ಕಠ್ಮಂಡು: ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ (Sushila Karki) ಶುಕ್ರವಾರ (ಸೆಪ್ಟೆಂಬರ್ 12) ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ 72 ವರ್ಷ ವಯಸ್ಸಿನ ಸುಶೀಲಾ ಕರ್ಕಿ ನೇಪಾಳದ ಮೊದಲ ಮಹಿಳಾ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೇಪಾಳದ ರಾಷ್ಟ್ರಪತಿ ಭವನದಲ್ಲಿ ಕಾರ್ಯಕ್ರಮ ನಡೆಯಿತು. ನೇಪಾಳದ ಇತಿಹಾಸದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಮೊದಲ ಮಹಿಳೆ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ.
2026ರ ಮಾರ್ಚ್ 5ರಂದು ಸಾರ್ವತ್ರಿಕ ಚುನಾವಣೆ ನಡೆಸಲು ಈ ವೇಳೆ ನಿರ್ಧರಿಸಲಾಗಿದೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಕುಲಮನ ಘಿಸಿಂಗ, ಸುಡಾನ್ ಗುರುಂಗ್, ಅಧ್ಯಕ್ಷ ರಾಮಚಂದ್ರ ಪೌಡೆಲ್, ಉಪಾಧ್ಯಕ್ಷ ರಾಮ ಸಹಾಯ್ ಯಾದವ್, ಮುಖ್ಯ ನ್ಯಾಯಮೂರ್ತಿ ಪ್ರಕಾಶ್ ಮಾನ್ ಸಿಂಗ್ ರಾವತ್ ಮತ್ತಿತರರು ಉಪಸ್ಥಿತರಿದ್ದರು. ಜೆನ್ ಝೀ ತಲೆಮಾರಿನ ತೀವ್ರ ಪ್ರತಿಭಟನೆಯ ಬಳಿಕ ಕೆ.ಪಿ. ಶರ್ಮಾ ಒಲಿ (KP Sharma Oli) ಪ್ರಧಾನಿ ಹುದ್ದೆ ರಾಜೀನಾಮೆ ಸಲ್ಲಿಸಿದ್ದರು. ಅದಾದ ಬಳಿಕ ಹೋರಾಟಗಾರರು ಸುಶೀಲಾ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು.
ಭ್ರಷ್ಟಾಚಾರ ಮತ್ತು ನಿರುದ್ಯೋಗದಿಂದ ಬೇಸತ್ತ ಸಾರ್ವಜನಿಕರು ನಡೆಸಿದ ಸಾಮೂಹಿಕ ಪ್ರತಿಭಟನೆಗಳ ನಂತರ ಈ ಬೆಳವಣಿಗೆ ನಡೆಯಿತು. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆಗೆ ಕನಿಷ್ಠ 51 ಮಂದಿ ಬಲಿಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: Nepal Gen Z Protest: ಹೋಗಿದ್ದು ತೀರ್ಥಯಾತ್ರೆಗೆ; ಆಗಿದ್ದು ಅಂತ್ಯ, ನೇಪಾಳಕ್ಕೆ ತೆರಳಿದ್ದ ದಂಪತಿಯ ದುರಂತ ಕಥೆಯಿದು
ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು
ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಸುಶೀಲಾ ಜತೆಗೆ ಇನ್ನೂ ಹಲವು ಸಂಭಾವ್ಯ ಅಭ್ಯರ್ಥಿಗಳ ಹೆಸರು ಕೇಳಿ ಬಂದಿತ್ತು. ನೇಪಾಳ ವಿದ್ಯುತ್ ಮಂಡಳಿ ಮಾಜಿ ಸಿಇಒ ಕುಲಮನ ಘಿಸಿಂಗ, ಕಠ್ಮಂಡು ಮೇಯರ್ ಬಾಲೇಂದ್ರ ಶಾ ಮತ್ತಿತರ ಹೆಸರೂ ರೇಸ್‌ನಲ್ಲಿತ್ತು. ಕೊನೆಗೆ ಸುಶೀಲಾ ಅವರಿಗೆ ಈ ಪ್ರತಿಷ್ಠಿತ ಹುದ್ದೆ ಒಲಿದಿದೆ. 2016 ಮತ್ತು 2017 ರ ನಡುವೆ ನೇಪಾಳದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಸುಶೀಲಾ ಕರ್ಕಿ ತಮ್ಮ ಅವಧಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಕಠಿಣ ನಿಲುವು ತಳೆದಿದ್ದರು.
ಯಾರು ಈ ಸುಶೀಲಾ ಕರ್ಕಿ?
2016ರಲ್ಲಿ ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಸಾಂವಿಧಾನಿಕ ಮಂಡಳಿಯ ಶಿಫಾರಸಿನ ಮೇರೆಗೆ ಅಂದಿನ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ ಅವರು ಕರ್ಕಿ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದ್ದರು. ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದ ಕರ್ಕಿ ಯಾವುದೇ ರಾಜಕೀಯ ಪಕ್ಷದ ಹಿನ್ನೆಲೆ ಹೊಂದಿಲ್ಲ.
ಕರ್ಕಿ 2006ರ ಸಾಂವಿಧಾನಿಕ ಕರಡು ಸಮಿತಿಯ ಭಾಗವಾಗಿದ್ದರು ಮತ್ತು 2009ರಲ್ಲಿ ಸುಪ್ರೀಂ ಕೋರ್ಟ್‌ನ ತಾತ್ಕಾಲಿಕ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಮುಂದಿನ ವರ್ಷ ಖಾಯಂ ಆದರು. 2016ರಲ್ಲಿ ಅವರು ಔಪಚಾರಿಕವಾಗಿ ಉನ್ನತ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದರು.