ಬಿಷ್ಕೆಕ್, ಆ. 31: ಶಾಂಘೈ ಸಹಕಾರ ಸಂಘಟನೆ (SCO) ಶೃಂಗಸಭೆಯ ಹಿನ್ನೆಲೆಯಲ್ಲಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಷ್ಯಾ ಅಧ್ಯಕ್ಷ (Russia President) ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಸುಮಾರು 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಭಾರತ–ರಷ್ಯಾ ಸಂಬಂಧ, ವ್ಯಾಪಾರ ಮತ್ತು ಹೂಡಿಕೆ, ಇಂಧನ ಹಾಗೂ ರಕ್ಷಣಾ ಸಹಕಾರ ಸೇರಿ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಯಿತು. ಉಕ್ರೇನ್ ಸಂಘರ್ಷದ ಕುರಿತು ಭಾರತದ ನಿಲುವನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ಯುದ್ಧದ ಪ್ರತಿಯೊಂದು ದಿನವೂ ಮಾನವೀಯತೆಯನ್ನು ಹಿಂದುಳಿಯುವಂತೆ ಮಾಡುತ್ತದೆ ಎಂದು ಹೇಳಿದರು. ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಎಲ್ಲ ಪ್ರಯತ್ನಗಳಿಗೆ ಭಾರತ ತನ್ನ ಬೆಂಬಲ ಮುಂದುವರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
“ಅಂತ್ಯವಿಲ್ಲದ ಯುದ್ಧಗಳಿಂದ ಯುದ್ಧದ ಅಂತ್ಯದತ್ತ ನಾವು ಸಾಗಬೇಕು. ಪ್ರತಿದಿನ ಯುದ್ಧ ನಡೆಯುವುದರಿಂದ ಮಾನವೀಯತೆ ಹಿಂದೆ ಸರಿಯುತ್ತದೆ. ಆದರೆ ಶಾಂತಿಯತ್ತ ಇಡುವ ಪ್ರತಿಯೊಂದು ಹೆಜ್ಜೆಯೂ ಮಾನವೀಯತೆಗೆ ಹೊಸ ಭರವಸೆ ಮತ್ತು ಉತ್ಸಾಹ ನೀಡುತ್ತದೆ” ಎಂದು ಮೋದಿ ಹೇಳಿದರು.
ಮಹಾತ್ಮ ಗಾಂಧಿ ಮತ್ತು ಗೌತಮ ಬುದ್ಧರ ನಾಡಿನಿಂದ ತಾವು ಶಾಂತಿಯ ಸಂದೇಶವನ್ನು ಹೊತ್ತು ತಂದಿರುವುದಾಗಿ ಹೇಳಿದ ಮೋದಿ, ಎಲ್ಲ ಸಮಸ್ಯೆಗಳಿಗೆ ಶೀಘ್ರವೇ ಶಾಂತಿಯುತ ಪರಿಹಾರ ಕಂಡುಕೊಳ್ಳುವುದು ಮಾನವೀಯತೆಯ ಅಗತ್ಯ ಎಂದರು.
ನರೇಂದ್ರ ಮೋದಿ-ವ್ಲಾಡಿಮಿರ್ ಪುಟಿನ್ ಮಾತುಕತೆ:
ಸಭೆಯ ಆರಂಭದಲ್ಲಿ ಮೋದಿ ಪುಟಿನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿ ಹಸ್ತಲಾಘವ ಹಾಗೂ ಅಪ್ಪುಗೆಯ ಮೂಲಕ ಬರಮಾಡಿಕೊಂಡರು. “ನನ್ನ ಸ್ನೇಹಿತ, ನಿಮ್ಮನ್ನು ಭೇಟಿಯಾಗುತ್ತಿರುವುದು ನನಗೆ ಸಂತೋಷವಾಗಿದೆ” ಎಂದು ಮೋದಿ ಹೇಳಿದರು.
ಜಾತಿವಾದಿ ಹೇಳಿಕೆ ಆರೋಪ: ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್
ಕಳೆದ ಬಾರಿ ದೆಹಲಿಯಲ್ಲಿ ನಡೆದ ಪುಟಿನ್ ಅವರ ಭಾರತ ಭೇಟಿಯು ಯಶಸ್ವಿಯಾಗಿದ್ದು, ಉಭಯ ದೇಶಗಳ ಆರ್ಥಿಕ ಸಂಬಂಧಗಳಿಗೆ ಹೊಸ ವೇಗ ನೀಡಿದೆ ಎಂದು ಮೋದಿ ಹೇಳಿದರು. ದೆಹಲಿ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಷ್ಠಾನಕ್ಕಾಗಿ ಎರಡೂ ದೇಶಗಳ ಅಧಿಕಾರಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ರಷ್ಯಾ–ಭಾರತ ಸಂಬಂಧಗಳು ಮತ್ತಷ್ಟು ಬಲಗೊಳ್ಳುತ್ತಿವೆ ಎಂದು ಪುಟಿನ್ ಹೇಳಿದರು. ಇದಕ್ಕೆ ಪ್ರಧಾನಿ ಮೋದಿಯವರ ವೈಯಕ್ತಿಕ ಗಮನವೂ ಪ್ರಮುಖ ಕಾರಣವಾಗಿದೆ ಎಂದು ಅವರು ತಿಳಿಸಿದರು. 2025ರಲ್ಲಿ ಉಭಯ ದೇಶಗಳ ನಡುವಿನ ಪ್ರವಾಸಿಗರ ವಿನಿಮಯ ಶೇ.16ರಷ್ಟು ಏರಿಕೆಯಾಗಿದೆ.
ಮುಂಬರುವ ವಾರದಲ್ಲಿ ನಡೆಯಲಿರುವ ವಾರ್ಷಿಕ BRICS ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪುಟಿನ್ ಭಾರತಕ್ಕೆ ಭೇಟಿ ನೀಡಲಿದ್ದು, ಅವರ ಆಗಮನವನ್ನು ಭಾರತೀಯರು ಕಾತರದಿಂದ ಎದುರು ನೋಡುತ್ತಿದ್ದಾರೆ ಎಂದು ಮೋದಿ ಹೇಳಿದರು.
ಸಭೆಯ ಬಳಿಕ ಮೋದಿ ಅವರು ಪುಟಿನ್ ಜತೆಗಿನ ಮಾತುಕತೆಯ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡರು. ಬಿಷ್ಕೆಕ್‌ನಲ್ಲೂ ಮೋದಿ–ಪುಟಿನ್ ಅವರ ‘ಕಾರ್ ಡಿಪ್ಲೊಮಸಿ’ ಮುಂದುವರಿಯಿತು. ಕಳೆದ ವರ್ಷ ಚೀನಾದ ಟಿಯಾಂಜಿನ್‌ನಲ್ಲಿ ನಡೆದ SCO ಶೃಂಗಸಭೆಯ ವೇಳೆ ಇಬ್ಬರೂ ನಾಯಕರು ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸಿದ್ದ ರೀತಿಯಲ್ಲೇ, ಬಿಷ್ಕೆಕ್‌ನಲ್ಲಿ ವಿಶ್ವ ನೊಮಾಡ್ ಗೇಮ್ಸ್ ವೀಕ್ಷಿಸಲು ಇಬ್ಬರೂ ನಾಯಕರು ಒಂದೇ ಕಾರಿನಲ್ಲಿ ಪ್ರಯಾಣಿಸಿದರು.