ಟೆಹರಾನ್: ಸುಮಾರು 36 ವರ್ಷಗಳ ಕಾಲ ಇರಾನ್ (iran) ಅನ್ನು ಆಳಿದ ಆಯತೊಲ್ಲಾ ಸೈಯದ್ ಅಲಿ ಹುಸೇನಿ ಖಮೇನಿ (Ayatollah Seyed Ali Husseini Khamenei) ಅವರ ಅಂತ್ಯಕ್ರಿಯೆ ಜುಲೈ 4ರಿಂದ ಜುಲೈ 9 ರವರೆಗೆ ನಡೆಯಲಿದೆ. ಇದರಲ್ಲಿ ಅವರ ಪುತ್ರ ಪ್ರಸ್ತುತ ಇರಾನ್ ಸರ್ವೋಚ್ಚ ನಾಯಕರಾಗಿರುವ ಮೊಜ್ತಬಾ ಖಮೇನಿ (Mojtaba Khamenei) ಅವರು ಭದ್ರತೆಯ ಆತಂಕದ ಕಾರಣದಿಂದ ಭಾಗವಹಿಸುವುದಿಲ್ಲ ಎನ್ನಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಆಯತೊಲ್ಲಾ ಸೈಯದ್ ಅಲಿ ಹುಸೇನಿ ಖಮೇನಿ ಅವರನ್ನು ಫೆಬ್ರವರಿ 28ರಂದು ಹತ್ಯೆ ಮಾಡಲಾಗಿದ್ದು, ಬಳಿಕ ಮಧ್ಯಪ್ರಾಚ್ಯದಲ್ಲಿ ಸಂಘರ್ಷದ (Middle East war) ವಾತಾವರಣ ನಿರ್ಮಾಣವಾಗಿದ್ದರಿಂದ ಅಂತ್ಯಕ್ರಿಯೆಯನ್ನು ನಡೆಸಲಾಗಿರಲಿಲ್ಲ.
ಈ ಕುರಿತು ಮಾಹಿತಿ ನೀಡಿರುವ ಭಾರತದಲ್ಲಿನ ಇರಾನ್ ಪ್ರತಿನಿಧಿ ಅಯತೊಲ್ಲಾ ಹಕೀಮ್ ಎಲಾಹಿ, ಬೆದರಿಕೆ, ಶತ್ರು ರಾಷ್ಟ್ರಗಳ ನಿಗಾ, ಸಾರ್ವಜನಿಕ ಸ್ಥಳದಲ್ಲಿ ಭದ್ರತೆ ಅಪಾಯ ಹೆಚ್ಚಾಗಿರುವ ಕಾರಣದಿಂದಾಗಿ ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರು ತಮ್ಮ ತಂದೆ, ಇರಾನ್‌ನ ಮಾಜಿ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಅಲಿ ಖಮೇನಿ ಅವರನ್ನು ಫೆಬ್ರವರಿ 28ರಂದು ಹತ್ಯೆ ಮಾಡಲಾಗಿತ್ತು. ಬಳಿಕ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಲು ಪ್ರಾರಂಭಿಸಿತ್ತು. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಗಿತ್ತು. ಇದೀಗ ಯುದ್ಧದ ಭೀತಿ ಕೊಂಚ ಕಡಿಮೆಯಾಗಿರುವುದರಿಂದ ಮಾಜಿ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆ ಸಮಾರಂಭವನ್ನು ಜುಲೈ 4ರಂದು ಟೆಹ್ರಾನ್‌ನಲ್ಲಿ ಪ್ರಾರಂಭಿಸಿ ವಿವಿಧ ಧಾರ್ಮಿಕ ವಿಧಿವಿಧಾನಗಳ ಮೂಲಕ ಜುಲೈ 9 ರಂದು ಅವರ ಹುಟ್ಟೂರು ಈಶಾನ್ಯ ಪವಿತ್ರ ನಗರವಾದ ಮಶಾದ್‌ನಲ್ಲಿ ಅಂತ್ಯಕ್ರಿಯೆಯೊಂದಿಗೆ ಮುಕ್ತಾಯಗೊಳ್ಳಲಿವೆ ಎಂದು ಅವರು ಹೇಳಿದರು.
ಟೆಹ್ರಾನ್‌ನ ದಕ್ಷಿಣದಲ್ಲಿರುವ ಪವಿತ್ರ ನಗರವಾದ ಕೋಮ್‌ನಲ್ಲಿ ಜುಲೈ 7 ರಂದು ನಡೆಯುವ ಕಾರ್ಯಕ್ರಮಗಳಲ್ಲಿ ವಿಶ್ವದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಈ ಆರು ದಿನಗಳ ಅವಧಿಯಲ್ಲಿ ಲಕ್ಷಾಂತರ ಶೋಕತಪ್ತರು ಬೀದಿಗಿಳಿಯುತ್ತಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಈಗಾಗಲೇ ಖಮೇನಿಯವರ ಅಂತ್ಯಕ್ರಿಯೆ, ವಿದಾಯದ ಅನೇಕ ಪೋಸ್ಟರ್‌ಗಳನ್ನು ದೇಶಾದ್ಯಂತ ಹಾಕಲಾಗಿದೆ. ಇಸ್ಲಾಮಿಕ್ ನ್ಯಾಯಶಾಸ್ತ್ರದ ಪ್ರಕಾರ ಸತ್ತ ವ್ಯಕ್ತಿಯ ಅಂತ್ಯಕ್ರಿಯೆಯನ್ನು 24 ಗಂಟೆಗಳ ಒಳಗೆ ಸಮಾಧಿ ಮಾಡಬೇಕೆಂದು ಹೇಳುತ್ತದೆ. ಆದರೆ ಯುದ್ಧದ ಕಾರಣದಿಂದಾಗಿ ಖಮೇನಿ ಅವರ ಅಂತಿಮ ಕ್ರಿಯೆ ನಡೆಸಲಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಅಲಿ ಖಮೇನಿಯವರ ಅಂತ್ಯಕ್ರಿಯೆಯಲ್ಲಿ ಭಾರತೀಯ ನಿಯೋಗವು ಭಾಗವಹಿಸಲಿದೆ. ಬಿಹಾರ ಗವರ್ನರ್ ಜನರಲ್ ಸೈಯದ್ ಹಸ್ನೈನ್ ಮತ್ತು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪವಿತ್ರಾ ಮಾರ್ಗರಿಟಾ ಅವರು ಇದಕ್ಕಾಗಿ ಇರಾನ್ ಗೆ ತೆರಳಲಿದ್ದಾರೆ. ಇವರೊಂದಿಗೆ ಮಾಜಿ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು ಕಾಂಗ್ರೆಸ್ ಪಕ್ಷದ ಪ್ರತಿನಿಧಿಯಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಕೂಡ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಕೂಡ ಆಹ್ವಾನಿಸಿದ್ದಾರೆ. ಆದರೆ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.