ಮೆಲೋನಿ...ಹೌದು, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ. ಇವರೀಗ ಪ್ರಧಾನಿ ಮೋದಿ ಜತೆಗಿನ ಸ್ನೇಹಮಯ ವಿಡಿಯೊ ಮತ್ತು ಫೋಟೊಗಳಿಂದಾಗಿ ಜಾಗತಿಕ ಸುದ್ದಿಯಲ್ಲಿದ್ದಾರೆ. ಈ ಸುಂದರಿಯ ನಗುಮೊಗದ ಹಿಂದೆ ಕಡು ಕಷ್ಟಗಳ, ತೀವ್ರ ನೋವಿನ ಕತೆ ಇದೆ. ಬದುಕಿನಲ್ಲಿ ಎದುರಾಗುವ ಎಲ್ಲ ಸಂಕಟಗಳನ್ನು ಎದುರಿಸಿ ಹೇಗೆ ತಲೆ ಎತ್ತಿ ನಿಲ್ಲಬಹುದು ಎಂಬ ಸ್ಫೂರ್ತಿಯ ಪಾಠವೂ ಇದೆ (Giorgia Meloni Life Story).
ಕಾಡಿ ಪೀಡಿಸಿದ ಬಡತನ, ಡ್ರಗ್ ಸ್ಮಗ್ಲರ್ ಅಪ್ಪ, ಬೆಂಕಿಯಿಂದ ಬೂದಿಯಾದ ಮನೆ, ಬೀದಿಗೆ ಬಿದ್ದ ಕುಟುಂಬ, ನೈಟ್‌ಕ್ಲಬ್‌ನ ಬಾರ್ ಕೌಂಟರ್ ಕೆಲಸ, ಒಡೆದ ಸಂಸಾರ... ಹೀಗೆ ಮೆಲೋನಿ ಜೀವನದಲ್ಲಿ ಎದುರಿಸಿದ ಸಂಕಟಗಳು ಒಂದೆರಡಲ್ಲ. ಆದರೆ ಯಾವುದೇ ಗಾಡ್ ಫಾದರ್‌ಗಳ ಕೃಪೆ ಇಲ್ಲದೆ, ಸ್ವಯಂ ಹೋರಾಟದಿಂದ ಸ್ವಂತ ಪಕ್ಷ ಕಟ್ಟಿ ಗೆದ್ದು ಇವತ್ತು ಇಟಲಿ ಪ್ರಧಾನಿಯಾಗಿ ಜನಪ್ರಿಯರಾಗಿದ್ದಾರೆ.
ಹುಟ್ಟುವ ಮುನ್ನವೇ ಕಠಿಣ ಸವಾಲು
ಮೆಲೋನಿ ಅವರ ಹೋರಾಟವು ಅವರು ಜನಿಸುವ ಮುನ್ನವೇ ಆರಂಭವಾಗಿತ್ತು. ಅವರು ತಮ್ಮ ಆತ್ಮಕಥೆಯಾದ ʼಇಯೋ ಸೋನೊ ಜಾರ್ಜಿಯಾʼ ಅಂದರೆ ʼನಾನು ಜಾರ್ಜಿಯಾʼ ಪುಸ್ತಕದಲ್ಲಿ ಈ ಬಗ್ಗೆ ಸವಿಸ್ತಾರವಾಗಿ ಬರೆದಿದ್ದಾರೆ. ಅವರ ತಾಯಿ ಅನ್ನಾ ಗರ್ಭಪಾತ ಮಾಡಿಸಿಕೊಳ್ಳಲು ಕ್ಲಿನಿಕ್‌ಗೆ ಹೋಗಿದ್ದರಂತೆ. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ನಿರ್ಧಾರ ಬದಲಿಸಿಕೊಂಡು ಮನೆಗೆ ವಾಪಸಾದರಂತೆ. ಅಂದು ಆ ತಾಯಿ ಗರ್ಭಪಾತ ಮಾಡಿಕೊಂಡಿದ್ದರೆ ಈ ಮೆಲೊನಿ ಹುಟ್ಟುತ್ತಲೇ ಇರಲಿಲ್ಲ.

ತಂದೆ ಫ್ರಾನ್ಸೆಸ್ಕೊ ತೆರಿಗೆ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು. ತಾಯಿ ಕಾದಂಬರಿಗಾರ್ತಿಯಾಗಿದ್ದರು. ಆದರೆ ಜಾರ್ಜಿಯಾಗೆ ಕೇವಲ ಒಂದು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ಕುಟುಂಬವನ್ನು ತೊರೆದು ಬೇರೆ ಮದುವೆಯಾದರು. ಮುಂದೆ ಅವರು ಡ್ರಗ್ಸ್ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಿಲುಕಿ ಜೈಲು ಪಾಲಾಗಿ ಸತ್ತು ಹೋದರು. ಜಾರ್ಜಿಯಾ ಅವರ ತಾಯಿ ಅನ್ನಾ ಅವರೊಬ್ಬರೇ ಇಬ್ಬರು ಹೆಣ್ಣು ಮಕ್ಕಳನ್ನು ಬೆಳೆಸಬೇಕಾಯಿತು.
