ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಾರುಖ್‌ ಖಾನ್‌, ಅಮಿತಾಭ್‌ ಬಚ್ಚನ್‌ನಂತಹ ಜನಪ್ರಿಯ ಸ್ಟಾರ್‌ಗಳ ಸಹಾಯವಿಲ್ಲದೆ ಜಾಗತಿಕವಾಗಿ ಪ್ರಚಾರ ಗಿಟ್ಟಿಸಿಕೊಂಡ ಮೆಲೋಡಿ ಚಾಕೊಲೇಟ್‌; ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಆಗಿದ್ದೇಗೆ?

Narendra Modi: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ʼಮೆಲೋಡಿʼ ಚಾಕೊಲೇಟ್‌ ಪ್ಯಾಕ್‌ ಉಡುಗೊರೆಯಾಗಿ ನೀಡಿರುವ ವಿಡಿಯೊ ಸದ್ಯ ವೈರಲ್‌ ಆಗಿದೆ. ಕೆಲವೇ ಸೆಕೆಂಡ್‌ ಈ ವಿಡಿಯೊ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ʼಮೆಲೋಡಿʼ ಚಾಕೊಲೇಟ್‌ ಭಾರಿ ಬೇಡಿಕೆ ಸೃಷ್ಟಿಯಾಗಿದೆ.

ಸೋಷಿಯಲ್‌ ಮೀಡಿಯಾದಲ್ಲಿ ಮೆಲೋಡಿ ಚಾಕೊಲೇಟ್‌ ಟ್ರೆಂಡ್‌ ಆಗಿದ್ದೇಗೆ?

ನರೇಂದ್ರ ಮೋದಿ ಮತ್ತು ಜಾರ್ಜಿಯಾ ಮೆಲೊನಿ -

Ramesh Ballamoole
Ramesh Ballamoole May 20, 2026 6:42 PM

ದೆಹಲಿ, ಮೇ 20: ಕೆಲವೊಮ್ಮೆ ಸೆಲೆಬ್ರಿಟಿಗಳ ಕೆಲವು ಸೆಕೆಂಡ್‌ಗಳಷ್ಟು ಅಲ್ಪಾವಧಿ ಹೊಂದಿರುವ ನಡವಳಿಕೆ, ಕ್ಷಣ ಇಂಟರ್‌ನೆಟ್‌ನಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಡುತ್ತವೆ. ಜತೆಗೆ ಮಾರುಕಟ್ಟೆಯ ಏರಿಳಿತಕ್ಕೂ ಕಾರಣವಾಗುತ್ತವೆ. ಅಕ್ಕೆ ಉದಾಹರಣೆ ಎಂಬಂತೆ 2021ರಲ್ಲಿ ವಿಶ್ವದ ಸ್ಟಾರ್‌ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಯುರೋಪಿಯನ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಸುದ್ದಿಗೋಷ್ಠಿಯಲ್ಲಿ ಕೊಕಾ-ಕೋಲಾ ಬಾಟಲ್‌ಗಳನ್ನು ದೂರಕ್ಕೆ ತಳ್ಳಿದ ಪರಿಣಾಮ ಪಾನೀಯ ದೈತ್ಯ ಸಂಸ್ಥೆಯು 4 ಬಿಲಿಯನ್‌ ಪ್ರಮಾಣದಷ್ಟು ಶೇರ್‌ ಮೌಲ್ಯ ಕಳೆದುಕೊಂಡಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ವೈರಲ್‌ ವಿಡಿಯೊದಿಂದ ʼಮೆಲೋಡಿʼ (Melody) ಚಾಕೊಲೇಟ್‌ ಕಂಪನಿ ಒಂದೇ ದಿನದಲ್ಲಿ ಜಾಗತಿಕವಾಗಿ ಸದ್ದು ಮಾಡುತ್ತಿದೆ. ಅಚ್ಚರಿ ಎಂದರೆ ಒಂದೇ ಒಂದು ರುಪಾಯಿ ಫೀಸ್‌ ಪಡೆಯದೆ ಮೋದಿ ʼಮೆಲೋಡಿʼ ಚಾಕೊಲೇಟ್‌ ಬ್ರ್ಯಾಂಡ್‌ ಅನ್ನು ವಿಶ್ವಕ್ಕೆ ಪರಿಚಯಿಸಿದ್ದಾರೆ.

