ಟೆಹರಾನ್, ಅ. 24: ಇರಾನ್ನ ಸುಪ್ರೀಂ ನಾಯಕ ಮೊಜ್ತಬಾ ಖಮೇನಿ (Mojtaba Khamenei) ಆರೋಗ್ಯದ ಕುರಿತು ಹಲವು ದಿನಗಳಿಂದ ವ್ಯಕ್ತವಾಗುತ್ತಿದ್ದ ಅನುಮಾನಗಳಿಗೆ ಇರಾನ್ನ ಹಿರಿಯ ರಾಜತಾಂತ್ರಿಕ ಅಬ್ದುಲ್ ಮಜೀದ್ ಹಕೀಮ್ ಇಲಾಹಿ (Abdul Majid Hakeem Ilahi) ಸ್ಪಷ್ಟನೆ ನೀಡಿದ್ದಾರೆ. ಮೊಜ್ತಬಾ ಖಮೇನಿ ಕಳೆದ ವಾರ ಇರಾನ್ ಅಧ್ಯಕ್ಷರೊಂದಿಗೆ ಬರೋಬ್ಬರಿ ಏಳು ಗಂಟೆಗಳ ಕಾಲ ಸಭೆ ನಡೆಸಿದ್ದು, ಉತ್ತಮ ಆರೋಗ್ಯದಲ್ಲಿದ್ದಾರೆ ಎಂದು ಅವರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಎಂಟು ತಿಂಗಳ ಹಿಂದೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಗಾಯಗೊಂಡ ಬಳಿಕ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಈ ದಾಳಿಯಲ್ಲಿ ಅವರ ತಂದೆ ಹಾಗೂ ಇರಾನ್ನ ಹಿಂದಿನ ಸುಪ್ರೀಂ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಬಳಿಕ ಮೊಜ್ತಬಾ ಖಮೇನಿ ಅವರನ್ನು ದೇಶದ ನೂತನ ಸುಪ್ರೀಂ ನಾಯಕನಾಗಿ ನೇಮಿಸಲಾಗಿತ್ತು.
ಆದರೆ ಅಧಿಕಾರ ಸ್ವೀಕರಿಸಿದ ನಂತರ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಕೇವಲ ಲಿಖಿತ ಹೇಳಿಕೆಗಳ ಮೂಲಕವೇ ಸಂವಹನ ನಡೆಸುತ್ತಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿತ್ತು. ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲೂ ಅವರು ಭಾಗವಹಿಸಿರಲಿಲ್ಲ ಎಂಬ ವರದಿಗಳು ಅವರ ಆರೋಗ್ಯದ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿದ್ದವು.
ಈ ಕುರಿತು ಮಾತನಾಡಿದ ಅಬ್ದುಲ್ ಮಜೀದ್ ಹಕೀಮ್ ಇಲಾಹಿ, ಮೊಜ್ತಬಾ ಖಮೇನಿ ಅವರ ಆರೋಗ್ಯ ಉತ್ತಮವಾಗಿದೆ. ಅವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇರಾನ್ ಅಧ್ಯಕ್ಷರು ಕಳೆದ ವಾರ ಸುಪ್ರೀಂ ನಾಯಕನೊಂದಿಗೆ ಏಳು ಗಂಟೆಗಳ ಕಾಲ ಸಭೆ ನಡೆಸಿದ್ದಾಗಿ ತಿಳಿಸಿದ್ದಾರೆ. ಸಂಸತ್ತಿನ ಸ್ಪೀಕರ್ ಕೂಡ ಅವರೊಂದಿಗೆ ಹಲವು ಗಂಟೆಗಳ ಕಾಲ ಸಭೆ ನಡೆಸಿರುವುದಾಗಿ ಹೇಳಿದ್ದಾಗಿ ರಾಜತಾಂತ್ರಿಕರು ಉಲ್ಲೇಖಿಸಿದ್ದಾರೆ.
