ಜಕಾರ್ತ, ಜು. 7: ಇಂಡೋನೇಷ್ಯಾದ (Indonesia) ಸಂಸತ್ತನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಉಭಯ ದೇಶಗಳ ಆಪ್ತ ಬಾಂಧವ್ಯಕ್ಕೆ ಅಡಿಪಾಯ ಹಾಕಿದ ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ (Biju Patnaik) ಅವರ ಸಾಹಸವನ್ನು ಸ್ಮರಿಸಿದ್ದಾರೆ. ಭಾರತ ಮತ್ತು ಇಂಡೋನೇಷ್ಯಾ ಸಂಬಂಧಗಳು ಪ್ರಸ್ತುತ ಸುವರ್ಣ ಯುಗಕ್ಕೆ ಪ್ರವೇಶಿಸುತ್ತಿವೆ ಎಂದು ಅವರು ಈ ಸಂದರ್ಭದಲ್ಲಿ ಬಣ್ಣಿಸಿದರು.
ಒಡಿಶಾದ ಸಿಎಂ ಆಗುವ ಮೊದಲು ಅತ್ಯುತ್ತಮ ಪೈಲಟ್ ಆಗಿದ್ದ ಪಟ್ನಾಯಕ್, 1946ರಲ್ಲಿ ಡಚ್ಚರು ಜಾವಾ ಮೇಲೆ ಆಕ್ರಮಣ ಮಾಡಿದಾಗ ಇಂಡೋನೇಷ್ಯಾದ ನಾಯಕರನ್ನು ರಕ್ಷಿಸಲು ಅಂದಿನ ಪ್ರಧಾನಿ ನೆಹರು ಅವರನ್ನು ಒಪ್ಪಿಸಿದ್ದರು. ಅಪ್ರತಿಮ ಧೈರ್ಯ ಪ್ರದರ್ಶಿಸಿದ ಪಟ್ನಾಯಕ್ ಮತ್ತು ದೇಶದ ಮೊದಲ ವಾಣಿಜ್ಯ ಪೈಲಟ್ ಪರವಾನಗಿ ಪಡೆದ ಮಹಿಳೆಯಾಗಿದ್ದ ಅವರ ಪತ್ನಿ ಗ್ಯಾನ್, ಸಂಘರ್ಷದ ವಲಯಕ್ಕೆ ವಿಮಾನ ಚಲಾಯಿಸಿ ಇಂಡೋನೇಷ್ಯಾದ ಅಂದಿನ ಪ್ರಧಾನಿ ಸುತನ್ ಸಜಹ್ರೀರ್ ಮತ್ತು ಉಪಾಧ್ಯಕ್ಷ ಮೊಹಮ್ಮದ್ ಹಟ್ಟಾ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತಂದಿದ್ದರು. ಈ ಶೌರ್ಯಕ್ಕಾಗಿ ಜಕಾರ್ತಾ ಸರ್ಕಾರವು 1955 ರಲ್ಲಿ ಪಟ್ನಾಯಕ್ ಅವರಿಗೆ 'ಬಿಂತಾಂಗ್ ಜಾಸಾ ಉತಮಾ' ಪ್ರಶಸ್ತಿ ನೀಡಿ ಗೌರವಿಸಿತ್ತು.
ನರೇಂದ್ರ ಮೋದಿ ಭಾಷಣ:
ರಾಮ ಮಂದಿರ ದೇಣಿಗೆ ಹಗರಣ: ವಿವಾದದ ಬಳಿಕ ಚಂಪತ್ ರಾಯ್ ಫಸ್ಟ್ ರಿಯಾಕ್ಷನ್, ಬಹಿರಂಗ ಪತ್ರ
ಸಾಹಸದ ಹೋರಾಟ
1945ರ ಆಗಸ್ಟ್ 17ರಂದು ಇಂಡೋನೇಷ್ಯಾ ಸ್ವಾತಂತ್ರ್ಯ ಘೋಷಿಸಿಕೊಂಡ ಬೆನ್ನಲ್ಲೇ ಡಚ್ಚರು ಮಿಲಿಟರಿ ದಾಳಿ ನಡೆಸಿ, ಅಧ್ಯಕ್ಷ ಸುಕರ್ಣೋ ಅವರನ್ನು ಗೃಹಬಂಧನದಲ್ಲಿಟ್ಟರು. ಏಷ್ಯಾದ ವಿಮೋಚನೆಗೆ ಇಂಡೋನೇಷ್ಯಾದ ಸ್ವಾತಂತ್ರ್ಯ ಅತ್ಯಗತ್ಯ ಎಂದು ಭಾವಿಸಿದ ನೆಹರು, ನಾಯಕರನ್ನು ರಕ್ಷಿಸುವ ಜವಾಬ್ದಾರಿಯನ್ನು ಪಟ್ನಾಯಕ್ ದಂಪತಿಗೆ ವಹಿಸಿದರು. ತಮ್ಮ ಮಗ ಹುಟ್ಟಿದ ಕೇವಲ 14 ದಿನಗಳಲ್ಲೇ ಅವರು ಡೌಗ್ಲಾಸ್ ಡಕೋಟಾ ವಿಮಾನದಲ್ಲಿ ಜಕಾರ್ತಾ ತಲುಪಿದರು. ಡಚ್ಚರು ವಿಮಾನವನ್ನು ಹೊಡೆದು ಉರುಳಿಸುವುದಾಗಿ ಬೆದರಿಕೆ ಹಾಕಿದರೂ, 'ಕಳಿಂಗ ಬುಲ್' ಖ್ಯಾತಿಯ ಪಟ್ನಾಯಕ್ ಹೆದರದೆ ನಾಯಕರನ್ನು ಭಾರತಕ್ಕೆ ತಲುಪಿಸಿದರು. ಇದಾದ ಬಳಿಕ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂದ ನಿರ್ಣಯ ಹಾಗೂ ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದ ಡಚ್ಚರು ಹಿಂದೆ ಸರಿದರು.
ಇಂಡೋನೇಷ್ಯಾ ಈ ಉಪಕಾರವನ್ನು ಎಂದಿಗೂ ಮರೆಯಲಿಲ್ಲ. ದೆಹಲಿಯಲ್ಲಿರುವ ಇಂಡೋನೇಷ್ಯಾ ರಾಯಭಾರ ಕಚೇರಿಯಲ್ಲಿ ಇಂದಿಗೂ ಪಟ್ನಾಯಕ್ ಅವರಿಗೆ ಮೀಸಲಾದ ವಿಶೇಷ ಕೊಠಡಿಯಿದೆ. ಅಂದು ಅಧ್ಯಕ್ಷ ಸುಕರ್ಣೋ ಅವರ ಕೋರಿಕೆಯ ಮೇರೆಗೆ ಪಟ್ನಾಯಕ್ ಸುಕರ್ಣೋ ಅವರ ಮಗಳಿಗೆ 'ಮೇಘಾವತಿ' ಎಂದು ಹೆಸರಿಟ್ಟಿದ್ದರು, ಅವರೇ ಮುಂದೆ 2001ರಲ್ಲಿ ಇಂಡೋನೇಷ್ಯಾದ ಮೊದಲ ಮಹಿಳಾ ಅಧ್ಯಕ್ಷರಾದರು. 1997ರಲ್ಲಿ ಪಟ್ನಾಯಕ್ ನಿಧನರಾದಾಗ ಇಂಡೋನೇಷ್ಯಾ 7 ದಿನಗಳ ರಾಷ್ಟ್ರೀಯ ಶೋಕ ಘೋಷಿಸಿ ಗೌರವ ಸಲ್ಲಿಸಿತ್ತು.