ಇಟಲಿ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ʼಮೆಲೋಡಿʼ ಚಾಕೊಲೇಟ್‌ ಪ್ಯಾಕ್‌ ಅನ್ನು ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೊವನ್ನು ಜಾರ್ಜಿಯಾ ಮೆಲೊನಿ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕ್ಷಣಾರ್ಧದಲ್ಲಿ ಈ ವಿಡಿಯೊ ವೈರಲ್‌ ಅಗಿದ್ದಲ್ಲದೆ ಮೆಲೋಡಿ ಚಾಕೊಲೇಟ್‌ ಭಾರಿ ಜನಪ್ರಿಯವಾಗಿದೆ. ನೆಟ್ಟಿಗರು ಮೆಲೋಡಿ ಚಾಕೊಲೇಟ್‌ ಬಗ್ಗೆ ಹುಡುಕಾಡಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ಬ್ಲಿಂಕ್‌ಇಟ್‌ನಂತಹ ಕೆಲವು ಆನ್‌ಲೈನ್‌ ಆ್ಯಪ್‌ಗಳಲ್ಲಿ ಮೆಲೋಡಿ ಸೋಲ್ಡ್‌ ಔಟ್‌ ಆಗಿದೆ.

ಮುಂಬೈ ಮೂಲದ ಪಾರ್ಲೆ ಪ್ರಾಡಕ್ಟ್ಸ್‌ ಮೆಲೋಡಿ ಚಾಕೊಲೇಟ್‌ ಉತ್ಪಾದಿಸುತ್ತಿದೆ. ಹೀಗಾಗಿ ಸದ್ಯ ಪಾರ್ಲೆ ಕೂಡ ಟ್ರೆಂಡಿಂಗ್‌ನಲ್ಲಿದೆ. ಮೋದಿ ಮತ್ತು ಜಾರ್ಜಿಯಾ ಎಕ್ಸ್‌ ಮತ್ತುಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿಯಾಗಿ ಸುಮಾರು 21 ಕೋಟಿ ಫಾಲೋವರ್ಸ್‌ ಹೊಂದಿದ್ದಾರೆ. ಹೀಗಾಗಿ ಜಾಗತಿಕ ವೇದಿಕೆಯಲ್ಲಿ ಉಚಿತವಾಗಿ ಚಾಕೊಲೇಟ್‌ಗೆ ಪ್ರಚಾರ ಸಿಕ್ಕಂತಾಗಿದೆ.

ವೈರಲ್‌ ವಿಡಿಯೊ:



ಪಾರ್ಲೆ ಪ್ರಾಡಕ್ಟ್ಸ್‌ನ ಇತಿಹಾಸ

ಪಾರ್ಲೆ ಪ್ರಾಡಕ್ಟ್ಸ್‌ ಕಂಪನಿಗೆ ದಶಕಗಳ ಇತಿಹಾಸವಿದೆ. ಇದನ್ನು 1929ರಲ್ಲಿ ಮೋಹನ್‌ಲಾಲ್‌ ಚೌಹಾಣ್‌ ಮಹಾರಾಷ್ಟ್ರದ ಮುಂಬೈಯ ವಿಲೆ ಪಾರ್ಲೆಯಲ್ಲಿ ಆರಂಭಿಸಿದರು. ಕಂಪನಿಯು ಪಾರ್ಲೆ ಗ್ಲುಕೋ ಬಿಸ್ಕೆಟ್‌ ಉತ್ಪದಿಸುವ ಮೊದಲು ಚಾಕೊಲೇಟ್‌ ತಯಾರಿಕೆ ಪ್ರಾರಂಭಿಸಿತು. 1939ರಲ್ಲಿ ಪಾರ್ಲೆ-ಜಿ ಆಗಿ ಮಾರ್ಪಟ್ಟಿತು. ಬಳಿಕ ಇದು ಇದು ಬಿಸ್ಕೆಟ್‌ ಮತ್ತು ಕ್ಯಾಂಡಿಯ ಉತ್ಪಾದನೆಯ ದೈತ್ಯ ಕಂಪನಿಯಾಗಿ ಬೆಳೆಯಿತು. ಪಾರ್ಲೆ-ಜಿ ವಿಶ್ವದ ಅತ್ಯುತ್ತಮ ಬಿಸ್ಕೆಟ್‌ ಬ್ರ್ಯಾಂಡ್‌ ಆಗಿ ಬದಲಾಯಿತು.

