ಬೀಜಿಂಗ್, ಜು. 11: ಭಾರಿ ಪ್ರವಾಹದಿಂದಾಗಿ (Flood) ಚೀನಾದಲ್ಲಿ (China) ಅವಾಂತರ ಸೃಷ್ಟಿಯಾಗಿದೆ. ತಳಿ ಸಾಕಣೆ ಕೇಂದ್ರಗಳಿಂದ ಸುಮಾರು 900 ವಿಷಪೂರಿತ ಹಾವುಗಳು ನೆರೆಯಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಗುವಾಂಗ್ಕ್ಸಿ ಪ್ರದೇಶದಲ್ಲಿ ನಡೆದಿದೆ. ಹಾವು ಸಾಕಣೆ ಕೇಂದ್ರಗಳು ಜಲಾವೃತಗೊಂಡ ನಂತರ ಅಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ವಿಷಪೂರಿತ ನಾಗರಹಾವುಗಳು ಸೇರಿ ಹೆಚ್ಚಿನ ಸಂಖ್ಯೆಯ ಸರೀಸೃಪಗಳು ಹತ್ತಿರದ ಹಳ್ಳಿಗಳು ಮತ್ತು ಕೃಷಿಭೂಮಿಗೆ ನುಗ್ಗಿವೆ. ನೀರಿನಲ್ಲಿ ತೇಲಿಕೊಂಡು ಹೋಗಿರುವ ಹಾವುಗಳನ್ನು ಸೆರೆಹಿಡಿಯಲು ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಕಡಿತಕ್ಕೊಳಗಾದವರಿಗೆ ತ್ವರಿತ ಚಿಕಿತ್ಸೆ ನೀಡಲು ತಾತ್ಕಾಲಿಕ ವೈದ್ಯಕೀಯ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದೆ.
ಚೀನಾದ ಹಾವು ಸಾಕಣೆಗೆ ಗುವಾಂಗ್ಕ್ಸಿ ಅತಿದೊಡ್ಡ ಕೇಂದ್ರವಾಗಿದ್ದು, ಸಾಂಪ್ರದಾಯಿಕ ಔಷಧ, ಚರ್ಮದ ಉತ್ಪನ್ನಗಳು ಮತ್ತು ಮಾಂಸಕ್ಕಾಗಿ ಸುಮಾರು 30 ಮಿಲಿಯನ್ ಸರೀಸೃಪಗಳನ್ನು ಸಾಕಲಾಗುತ್ತದೆ. ಈ ಪ್ರದೇಶವು ಮಾರಕ ಬಿರುಗಾಳಿಯಿಂದ ತತ್ತರಿಸಿದ್ದು, ಹಂದಿ ಸಾಕಣೆ ಕೇಂದ್ರಗಳು, ಮಲ್ಲಿಗೆ ತೋಟಗಳು ಹಾನಿಗೊಳಗಾಗಿವೆ. ಅದೇ ರೀತಿ ಹಾವುಳು ನೀರಿನಲ್ಲಿ ತೇಲಿಕೊಂಡು ಹೋಗುತ್ತಿದ್ದು, ವಿಡಿಯೊ ವೈರಲ್ ಆಗಿದೆ.
ಗುವಾಂಗ್ಕ್ಸಿ ನಗರದ ಹೆಂಗ್‌ಝೌನಲ್ಲಿ ಹೀಗೆ ತೇಲಿಕೊಂಡು ಬಂದ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರಸ್ತೆಗಳು ಮುಚ್ಚಿ ಹೋಗಿದ್ದರಿಂದ ದೀರ್ಘ ಪ್ರಯಾಣದ ನಂತರವೇ ಅವರು ಆಸ್ಪತ್ರೆಗೆ ತಲುಪಿದರು. ಪ್ರವಾಹದಿಂದ ಹಾನಿಗೊಳಗಾದ ತನ್ನ ಮನೆಯನ್ನು ಸ್ವಚ್ಛಗೊಳಿಸುವಾಗ ಹಾವು ಕಚ್ಚಿದೆ ಎನ್ನಲಾಗಿದೆ. ಪ್ರವಾಹದಿಂದ ರಸ್ತೆ ತುಂಬೆಲ್ಲ ನೀರು ಇದ್ದುದರಿಂದ ಆಸ್ಪತ್ರೆ ತಲುಪಲು ಕಷ್ಟಪಡಬೇಕಾಯಿತು. ಹೀಗಾಗಿ ಅವರು ಮೃತಪಟ್ಟರು ಎಂದು ಮೂಲಗಳು ತಿಳಿಸಿವೆ.