ಮೊಜ್ತಬಾ ಖಮೇನಿ ತಮ್ಮ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಿದ ಇಲಾಹಿ, ಆ ಸಂದರ್ಭದಲ್ಲಿ ತಾವು ಇರಾನ್ನಲ್ಲಿದ್ದೆ ಎಂದು ತಿಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಿಲ್ಲ. ಕೆಲವೊಮ್ಮೆ ರಾತ್ರಿ ವೇಳೆ ಸಾರ್ವಜನಿಕ ಸ್ಥಳಗಳಿಗೂ ಭೇಟಿ ನೀಡುತ್ತಾರೆ ಮತ್ತು ಜನರ ಪ್ರತಿಭಟನೆಗಳಲ್ಲಿಯೂ ಭಾಗವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಲೋಕಭವನದಲ್ಲಿ ಇನ್ನು ಮುಂದೆ ಕೇವಲ ಸಸ್ಯಾಹಾರ; ವಿವಾದ ಎಬ್ಬಿಸಿದ ಕೇರಳಂ ರಾಜ್ಯಪಾಲರ ಹೊಸ ಆದೇಶ
ನೆರಳಿನಿಂದಲೇ ಆಡಳಿತ?
ಇರಾನ್ನ ಅಧಿಕಾರಿಗಳು ಮತ್ತು ಹಿರಿಯ ಮೂಲಗಳ ಪ್ರಕಾರ, ಮೊಜ್ತಬಾ ಖಮೇನಿ ಭದ್ರತಾ ಕಾರಣಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಆಡಳಿತ ನಿರ್ವಹಿಸುತ್ತಿದ್ದಾರೆ. ಗಾಯಗಳಿಂದ ಚೇತರಿಸಿಕೊಳ್ಳುತ್ತಿರುವ ಅವರು, ಪ್ರಮುಖ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸುತ್ತಿದ್ದು, ಪ್ರಮುಖ ವರದಿಗಳನ್ನು ಪರಿಶೀಲಿಸಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜುಲೈನಲ್ಲಿ ಸುಪ್ರೀಂ ನಾಯಕನೊಂದಿಗಿನ ಸಂವಹನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೇಳಿದ್ದರು. ಆದರೆ ಆಗಸ್ಟ್ ಆರಂಭದಲ್ಲಿ ಖಮೇನಿ ಅವರೊಂದಿಗೆ ಸಂಪರ್ಕ ಸಾಧಿಸುವುದು ಬಹಳ ಕಷ್ಟಕರವಾಗಿದೆ ಎಂದು ತಿಳಿಸಿದ್ದರು.
ಇದೇ ವೇಳೆ, ಇರಾನ್ನಲ್ಲಿ ಯಾರು ಆಡಳಿತ ನಡೆಸುತ್ತಿದ್ದಾರೆ ಎಂಬುದೇ ಸ್ಪಷ್ಟವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಇರಾನ್ನ ನಾಯಕತ್ವದ ಹಲವು ಹಂತಗಳು ಯುದ್ಧದಲ್ಲಿ ನಷ್ಟವಾಗಿದ್ದು, ದೇಶದ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ ಎಂದು ಅವರು ಹೇಳಿದ್ದರು.
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ಇರಾನ್ನ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ಆದರೆ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಅಮೆರಿಕದ ಅಧಿಕಾರಿಗಳಿಗೆ ಇರಾನ್ನ ನಾಯಕತ್ವ ಮತ್ತು ನಿರ್ಧಾರ ಪ್ರಕ್ರಿಯೆಯ ಬಗ್ಗೆ ಸಂಪೂರ್ಣ ಅರಿವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮಧ್ಯ ಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಮುಂದುವರಿದಿರುವುದರ ಜತೆಗೆ ಇರಾನ್ ಆರ್ಥಿಕತೆಯೂ ಸಂಕಷ್ಟ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಮೊಜ್ತಬಾ ಖಮೇನಿ ಅವರ ಆರೋಗ್ಯ, ನಾಯಕತ್ವ ಮತ್ತು ಆಡಳಿತದಲ್ಲಿ ಅವರ ಪಾತ್ರದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ ಹೆಚ್ಚಾಗಿದೆ.