ಕಠ್ಮಂಡು, ಆ. 27: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಲ್ಲಿ (Nepal Floods) ಕನಿಷ್ಠ 359 ಜನರು ಮೃತಪಟ್ಟಿದ್ದು, 1,300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬುಧವಾರ (ಆಗಸ್ಟ್ 27) ಬೆಳಗ್ಗೆ 9 ಗಂಟೆಗೆ ಭೋಟೆಕೋಶಿ ನದಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ನೇಪಾಳದ ಮೂರು ಜಿಲ್ಲೆಗಳಲ್ಲಿ ವ್ಯಾಪಕ ನಷ್ಟ ಸಂಭವಿಸಿದ್ದು, ವಿದೇಶಿ ಪ್ರವಾಸಿಗರು ಸೇರಿ ಹಲವು ಮಂದಿ ಮೃತಪಟ್ಟಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಅತ್ಯಂತ ಭೀಕರ ವಿಪತ್ತುಗಳಲ್ಲಿ ಒಂದಾದ ಈ ಪ್ರವಾಹವು ನೇಪಾಳವನ್ನು ಅಲುಗಾಡಿಸಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆ ಪ್ರದೇಶವನ್ನು ಅಪ್ಪಳಿಸಿದ ನಂತರ ಪ್ರವಾಹದ ಅಬ್ಬರ ಕಡಿಮೆಯಾಯಿತು. ಜನರು, ಪ್ರಾಣಿಗಳು, ಕಟ್ಟಡಗಳು ಮತ್ತು ಸಾರ್ವಜನಿಕ ಮೂಲಸೌಕರ್ಯಗಳು ಕೊಚ್ಚಿಕೊಂಡು ಹೋಗಿವೆ ಎಂದು ನೇಪಾಳದ ಅಧಿಕಾರಿಗಳು ತಿಳಿಸಿದ್ದಾರೆ.
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ:
288 ಭಾರತೀಯರು ಇನ್ನೂ ಪತ್ತೆಯಾಗಿಲ್ಲ. ಮಾನಸ ಸರೋವರ ಯಾತ್ರೆ ಕೈಗೊಂಡಿರುವ ಸುಮಾರು 200 ಜನರನ್ನು ಸ್ಥಳಾಂತರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವಿದೇಶಾಂಗ ಸಚಿವಾಲಯ ದೃಢಪಡಿಸಿದೆ. ಪ್ರವಾಹದಿಂದ ಹಾನಿಗೊಳಗಾದ ನೇಪಾಳಕ್ಕೆ ಭಾರತವು ಸೌರದೀಪಗಳು, ನೈರ್ಮಲ್ಯ ಕಿಟ್‌ಗಳು ಮತ್ತು ಎಂಟು ಟನ್‌ಗಳಿಗೂ ಹೆಚ್ಚು ಔಷಧ ಮತ್ತು ಆಹಾರ ಸೇರಿ 48 ಟನ್ ಸಾಮಗ್ರಿಗಳೊಂದಿಗೆ ಎರಡು ಮಿಲಿಟರಿ ವಿಮಾನಗಳನ್ನು ಕಳುಹಿಸಿದೆ ಎಂದು ಸಚಿವಾಲಯ ತಿಳಿಸಿದೆ.
ನೇಪಾಳ ಜಲಪ್ರಳಯದಲ್ಲಿ 80 ಈಶಾ ಯಾತ್ರಿಕರು ನಾಪತ್ತೆ: ಭಾವುಕರಾಗಿ ಕಣ್ಣೀರಿಟ್ಟ ಸದ್ಗುರು
ಪ್ರವಾಹದಿಂದ ಸೇತುವೆಗಳು ಮತ್ತು ರಸ್ತೆಗಳು ಹಾನಿಗೊಳಗಾಗಿದ್ದು, ನೇಪಾಳದ ಭದ್ರತಾ ಪಡೆಗಳು ಹೆಲಿಕಾಪ್ಟರ್‌ಗಳು ಮತ್ತು ಭೂ ತಂಡಗಳನ್ನು ಬಳಸಿಕೊಂಡು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಅಗತ್ಯವಿರುವ ಜನರಿಗೆ ವೈದ್ಯಕೀಯ ನೆರವು, ತಾತ್ಕಾಲಿಕ ಆಶ್ರಯಗಳು, ಆಹಾರ, ನೀರು ಮತ್ತು ಔಷಧಗಳ ರೂಪದಲ್ಲಿ ಸಹಾಯವನ್ನು ಒದಗಿಸಲಾಗುತ್ತಿದೆ.
ನೇಪಾಳ ಮತ್ತು ಟಿಬೆಟ್‌ನಲ್ಲಿ ಸಂಭವಿಸಿರುವ ಈ ಮಹಾವಿಪತ್ತು ಕೇವಲ ಒಂದು ಬಾರಿಯ ಘಟನೆಯಲ್ಲ. ದಿನೇ ದಿನೆ ಅತ್ಯಂತ ಅಸ್ಥಿರವಾಗುತ್ತಿರುವ ಹಿಮಾಲಯದ ಮಂಜುಗಡ್ಡೆ ವ್ಯವಸ್ಥೆ ನಿರಂತರ ಬೆದರಿಕೆಯನ್ನು ಒಡ್ಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2025ರ ಆಗಸ್ಟ್‌ನಲ್ಲಿ ಟಿಬೆಟ್‌ನಲ್ಲಿರುವ ಹಿಮನದಿಯ ಹೆಚ್ಚಿನ ತಾಪಮಾನದಿಂದಾಗಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಕಂಡು ಬಂತು. ಇದರಲ್ಲಿ ಒಂಭತ್ತು ಜನರು ಮೃತಪಟ್ಟರು. ನೇಪಾಳ ಮತ್ತು ಚೀನಾವನ್ನು ಸಂಪರ್ಕಿಸುವ ಸೇತುವೆ ಸೇರಿ ಹಲವು ಮೂಲಸೌಕರ್ಯಗಳು ಹಾನಿಗೊಳಗಾದವು.