭಾಗಿ
ಪ್ರಧಾನಿ ಮೋದಿ ಅವರು ಜಿ7 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಜೂನ್ 14ರಂದು ಫ್ರಾನ್ಸ್‌ನ ನೈಸ್ ನಗರದಲ್ಲಿರುವ ವಿಲ್ಲಾ ಕೇರಿಲೋಸ್‌ನಲ್ಲಿ ಮೋದಿ ಮತ್ತು ಮ್ಯಾಕ್ರೋನ್ ಭೇಟಿಯಾಗಿ ಭಾರತ-ಫ್ರಾನ್ಸ್ ಸಂಬಂಧಗಳ ಕುರಿತು ಸುದೀರ್ಘ ಚರ್ಚೆ ನಡೆಸಿದ್ದರು.
ರಕ್ಷಣಾ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರ
ಎರಡು ದೇಶಗಳ ನಡುವಿನ ರಕ್ಷಣಾ ಸಹಕಾರವು ಉತ್ತಮವಾಗಿ ಬೆಳೆಯುತ್ತಿರುವುದಕ್ಕೆ ಸಂತೃಪ್ತಿ ವ್ಯಕ್ತಪಡಿಸಿದ ನಾಯಕರು, ರಕ್ಷಣಾ ತಂತ್ರಜ್ಞಾನ, ಸಹ-ವಿನ್ಯಾಸ, ಸಹ-ಅಭಿವೃದ್ಧಿ ಹಾಗೂ ಸಹ-ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಒಪ್ಪಿಕೊಂಡರು.
ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಮಾನವ ಬಾಹ್ಯಾಕಾಶ ಯಾನ, ಬಾಹ್ಯಾಕಾಶ ಪರಿಸ್ಥಿತಿ ಅರಿವು (Space Situational Awareness) ಹಾಗೂ ಖಾಸಗಿ ವಲಯದ ಸಹಭಾಗಿತ್ವವನ್ನು ವಿಸ್ತರಿಸುವ ಕುರಿತು ಚರ್ಚೆ ನಡೆಸಿದರು.
VivaTech 2026ನಲ್ಲಿ ಸ್ಟಾರ್ಟ್‌ಅಪ್‌ಗಳೊಂದಿಗೆ ಸಂವಾದ
ಮೋದಿ ಮತ್ತು ಮ್ಯಾಕ್ರೋನ್ ಪ್ಯಾರಿಸ್‌ನಲ್ಲಿ ನಡೆದ VivaTech 2026 ಕಾರ್ಯಕ್ರಮದಲ್ಲಿ ಸ್ಟಾರ್ಟ್‌ಅಪ್ ಸಂಸ್ಥೆಗಳೊಂದಿಗೆ ಸಂವಾದ ನಡೆಸಿ, ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರಗಳನ್ನು ಪರಿಶೀಲಿಸಿದರು.
ಮ್ಯಾಕ್ರೋನ್ ಅವರ ಹಿಂದಿ ಸಂದೇಶ ಮತ್ತು "ಜೈ ಹಿಂದ್" ಘೋಷಣೆ ಭಾರತ-ಫ್ರಾನ್ಸ್ ನಡುವಿನ ಗಾಢ ಸ್ನೇಹ ಹಾಗೂ ವೈಯಕ್ತಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.