ʼಮೆಲೋಡಿʼ ಚಾಕೊಲೇಟ್ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಉತ್ತುಂಗಕ್ಕೆ ಏರಿದ ರಿಯಲ್ ಎಸ್ಟೇಟ್ ಕಂಪನಿ ಪಾರ್ಲೆ ಇಂಡಸ್ಟ್ರೀಸ್‌ನ ಷೇರು

1970ರ ದಶಕದಲ್ಲಿ ಚೌಹಾಣ್ ಕುಟುಂಬವು ವ್ಯವಹಾರವನ್ನು ಶಾಖೆಗಳಾಗಿ ವಿಭಜಿಸಿ, 3 ವಿಭಿನ್ನ ಘಟಕಗಳನ್ನು ರಚಿಸಿತು. ಅವು ಇನ್ನೂ ಪಾರ್ಲೆ ಹೆಸರನ್ನು ಹೊಂದಿವೆ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ. ಮೊದಲನೆಯದು ಪಾರ್ಲೆ ಪ್ರಾಡಕ್ಟ್ಸ್ ಬಿಸ್ಕೆಟ್‌ ಮತ್ತು ಚಾಕೊಲೇಟ್‌ ದೈತ್ಯವಾಗಿ ಬೆಳೆದಿದೆ. ಅದು ಮೆಲೋಡಿ ಚಾಕೊಲೇಟ್‌ ತಯಾರಿಸುತ್ತಿದೆ. ಪಾರ್ಲೆ-ಜಿ ಹೊರತುಪಡಿಸಿ, ಇದು ಮೊನಾಕೊ, ಕ್ರಾಕ್‌ಜಾಕ್ ಮತ್ತು ಹೈಡ್ & ಸೀಕ್‌ನಂತಹ ಜನಪ್ರಿಯ ಬಿಸ್ಕೆಟ್‌ ಉತ್ಪಾದಿಸುತ್ತಿದೆ.

ಪಾರ್ಲೆ-ಜಿ ಬಿಸ್ಕೆಟ್‌ ಬ್ರ್ಯಾಂಡ್‌ ಎಷ್ಟು ಪ್ರಸಿದ್ಧವಾಗಿವೆಯೆಂದರೆ, ಕೋವಿಡ್-19ರ ಲಾಕ್‌ಡೌನ್ ಸಮಯದಲ್ಲಿ ಇದು ಪ್ರಮುಖ ಆಹಾರ ಪದಾರ್ಥವಾಗಿ ಬದಲಾಗಿತ್ತು. ಇದರ ಕಡಿಮೆ ಬೆಲೆ ಬಡವರ ಪಾಲಿಗೆ ಸಂಜೀವಿನಿ ಎನಿಸಿಕೊಂಡಿತ್ತು. ವಲಸೆ ಕಾರ್ಮಿಕರು ದೀರ್ಘ ಸಮಯದ ಕಾಲ್ನಡಿಗೆಗೆ ಇದನ್ನೇ ಅಶ್ರಯಿಸಿದ್ದರು. ಸರ್ಕಾರಿ ಸಂಸ್ಥೆಗಳು ಮತ್ತು ಎನ್‌ಜಿಒಗಳು ಲಕ್ಷಾಂತರ ಪ್ಯಾಕೆಟ್‌ಗಳನ್ನು ಪಾರ್ಲೆ-ಜಿ ಬಿಸ್ಕೆಟ್‌ ವಿತರಿಸಿದ್ದವು.