ಮಕ್ಕಳಾಟಕ್ಕೆ ಮನೆಯೇ ಭಸ್ಮ
ಜಾರ್ಜಿಯಾಗೆ ಆಗ ಮೂರು ವರ್ಷ. ಅವರು ಮತ್ತು ಅಕ್ಕ ಅರಿಯಾನಾ ಜತೆ ಮನೆಯಲ್ಲಿ ಆಟವಾಡುತ್ತಿದ್ದರು. ಮೇಣದಬತ್ತಿಗಳನ್ನು ಹಚ್ಚಿದ್ದರು. ತಮಾಷೆಗಾಗಿ ಆ ಮೇಣದಬತ್ತಿಗಳನ್ನು ಬೆಡ್‌ಶೀಟ್‌ಗಳು ಮತ್ತು ಆಟಿಕೆಗಳಿಂದ ಮುಚ್ಚಿಟ್ಟರು. ಇದರಿಂದಾಗಿ ಇಡೀ ಕೋಣೆಗೆ ಬೆಂಕಿ ಹೊತ್ತಿಕೊಂಡು ಮನೆ ಪೂರ್ತಿ ಭಸ್ಮವಾಯಿತು. ಕೆಲಕಾಲ, ಜಾರ್ಜಿಯಾ ಮತ್ತು ಅವರ ಅಕ್ಕ ಅಜ್ಜಿಯ ಮನೆಯಲ್ಲಿ ಇರಬೇಕಾಯಿತು. ಅದು ಅವರ ಜೀವನದ ಅತ್ಯಂತ ಕಠಿಣ ಮತ್ತು ಅಸ್ಥಿರವಾದ ಸಮಯವಾಗಿತ್ತು.
ಬದುಕಲು ಬಾರ್ ಟೆಂಡರ್ ಕೆಲಸ
ಹದಿಹರೆಯಕ್ಕೆ ಬಂದಾಗ ಮೆಲೋನಿಗೆ ತಮ್ಮ ಕುಟುಂಬದಲ್ಲಿ ಕಾಲೇಜು ಶಿಕ್ಷಣಕ್ಕೆ ಹಣವಿಲ್ಲ ಎಂಬ ಸತ್ಯ ಮನವರಿಕೆಯಾಯಿತು. ಹೀಗಾಗಿ ಜಾರ್ಜಿಯಾ ಕೆಲಸ ಮಾಡಲು ಪ್ರಾರಂಭಿಸಿದರು. ಸಿ.ಡಿ.ಗಳನ್ನು ಮಾರಿದರು. ಬೇಬಿ ಸಿಟ್ಟರ್ ಆಗಿ ಕೆಲಸ ಮಾಡಿದರು. ರೋಮ್‌ನ ಪ್ರಸಿದ್ಧ ನೈಟ್‌ಕ್ಲಬ್ ಒಂದರಲ್ಲಿ ಬಾರ್ ಟೆಂಡರ್ ಆಗಿ ಕೆಲಸಕ್ಕೆ ಸೇರಿದರು. ಆ ಕಠಿಣ ದಿನಗಳು ಮೆಲೊನಿ ಅವರನ್ನು ಒಬ್ಬ ಹೋರಾಟಗಾರ್ತಿಯನ್ನಾಗಿ ರೂಪಿಸಿದವು.
15ನೇ ವಯಸ್ಸಿನಲ್ಲಿ ರಾಜಕೀಯ ಪ್ರವೇಶ
ಮೆಲೋನಿ ಅವರು ಕೇವಲ 15 ವರ್ಷದವರಿದ್ದಾಗ 'ಇಟಾಲಿಯನ್ ಸೋಶಿಯಲ್ ಮೂವ್‌ಮೆಂಟ್' ಎಂಬ ರಾಜಕೀಯ ಪಕ್ಷ ಸೇರಿದರು. ಈ ಪಕ್ಷವನ್ನು 1945ರವರೆಗೆ ಇಟಲಿಯನ್ನು ಆಳಿದ ಸರ್ವಾಧಿಕಾರಿ ಬೆನಿಟೊ ಮುಸ್ಸೋಲಿನಿಯ ಬೆಂಬಲಿಗರು ಸ್ಥಾಪಿಸಿದ್ದರು. 1992ರಲ್ಲಿ ಇಟಾಲಿಯನ್ ಮಾಫಿಯಾ ಗ್ಯಾಂಗ್ ನ್ಯಾಯಾಧೀಶ ಪಾವೊಲೊ ಬೊರ್ಸೆಲಿನೊ ಅವರನ್ನು ಭೀಕರವಾಗಿ ಕೊಂದು ಹಾಕಿದ ಘಟನೆ ಅವರಿಗೆ ರಾಜಕೀಯಕ್ಕೆ ಬರಲು ಪ್ರೇರೇಪಿಸಿತ್ತು.
