ರೋಮ್, ಮೇ 20: ತಮ್ಮ ಐದು ದೇಶಗಳ ಪ್ರವಾಸದ ಅಂತಿಮ ಹಂತವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಇಟಲಿಗೆ ಭೇಟಿ ನೀಡಿದರು. ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಅವರಿಗೆ ಮೆಲೊಡಿ (Melody) ಚಾಕೊಲೇಟ್‌ಗಳ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಅಪರೂಪದ ಕ್ಷಣದ ಬೆನ್ನಲ್ಲೇ ಮೆಲೋನಿ ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, "ಉಡುಗೊರೆಗಾಗಿ ಧನ್ಯವಾದಗಳು. ಪ್ರಧಾನಿ ಮೋದಿ ನನಗೆ ಅತ್ಯಂತ ರುಚಿಕರವಾದ ಮೆಲೊಡಿ ಟಾಫಿ ತಂದಿದ್ದಾರೆ" ಎಂದು ಹೇಳಿದ್ದಾರೆ. ಇಬ್ಬರು ನಾಯಕರ ಉಪನಾಮಗಳಾದ ಮೋದಿ ಮತ್ತು ಮೆಲೋನಿ ಎಂಬುದನ್ನು ಜೋಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಮೆಲೊಡಿ’ (Melodi) ಎಂಬ ಪದ ಈ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮಂಗಳವಾರ ರೋಮ್‌ಗೆ ಬಂದಿಳಿದ ಪ್ರಧಾನಿ ಮೋದಿ ಅವರನ್ನು ಮೆಲೋನಿ "ರೋಮ್‌ಗೆ ಸುಸ್ವಾಗತ, ನನ್ನ ಸ್ನೇಹಿತನೇ!" ಎಂದು ಆತ್ಮೀಯವಾಗಿ ಸ್ವಾಗತಿಸಿದ್ದರು. ರಾತ್ರಿ ಭೋಜನದ ನಂತರ ಇಬ್ಬರೂ ನಾಯಕರು ರೋಮ್‌ನ ಐತಿಹಾಸಿಕ ಕೊಲೊಸಿಯಮ್‌ಗೆ ಭೇಟಿ ನೀಡಿ ಸುದೀರ್ಘವಾಗಿ ಮಾತುಕತೆ ನಡೆಸಿದರು. ಈ ಕುರಿತು ಎಕ್ಸ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡ ಮೋದಿ, "ಭಾರತ-ಇಟಲಿ ಸ್ನೇಹವನ್ನು ಮತ್ತಷ್ಟು ಬಲಪಡಿಸುವ ಕುರಿತು ನಾವು ವ್ಯಾಪಕ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ" ಎಂದು ತಿಳಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ನೆದರ್‌ಲ್ಯಾಂಡ್ಸ್‌ನಲ್ಲಿ ಭಾರತೀಯ ಸಂಸ್ಕೃತಿಯ ಝಲಕ್: ಪ್ರಧಾನಿ ನರೇಂದ್ರ ಮೋದಿಗೆ ಅದ್ಧೂರಿ ಸ್ವಾಗತ
ಉಭಯ ನಾಯಕರು ಕಾರಿನಲ್ಲಿ ಒಟ್ಟಿಗೆ ಪ್ರಯಾಣಿಸಿದ ‘ಕಾರ್ ಡಿಪ್ಲೊಮಸಿ’ ಹಾಗೂ ಸೂರ್ಯಾಸ್ತದ ವೇಳೆ ರೋಮ್‌ನ ಸ್ಕೈಲೈನ್ ವೀಕ್ಷಿಸುತ್ತಾ ನಿಂತಿದ್ದ ಚಿತ್ರಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ. ಭೇಟಿಯ ವೇಳೆ ಮೋದಿ ಗಾಢ ನೀಲಿ ಬಣ್ಣದ ಬಂದ್‌ಗಲಾ ಸೂಟ್ ಧರಿಸಿದ್ದರೆ, ಮೆಲೋನಿ ತಿಳಿ ಗುಲಾಬಿ ಬಣ್ಣದ ಕಸೂತಿ ಉಡುಪನ್ನು ಧರಿಸಿದ್ದರು.
ರೋಮ್ ಪ್ರವಾಸದ ಸಂದರ್ಭದಲ್ಲಿ ಪ್ರಧಾನಿ ಮೋದಿ ವಾರಣಾಸಿ ಮತ್ತು ಭಾರತೀಯ ಆಧ್ಯಾತ್ಮಿಕ ಸಂಪ್ರದಾಯಗಳಿಂದ ಪ್ರೇರಿತರಾಗಿ ಚಿತ್ರ ಬಿಡಿಸುವ ಇಟಾಲಿಯನ್ ವರ್ಣಚಿತ್ರಕಾರ ಜಾಂಪಾವೊಲೊ ಟೊಮಾಸೆಟ್ಟಿ ಅವರ ಕಲಾಕೃತಿಗಳನ್ನು ವೀಕ್ಷಿಸಿದರು. ಇದೇ ವೇಳೆ ರೋಮ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯವು ಪ್ರಧಾನಿಯವರಿಗೆ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಘೋಷಣೆಗಳೊಂದಿಗೆ ಭವ್ಯ ಸ್ವಾಗತ ಕೋರಿತು.
ಪ್ರಕಟಿತ ಜಂಟಿ ವ್ಯೂಹಾತ್ಮಕ ಕ್ರಿಯಾ ಯೋಜನೆ 2025–2029ರ ಅಡಿಯಲ್ಲಿ ಭಾರತ ಹಾಗೂ ಇಟಲಿ ನಡುವೆ ರಕ್ಷಣೆ, ತಂತ್ರಜ್ಞಾನ, ಹಸಿರು ಇಂಧನ ಮತ್ತು ಇಂಡಿಯಾ-ಮಿಡಲ್ ಈಸ್ಟ್-ಯೂರೋಪ್ ಎಕನಾಮಿಕ್ ಕಾರಿಡಾರ್ (IMEC)ನಂತಹ ಪ್ರಮುಖ ಯೋಜನೆಗಳ ಸಹಕಾರಕ್ಕೆ ಈ ಭೇಟಿ ಮತ್ತಷ್ಟು ವೇಗ ನೀಡಲಿದೆ. ನಾರ್ವೆ, ಸ್ವೀಡನ್, ನೆದರ್ಲ್ಯಾಂಡ್ಸ್ ಮತ್ತು ಯುಎಇ ಪ್ರವಾಸದ ಬಳಿಕ ಇಟಲಿ ಮೋದಿ ಅವರ ಪ್ರವಾಸದ ಕೊನೆಯ ನಿಲ್ದಾಣವಾಗಿದೆ.