ಇಲ್ಲಿದೆ ವಿಡಿಯೊ:
ಚೀನಾದ ಮಾಧ್ಯಮಗಳ ಪ್ರಕಾರ, ಕನಿಷ್ಠ 900 ಹಾವುಗಳು ಸಾಕಾಣಿಕೆ ಕೇಂದ್ರದಿಂದ ಹೊರ ಬಂದಿವೆ. ನಿವಾಸಿಗಳು ತೊಡೆಯ ಎತ್ತರದ ಪ್ರವಾಹದ ನೀರಿನ ಮೂಲಕ ನಡೆದುಕೊಂಡು ಹೋಗುತ್ತಾ, ಸರೀಸೃಪಗಳನ್ನು ಹಿಡಿಯುತ್ತಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಅತಿದೊಡ್ಡ ಹಾವು ಸಂತಾನೋತ್ಪತ್ತಿ ಕೇಂದ್ರ
ಗುವಾಂಗ್ಕ್ಸಿ ವಿಶ್ವದ ಅತಿದೊಡ್ಡ ಹಾವು ಸಂತಾನೋತ್ಪತ್ತಿ ಕೇಂದ್ರ ಎನಿಸಿಕೊಂಡಿದೆ. ಇದು ಸ್ಥಳೀಯರಿಗೆ ಸಾಕಷ್ಟು ಉದ್ಯೋಗ ಸೃಷ್ಟಿಸಿದೆ. ಹಲವರ ಬದುಕನ್ನು ಹಸನು ಮಾಡಿದೆ. ಸಂತಾನೋತ್ಪತ್ತಿಯಿಂದ ಸಂಶೋಧನೆಯವರೆಗೆ ನೂರಾರು ವ್ಯವಹಾರಗಳನ್ನು ಹುಟ್ಟುಹಾಕಿದೆ.
ಇನ್ನು ಪ್ರವಾಹದಿಂದ ಹಾವುಗಳ ಜತೆಗೆ ಆ ಪ್ರದೇಶದಲ್ಲಿರುವ ಹಂದಿ ಸಾಕಣೆ ಕೇಂದ್ರಗಳು ಸಹ ತತ್ತರಿಸಿಕೊಂಡವು. ಗುವಾಂಗ್ಕ್ಸಿ ನಗರದ ಗುಯಿಗಾಂಗ್‌ನಲ್ಲಿರುವ ಮೃಗಾಲಯದಲ್ಲಿಯೂ ಭಾರಿ ಮಳೆಯು ಹಾನಿಯನ್ನುಂಟು ಮಾಡಿತು. ಮಳೆಯಿಂದಾಗಿ ಆವರಣಗಳು ಹಾನಿಗೊಳಗಾಗಿ 100ಕ್ಕೂ ಹೆಚ್ಚು ಪ್ರಾಣಿಗಳು ನಾಪತ್ತೆಯಾಗಿವೆ. ಎರಡು ಜೀಬ್ರಾಗಳು, ಎರಡು ಆಸ್ಟ್ರಿಚ್‌ಗಳು ಮತ್ತು 30 ನವಿಲುಗಳು ಸೇರಿ ನಾಪತ್ತೆಯಾದ ಪ್ರಾಣಿಗಳನ್ನು ಹುಡುಕಲು ಸಹಾಯ ಮಾಡುವಂತೆ ಸ್ಥಳೀಯ ನಾಗರಿಕರಿಗೆ ಮೃಗಾಲಯವು ತುರ್ತು ಮನವಿಮಾಡಿದೆ.