ಪಾರ್ಲೆ ಕಂಪನಿಯ ಭಾಗವಾಗಿರುವ ಫ್ರೂಟಿ ಮತ್ತು ಅಪ್ಪಿಯಂತಹ ತಂಪು ಪಾನೀಯ ತಯಾರಿಸುವ ಪಾರ್ಲೆ ಆಗ್ರೋ ಮತ್ತು ಬಾಟಲ್ ನೀರು ಉತ್ಪಾದಿಸುವ ಪಾರ್ಲೆ ಬಿಸ್ಲೆರಿ ಕೂಡ ಇಂದು ಜನಪ್ರಿಯ. ಪಾರ್ಲೆ ಪ್ರಾಡಕ್ಟ್ಸ್ ಉಪಾಧ್ಯಕ್ಷ ಮತ್ತು ಸಿಎಂಒ ಮಾಯಾಂಕ್ ಶಾ ಮಾತನಾಡಿ, ʼʼಭಾರತೀಯ ಉತ್ಪನ್ನಗಳನ್ನು ಉತ್ತೇಜಿಸಲು ಮತ್ತು ಜಾಗತಿಕ ವೇದಿಕೆಯಲ್ಲಿ ಪರಿಚಯಿಸಲು ಇದು ಉತ್ತಮ ಮಾರ್ಗ" ಎಂದು ಹೇಳಿದ್ದಾರೆ. ಮುಂಬರುವ ದಿನಗಳಲ್ಲಿ ಚಾಕೊಲೇಟ್‌ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ.

ಉಚಿತ ಪ್ರಚಾರ

ಶಾರುಖ್ ಖಾನ್ ಮತ್ತು ಅಮಿತಾಭ್‌ ಬಚ್ಚನ್ ಅವರಂತಹ ಮೆಗಾ ಸ್ಟಾರ್‌ಗಳು ಪ್ರತಿ ಜಾಹೀರಾತಿಗೆ 5–15 ಕೋಟಿ ರುಪಾಯಿ ಚಾರ್ಜ್‌ ಮಾಡುತ್ತಾರೆ. ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಜಾಗತಿಕ ಐಕಾನ್‌ಗಳು ಜಾಹೀರಾತಿಗೆ 100–200 ಕೋಟಿ ರುಪಾಯಿಗಳವರೆಗೆ ಶುಲ್ಕ ವಿಧಿಸುತ್ತಾರೆ. ಅಂತಹ ತಾರೆಯರ ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಹತ್ತಾರು ಕೋಟಿ ರುಪಾಯಿ ಖರ್ಚಾಗುತ್ತವೆ. ಅದ್ಯಾವುದರ ಹಂಗೂ ಇಲ್ಲದೆ ಇದೀಗ ಪಾರ್ಲೆ ಪ್ರಾಡಕ್ಟ್ಸ್‌ನ ಮೆಲೋಡಿ ಚಾಕೊಲೇಟ್‌ ಅನ್ನು ವಿಶ್ವ ನಾಯಕರಿಬ್ಬರು ಜಾಗತಿಕವಾಗಿ ಪ್ರಚಾರ ಮಾಡಿದ್ದಾರೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೊಡಿʼ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ

ಈ ಬ್ರ್ಯಾಂಡ್ ಈಗಾಗಲೇ 100ಕ್ಕೂ ಹೆಚ್ಚು ದೇಶಗಳನ್ನು ತಲುಪಿದೆ. ಇದೀಗ ಯುರೋಪ್ ಮತ್ತು ಇತರ ದೇಶಗಳಿಗೆ ಪರಿಚಯವಾಗಿದೆ. ಮುಂಬೈಯ ಪಾರ್ಲೆಯ ಬೀದಿಯಲ್ಲಿ ಆರಂಭವಾಗಿರುವ ಉತ್ಪನ್ನವನ್ನು ಪುಟ್ಟ ವಿಡಿಯೊವೊಂದು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿರುವುದು ಸೋಷಿಯಲ್‌ ಮೀಡಿಯಾಕ್ಕಿರುವ ಅಪಾರ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.