ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳದಲ್ಲಿ ಮತ್ತೆ ಮುನಿದ ಪ್ರಕೃತಿ: ಕಾಳಿ ಗಂಡಕಿ ನದಿಗೆ ಕುಸಿದ ಪರ್ವತ; ವಿಡಿಯೊ ವೈರಲ್

Mountain Collapses into River in Nepal: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ನೇಪಾಳದಲ್ಲಿ ಮುಸ್ತಾಂಗ್ ಜಿಲ್ಲೆಯ ಲೇಟೆ ಪ್ರದೇಶದ ಬಳಿ ಪರ್ವತದ ಬೃಹತ್ ಭಾಗವೊಂದು ಕೆಲವೇ ಸೆಕೆಂಡುಗಳಲ್ಲಿ ಕುಸಿದು ಕಾಳಿ ಗಂಡಕಿ ನದಿಗೆ ಬಿದ್ದಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಭೂಕುಸಿತ ಮತ್ತು ಪ್ರವಾಹದ ಅಪಾಯದ ಬಗ್ಗೆ ಆತಂಕ ಹೆಚ್ಚಾಗಿದೆ.

ನೇಪಾಳದಲ್ಲಿ ಗಂಡಕಿ ನದಿಗೆ ಕುಸಿದ ಪರ್ವತ

ಕಠ್ಮಂಡು, ಸೆ. 28: ಭಾರಿ ಮಳೆ(Heavy Rain) ಹಾಗೂ ಪ್ರವಾಹದಿಂದ ತತ್ತರಿಸಿರುವ ನೇಪಾಳ (Nepal)ದಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಮುಸ್ತಾಂಗ್ ಜಿಲ್ಲೆಯ ಲೇಟೆ ಪ್ರದೇಶದ ಬಳಿ ಪರ್ವತದ ದೊಡ್ಡ ಭಾಗವೊಂದು ಕೆಲವೇ ಸೆಕೆಂಡುಗಳಲ್ಲಿ ಕುಸಿದು ಕಾಳಿ ಗಂಡಕಿ ನದಿಗೆ (Kali Gandaki River) ಬಿದ್ದಿದೆ. ಈ ದೃಶ್ಯವನ್ನು ಸ್ಥಳೀಯರು ಹಾಗೂ ಯಾತ್ರಿಕರು ಸೆರೆಹಿಡಿದಿದ್ದು, ವಿಡಿಯೊಗಳುಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಪರ್ವತ ಕುಸಿತದಿಂದ ಉಂಟಾದ ಅವಶೇಷಗಳು ನದಿಯ ಹರಿವಿಗೆ ಅಡ್ಡಿಯಾಗಿದ್ದು, ಕೆಲಕಾಲ ಕಾಳಿ ಗಂಡಕಿ ನದಿಯ ಹರಿವಿಗೆ ತಡೆ ಒಡ್ಡಿತ್ತು ಎನ್ನಲಾಗಿದೆ. ಅಲ್ಲದೇ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಕಾಳಿ ಗಂಡಕಿ ಸೇರಿ ಹಲವು ನದಿಗಳ ನೀರಿನ ಮಟ್ಟ ಅಪಾಯಕಾರಿಯಾಗಿ ಏರಿದೆ.

ವೈರಲ್‌ ವಿಡಿಯೊ:



24 ಮಂದಿ ಸಾವು, 14 ಮಂದಿ ನಾಪತ್ತೆ

ನೇಪಾಳದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಮತ್ತು ಭೂಕುಸಿತದಿಂದ ಇದುವರೆಗೆ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 14 ಮಂದಿ ನಾಪತ್ತೆಯಾಗಿದ್ದಾರೆ. ಗಂಡಕಿ ಪ್ರಾಂತ್ಯದ ಮ್ಯಾಗ್ದಿ, ಬಾಗ್ಲುಂಗ್, ಪರ್ಬತ್, ಮನಾಂಗ್ ಸೇರಿ ಹಲವು ಪ್ರದೇಶಗಳು ತೀವ್ರವಾಗಿ ಹಾನಿ ಗೊಂಡಿದ್ದು, ನೂರಾರು ಮನೆಗಳು ಹಾನಿಗೊಳಗಾಗಿದ್ದು, ಸೇತುವೆಗಳು, ರಸ್ತೆಗಳು ಹಾಗೂ ವಿದ್ಯುತ್ ಮೂಲಸೌಕರ್ಯಕ್ಕೂ ಹಾನಿಯಾಗಿದೆ.

ನೇಪಾಳದಲ್ಲಿ ಮತ್ತೆ ಮಳೆ ಆರ್ಭಟ: ಹೆಚ್ಚಾದ ಪ್ರವಾಹ, ಭೂಕುಸಿತದ ಭೀತಿ

ಇದೇ ವೇಳೆ ಮನಾಂಗ್ ಜಿಲ್ಲೆಯ ಹಿಮ್ಲುಂಗ್ ಹಿಮಾಲಯ ಪ್ರದೇಶದಲ್ಲಿ ಹಿಮಪಾತ ಸಂಭವಿಸಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತಷ್ಟು ಮಂದಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಪ್ರತಿಕೂಲ ಹವಾಮಾನದಿಂದ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ.

ನೇಪಾಳದಲ್ಲಿ ಕುಸಿದ ಮನೆ:



ಭಾರತಕ್ಕೂ ಆತಂಕವೇ?

ನೇಪಾಳದ ನದಿಗಳು ಭಾರತದ ಗಂಗಾ ನದಿ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುವುದರಿಂದ ಇಂತಹ ಪ್ರವಾಹ ಪರಿಸ್ಥಿತಿಯನ್ನು ಭಾರತವೂ ಗಮನಿಸುತ್ತಿದೆ. ಕಾಳಿ ಗಂಡಕಿ ಮತ್ತು ತ್ರಿಶೂಲಿ ನದಿಗಳು ಮುಂದೆ ನಾರಾಯಣಿ ನದಿಯಾಗಿ ಭಾರತ ಪ್ರವೇಶಿಸುತ್ತವೆ. ಆದರೆ ನೇಪಾಳದ ಪ್ರಸ್ತುತ ಪರ್ವತ ಕುಸಿತದಿಂದ ಭಾರತದಲ್ಲಿ ಇದೇ ರೀತಿಯ ಪ್ರವಾಹ ಉಂಟಾಗುತ್ತದೆ ಎಂದು ನೇರವಾಗಿ ಹೇಳಲು ಸಾಧ್ಯವಿಲ್ಲ. ನದಿಯ ನೀರಿನ ಮಟ್ಟ ಹಾಗೂ ಕೆಳಹರಿವಿನ ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸುವುದು ಮುಖ್ಯ.

ನೇಪಾಳದಲ್ಲಿನ ಭೀಕರ ಪ್ರವಾಹಕ್ಕೆ ಕುಸಿದ ಮನೆ:



ನೇಪಾಳದಲ್ಲಿ ಭಾರಿ ಮಳೆ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ, ಭೂಕುಸಿತ ಮತ್ತು ಮತ್ತಷ್ಟು ಪರ್ವತ ಕುಸಿತದ ಅಪಾಯ ಇನ್ನೂ ಮುಂದುವರಿದಿದೆ ಎಂದು ವರದಿಗಳು ಸೂಚಿಸುತ್ತಿವೆ.