ಕನನಾಸ್ಕಿಸ್ (ಕೆನಡಾ): ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಕೆನಡಾದ ಕನನಾಸ್ಕಿಸ್‌ನಲ್ಲಿ ನಡೆಯುತ್ತಿರುವ G7 ಶೃಂಗಸಭೆಯ (G7 Summit) ಸಂದರ್ಭದಲ್ಲಿ ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೋನಿ (Giorgia Meloni) ಅವರನ್ನು ಭೇಟಿಯಾದರು. ಇಬ್ಬರು ನಾಯಕರು ಶುಭಾಶಯ ವಿನಿಮಯ ಮಾಡಿಕೊಂಡು ಸಂಕ್ಷಿಪ್ತ ಚರ್ಚೆ ನಡೆಸಿದರು. ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ ಮೋದಿ ಮೆಲೋನಿಯವರೊಂದಿಗೆ ಕೈಕುಲುಕಿ ಸಂಭಾಷಣೆಯಲ್ಲಿ ತೊಡಗಿರುವುದು ಕಂಡುಬಂದಿತು.
‘ಮೆಲೋಡಿ’ ಮೀಮ್‌ಗಳ ಸಮಯ?
ಮೋದಿ ಮತ್ತು ಜಾರ್ಜಿಯಾ ಮೆಲೋನಿ ಭೇಟಿಯ ಕ್ಷಣಗಳು ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯಮಯ ಮೀಮ್‌ಗಳಾಗಿ ಕಾಣಿಸಿಕೊಂಡಿವೆ. ಈ ಹಿಂದೆ ಝರೋದಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ, ಈ ವೈರಲ್ ವಿಷಯದ ಬಗ್ಗೆ ಕೇಳಿದಾಗ ಮೋದಿ ನಗುತ್ತಾ, “ಅದೆಲ್ಲ ನಡೆಯುತ್ತಲೇ ಇರುತ್ತದೆ” ಎಂದು ಉತ್ತರಿಸಿದ್ದರು.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Narendra Modi: ನಾವು ಉಗ್ರರನ್ನು ಮಾತ್ರ ಹೊಡೆದಿದ್ದೇವೆ; ಆಪರೇಷನ್ ಸಿಂದೂರ್ ಕುರಿತು ಟ್ರಂಪ್‌ಗೆ ಮಾಹಿತಿ ನೀಡಿದ ಮೋದಿ
ವಿಶ್ವ ನಾಯಕರೊಂದಿಗೆ ಸಮಾಲೋಚನೆ
ಶೃಂಗಸಭೆಯ ಆರಂಭದಲ್ಲಿ, ಕೆನಡಾದ ಪ್ರಧಾನಮಂತ್ರಿ ಮಾರ್ಕ್ ಕಾರ್ನೆ ಅವರು ಪಿಎಂ ಮೋದಿ ಅವರನ್ನು ಕನನಾಸ್ಕಿಸ್‌ನಲ್ಲಿ ವೈಯಕ್ತಿಕವಾಗಿ ಸ್ವಾಗತಿಸಿದರು. ಮೆಲೋನಿ ಮತ್ತು ಕಾರ್ನೆ ಜತೆಗಿನ ಭೇಟಿಯೊಂದಿಗೆ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರನ್, ಜರ್ಮನ್ ಚಾನ್ಸೆಲರ್ ಫ್ರೀಡ್ರಿಕ್ ಮೆರ್ಜ್ ಮತ್ತು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗೂ ಚರ್ಚೆ ನಡೆಸಿದರು. ಈ ಭೇಟಿಗಳ ನಂತರ, ಮೋದಿ G7ನ ಸಾಂಪ್ರದಾಯಿಕ ಗುಂಪಿನ ಫೋಟೋಗೆ ಸೇರಿಕೊಂಡರು.
ಜರ್ಮನಿಯೊಂದಿಗಿನ ದ್ವಿಪಕ್ಷೀಯ ಚರ್ಚೆ
ಮೋದಿ ಅವರ ಪ್ರಮುಖ ದ್ವಿಪಕ್ಷೀಯ ಭೇಟಿಯು ಜರ್ಮನ್ ಚಾನ್ಸೆಲರ್ ಫ್ರೀಡ್ರಿಕ್ ಮೆರ್ಜ್ ಜತೆಗಿನದ್ದಾಗಿತ್ತು. ಭೇಟಿಯ ನಂತರ ಈ ಬಗ್ಗೆ ಎಕ್ಸ್‌ನಲ್ಲಿ ಬರೆದ ಮೋದಿ, “ಕೆನಡಾದ G7 ಶೃಂಗಸಭೆಯಲ್ಲಿ ಚಾನ್ಸೆಲರ್ ಮೆರ್ಜ್‌ರೊಂದಿಗೆ ಚರ್ಚೆ ನಡೆಸಿದ್ದು ಸಂತಸವಾಗಿದೆ. ಭಯೋತ್ಪಾದನೆ ವಿರುದ್ಧದ ಹೋರಾಟ ಮತ್ತು ಭಯೋತ್ಪಾದನೆಗೆ ಆರ್ಥಿಕ ನೆರವಿನ ನಿರ್ಮೂಲನೆಯಂತಹ ಕ್ಷೇತ್ರಗಳಲ್ಲಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದಿದ್ದಾರೆ.
ಇಬ್ಬರು ನಾಯಕರು ವ್ಯಾಪಾರ, ಹಸಿರು ಶಕ್ತಿ, ಚಲನಶೀಲತೆ, ತಂತ್ರಜ್ಞಾನ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಸಹಕಾರವನ್ನು ಹೆಚ್ಚಿಸುವ ಬದ್ಧತೆಯನ್ನು ಪುನರುಚ್ಚರಿಸಿದರು. ಭಯೋತ್ಪಾದನೆಯು ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ದೊಡ್ಡ ಬೆದರಿಕೆ ಎಂದು ಒಪ್ಪಿಕೊಂಡ ಅವರು, ಭಾರತದ ಭಯೋತ್ಪಾದನೆ ವಿರುದ್ಧದ ಕ್ರಮಗಳಿಗೆ ಜರ್ಮನಿಯ ಬಲವಾದ ಬೆಂಬಲಕ್ಕೆ ಮೋದಿ ಧನ್ಯವಾದ ಅರ್ಪಿಸಿದರು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.