ಅತ್ಯಂತ ಕಿರಿಯ ವಯಸ್ಸಿನ ಮಂತ್ರಿ
ಮೆಲೋನಿ ಹಂತಹಂತವಾಗಿ ರಾಜಕೀಯದಲ್ಲಿ ಬೆಳೆದರು. 2004ರಲ್ಲಿ ತಮ್ಮ 27ನೇ ವಯಸ್ಸಿನಲ್ಲಿ 'ನ್ಯಾಷನಲ್ ಅಲಯನ್ಸ್' ಪಕ್ಷದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾದರು. ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಇವರಾಗಿದ್ದರು. 2006ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಎರಡು ವರ್ಷಗಳ ನಂತರ, ಅಂದರೆ 2008ರಲ್ಲಿ, ಇಟಲಿಯ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿನ ಕ್ಯಾಬಿನೆಟ್ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೊಡಿʼ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ
ಸ್ವಂತ ರಾಜಕೀಯ ಪಕ್ಷ ಸ್ಥಾಪನೆ
2012ರಲ್ಲಿ ಮಾಜಿ ಪ್ರಧಾನಿ ಸಿಲ್ವಿಯೋ ಬೆರ್ಲುಸ್ಕೋನಿ ಅವರೊಂದಿಗೆ ಪಕ್ಷದ ನಾಯಕತ್ವದ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಆ ಒಕ್ಕೂಟದಿಂದ ಹೊರಬಂದರು. ಹೊಸ ಪಕ್ಷವನ್ನು ಸ್ಥಾಪಿಸಿದರು. ಅದಕ್ಕೆ ಇಟಲಿಯ ರಾಷ್ಟ್ರಗೀತೆಯ ಮೊದಲ ಸಾಲಾದ "ಫ್ರಾಟೆಲ್ಲಿ ಡಿ ಇಟಾಲಿಯಾ" ಎಂದು ಹೆಸರಿಟ್ಟರು. 2018ರ ಚುನಾವಣೆಯಲ್ಲಿ ಇದು ಕೇವಲ 4.4% ಮತಗಳನ್ನು ಪಡೆದಿತ್ತು. ಆದರೆ 2022ರಲ್ಲಿ ಈ ಪಕ್ಷವು 26% ಮತಗಳನ್ನು ಪಡೆಯುವ ಮೂಲಕ ಇಟಲಿಯ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಕ್ಟೋಬರ್ 22, 2022ರಂದು ಮೆಲೋನಿ ಇಟಲಿಯ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆ ಮೂಲಕ ಇಟಲಿಯ 161 ವರ್ಷಗಳ ಇತಿಹಾಸದಲ್ಲಿ ಮೊದಲ ಮಹಿಳಾ ಪ್ರಧಾನಿಯಾದರು.

ಲಿವ್ ಇನ್ ಸಂಬಂಧ!
ಮೆಲೋನಿ 2015ರಿಂದ 2023ರವರೆಗೆ ಟಿವಿ ಪತ್ರಕರ್ತ ಆಂಡ್ರಿಯಾ ಗಿಯಾಂಬ್ರುನೊ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಈ ದಂಪತಿಗೆ 2016ರಲ್ಲಿ ಜಿನೆವ್ರಾ ಎಂಬ ಮಗಳು ಜನಿಸಿದಳು. 2023ರ ಅಕ್ಟೋಬರ್‌ನಲ್ಲಿ ಮೆಲೋನಿ ತಾವು ಆ ಸಂಬಂಧವನ್ನು ಕೊನೆಗೊಳಿಸುತ್ತಿರುವುದಾಗಿ ಘೋಷಿಸಿದರು.
ಇಟಲಿ ಅಸ್ಥಿರ ಸರ್ಕಾರಗಳಿಗೆ ಹೆಸರುವಾಸಿ. 1948ರಿಂದ ಇಟಲಿ 68 ವಿಭಿನ್ನ ಸರ್ಕಾರಗಳನ್ನು ಕಂಡಿದೆ. ಅಲ್ಲಿ ಒಂದು ಸರ್ಕಾರದ ಸರಾಸರಿ ಆಡಳಿತ ಅವಧಿ ಕೇವಲ 16 ತಿಂಗಳು ಮಾತ್ರ. ಆದರೆ ಮೆಲೋನಿ ಇಟಲಿಯ ಇತಿಹಾಸದಲ್ಲಿ ಮೂರನೇ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನಮಂತ್ರಿಯಾಗಿದ್ದಾರೆ.
ತಾಯಿಯ ಗರ್ಭಪಾತದ ಅಂಚಿನಿಂದ ಬದುಕುಳಿದ ಮಗು ಮೆಲೊನಿ, ಮನೆ ಭಸ್ಮವಾಗಿ ಬೀದಿಗೆ ಬಿದ್ದ ಮೆಲೊನಿ, ನೈಟ್‌ಕ್ಲಬ್ ನಲ್ಲಿ ಮದ್ಯ ಸರಬರಾಜು ಮಾಡುತ್ತಿದ್ದ ಮೆಲೊನಿ ಕೊನೆಗೆ ಇಟಲಿಯ ಅತ್ಯುನ್ನತ ನಾಯಕಿಯಾಗಿ ಬೆಳೆದ ಕಥೆ ಸ್ಫೂರ್ತಿದಾಯಕ.